Advertisement

ಚಳ್ಳಕೆರೆಯಲ್ಲಿ ಶೀಘ್ರ ಜಿಟಿಟಿಸಿ ಕೇಂದ್ರ

04:58 PM Sep 18, 2018 | Team Udayavani |

ಚಳ್ಳಕೆರೆ: ಬರಗಾಲ ಪೀಡಿತ ಪ್ರದೇಶವಾದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಮನಗಂಡ ರಾಜ್ಯ ಸರ್ಕಾರ 44 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಉಪಕರಣಾಗಾರ ತರಬೇತಿ (ಜಿಟಿಟಿಸಿ) ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿದೆ. ಅನುದಾನವನ್ನೂ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಕಟ್ಟಡ
ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

Advertisement

ನಗರದ ಶಾಸಕರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಭಾಗದ
ಕೃಷಿಕರು ಹಾಗೂ ಇನ್ನಿತರ ಸಮುದಾಯಗಳ ನಿರುದ್ಯೋಗಿಗಳಿಗೆ ಅನುಕೂಲವಾಗುವಂತೆ ಜಿಟಿಟಿಸಿ ಕೇಂದ್ರ ಸ್ಥಾಪನೆ ಮಾಡುವಂತೆ 2016ರಲ್ಲಿ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೆ.

2018ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯುವಷ್ಟರಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಚುನಾವಣೆಯಲ್ಲಿ ಪುನರಾಯ್ಕೆಯಾದ ನಾನು ಶತಾಯಗತಾಯ ಈ ಯೋಜನೆಯನ್ನು ಜಾರಿಗೊಳಿಸಿದಲ್ಲಿ ಕ್ಷೇತ್ರದ ಸಾವಿರಾರು ನಿರುದ್ಯೋಗಿಗಳಿಗೆ ವಿಶೇಷವಾಗಿ ರೈತರ ಮಕ್ಕಳಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂಬ ದೃಷ್ಟಿಯಿಂದ ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದೆ. ಸಿದ್ದರಾಮಯ್ಯನವರ ಸಹಕಾರದಿಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಅಲ್ಲದೆ ಅನುದಾನವನ್ನೂ ಬಿಡುಗಡೆಗೊಳಿಸಿದ್ದಾರೆ. ಶೀಘ್ರದಲ್ಲೇ ಜಿಟಿಟಿಸಿ ಕಟ್ಟಡ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕ್ಷೇತ್ರದ ಜನತೆಯ ಪರವಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.  

ಬಳ್ಳಾರಿ ರಸ್ತೆಯ ಸರ್ಕಾರಿ ಗೋಮಾಳದಲ್ಲಿ ಸುಮಾರು 10 ಎಕರೆ ಜಾಗದಲ್ಲಿ ಜಿಟಿಟಿಸಿ ಕೇಂದ್ರ ನಿರ್ಮಿಸಲು ನಿರ್ಧರಿಸಲಾಗಿದೆ. ಈಗಾಗಲೇ ಸರ್ಕಾರಕ್ಕೆ ವರದಿ ಕಳುಹಿಸಿಕೊಟ್ಟಿದ್ದು ಅನುಮೋದನೆ ದೊರೆತಿದೆ. ಜಿಟಿಟಿಸಿ
ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಪಾಸ್‌ ಆದ ಮತ್ತು ಫೇಲ್‌ ಆದ ಎಲ್ಲರೂ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆದವರಿಗೆ ಪ್ರಮಾಣಪತ್ರ ನೀಡುವ ಜೊತೆಗೆ ಉದ್ಯೋಗಾವಕಾಶವನ್ನೂ ಒದಗಿಸಲಾಗುವುದು. ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಜವಳಿ ಪಾರ್ಕ್‌ ನಿರ್ಮಿಸಲು ಸರ್ಕಾರ ಒಪ್ಪಿಗೆ ನೀಡಿದ್ದು, ಈ ಕಾರ್ಯ ಸಹ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು. 

ಮೈತ್ರಿ ಸರ್ಕಾರ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುತ್ತಿವೆ. ಮುಂದಿನ ದಿನಗಳಲ್ಲಿ
ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿ ಸಲಾಗುವುದು. ಕ್ಷೇತ್ರದ ಜನತೆಯ ವಿಶ್ವಾಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.

Advertisement

ನಾನು ಕಳೆದ ಅವಧಿಯಲ್ಲಿ ಶಾಸಕನಾಗಿ ನೀಡಿದ್ದ ಚುನಾವಣಾ ಭರವಸೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಅವಧಿಯಲ್ಲೂ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಟಿ. ರಘುಮೂರ್ತಿ, ಶಾಸಕರು. 

Advertisement

Udayavani is now on Telegram. Click here to join our channel and stay updated with the latest news.

Next