Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಶೀಘ್ರ ಗ್ರೌಂಡ್‌ ರಿಪೋರ್ಟ್‌

04:16 PM Oct 20, 2019 | Team Udayavani |

ಕಾರವಾರ: ಪ್ರವಾಸೋದ್ಯಮ ಇಲಾಖೆ ಕೊರತೆಗಳನ್ನು ಅಧ್ಯಯನ ಮಾಡುತ್ತಿದ್ದೇನೆ. ನಾನು ಈಗ ಸಚಿವ ಎನ್ನುವುದಕ್ಕಿಂತ ವಿದ್ಯಾರ್ಥಿ ಎನ್ನಬಹುದು. 100 ದಿನಗಳಲ್ಲಿ 30 ಜಿಲ್ಲೆ ಸುತ್ತಿ ಗ್ರೌಂಡ್‌ ರಿಪೋರ್ಟ್‌ ರೆಡಿ ಮಾಡಬೇಕಿದೆ. 2020ಕ್ಕೆ ಹೊಸ ಪ್ರವಾಸೋದ್ಯಮ ನೀತಿ ರೂಪಿಸಬೇಕಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಸಕ್ಕರೆ ಇಲಾಖೆ ಪ್ರಗತಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ 40 ಜಲಪಾತಗಳಿವೆ. 30 ಪ್ರಾಣಿ ಅರಣ್ಯಧಾಮ, ಕಾಯ್ದಿಟ್ಟ ಅರಣ್ಯ ಪ್ರದೇಶಗಳಿವೆ. 17 ಗಿರಿ ಶ್ರೇಣಿಗಳಿವೆ, ನೂರಾರು ಹೆರಿಟೇಜ್‌ ಕೇಂದ್ರಗಳಿವೆ. ಇವುಗಳನ್ನೇ ಮಾರ್ಕೆಟಿಂಗ್‌ ಮಾಡಿ ಪ್ರವಾಸಿಗರನ್ನು ಸೆಳೆಯಬೇಕಿದೆ. ಯುವಕರಿಗೆ ಇದರಲ್ಲೇ ಉದ್ಯೋಗ ಸೃಷ್ಟಿಸಬೇಕಿದೆ.

ಹಾಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲೇಬೇಕಿದೆ. ಪ್ರವಾಸೋದ್ಯಮ ಸರ್ಕಾರಿ ಹಿಡಿತದ ಖಾಸಗೀಕರಣ ಮಾಡುವ ಯೋಚನೆ ಇದೆ. ಹಾಗಾಗಿ ಸದ್ಯದಲ್ಲೇ ಪ್ರವಾಸೋದ್ಯಮದಲ್ಲಿ ಹೂಡಿಕೆದಾರರ ಸಮಾವೇಶ ಮಾಡುವೆ ಎಂದರು. ಸ್ಥಳೀಯರಿಗೆ ಉದ್ಯೋಗ ನೀಡುವ ಸಹಭಾಗಿತ್ವದ ಯೋಜನೆ ರೂಪಿಸಲು ಯೋಚಿಸಲಾಗುತ್ತಿದೆ ಎಂದರು. ಆಗ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯರ ಅಡ್ಡಿ ಆತಂಕಗಳಿರುವುದಿಲ್ಲ ಎಂದರು.

ಉತ್ತರ ಕನ್ನಡ ಜಿಲ್ಲೆಗೆ 169 ಕೋಟಿ ರೂ. ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಇದರಲ್ಲಿ 155 ಕೋಟಿ ರೂ.ಖರ್ಚಾಗಿದೆ. ಉಳಿದ ಹಣಕ್ಕೆ ಕಾಮಗಾರಿಗಳು ನಡೆದಿವೆ. 2019-20ರಲ್ಲಿ 4.25 ಕೋಟಿ ರೂ. ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇನೆ. 2.25 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ ಎಂದು ಸಚಿವ ಸಿ.ಟಿ. ರವಿ ವಿವರಿಸಿದರು.

ಎಸ್‌ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದ ಯುವಕರಿಗೆ 732 ಪ್ರವಾಸಿ ವಾಹನಗಳನ್ನು ಸಬ್ಸಿಡಿಯಲ್ಲಿ ನೀಡಲಾಗಿದೆ. 38 ಯಾತ್ರಿ ನಿವಾಸಗಳು ಜಿಲ್ಲೆಗೆ ಮಂಜೂರಾಗಿವೆ. ಇದರಲ್ಲಿ 12 ಯಾತ್ರಿ ನಿವಾಸಗಳ ಕೆಲಸ ಮುಗಿದಿದೆ ಎಂದರು.

Advertisement

ಗ್ರಾಮಗಳ ಇತಿಹಾಸ, ಸ್ಮಾರಕ ಅಧ್ಯಯನ: ಉತ್ತರ ಕನ್ನಡದಲ್ಲಿ 472 ಕಂದಾಯ ಗ್ರಾಮಗಳಿವೆ. ಈ ಗ್ರಾಮಗಳ ಇತಿಹಾಸ, ಸ್ಮಾರಕ ಅಧ್ಯಯನ ಯೋಜನೆ ರೂಪಿಸಲಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುವುದು. ಆ ಮೂಲಕ ಜನರಿಗೆ ಇತಿಹಾಸ ಪ್ರಜ್ಞೆ ನೀಡಲಾಗುವುದು. ಭಾರತೀಯರಿಗೆ ಸಾಕಷ್ಟು ಇತಿಹಾಸವಿದೆ. ಇಲ್ಲಿ ಸಾಕಷ್ಟು ರಾಜರು ಆಳಿದ್ದಾರೆ. ಸಾಕಷ್ಟು ಸ್ಮಾರಕಗಳಿವೆ.

ಅವುಗಳಲ್ಲೆವನ್ನು ನಾವು ಉಳಿಸಿಕೊಳ್ಳಬೇಕು. ಅವುಗಳ ಬಗ್ಗೆ ಹೆಮ್ಮೆ ಪಡಬೇಕು. ಆ ಮೂಲಕ ಪ್ರವಾಸೋದ್ಯಮ ಕಟ್ಟಬೇಕಿದೆ. ಯಾವುದೇ ಇತಿಹಾಸವಿಲ್ಲದ ದೇಶಗಳು 300 ವರ್ಷಗಳ ಹಿಂದಿನ ಅವರ ಇತಿಹಾಸ ಹೇಳಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಆದರೆ ಭಾರತಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, ಅದನ್ನು ನಾವು ಅಧ್ಯಯನ ಮಾಡಬೇಕಿದೆ. ಸತ್ಯವನ್ನು ಜನರಿಗೆ ತಿಳಿಸಬೇಕಿದೆ ಎಂದರು. ಸಂಸದ ಅನಂತಕುಮಾರ್‌ ಹೆಗಡೆ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next