Advertisement

ಶೀಘ್ರ ಇನ್ನಷ್ಟು ಹಕ್ಕು ಪತ್ರ ವಿತರಣೆ: ಮೇಯರ್‌

09:53 AM Oct 03, 2017 | Team Udayavani |

ಲಾಲ್‌ಬಾಗ್‌: ಮಂಗಳಾ ದೇವಿಯ ಶಾಂತಾ ಆಳ್ವ ಕಾಲನಿಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ ಸುಮಾರು 32 ಫಲಾನುಭವಿ ಕುಟುಂಬಗಳಿಗೆ ಮಹಾ ನಗರ ಪಾಲಿಕೆ ವತಿಯಿಂದ ಹಕ್ಕುಪತ್ರಗಳನ್ನು ಸೋಮವಾರ ಪಾಲಿಕೆಯಲ್ಲಿ ಹಸ್ತಾಂತರಿಸಲಾಯಿತು. ಜತೆಗೆ ಪಾಲಿಕೆಯ ನಗರ ಬಡತನ ನಿರ್ಮೂಲನ ಕೋಶದ ಆಶ್ರಯದಲ್ಲಿ 130 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

Advertisement

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಬಹಳ ವರ್ಷಗಳಿಂದ ಬಾಕಿಯಾಗಿದ್ದ ಹಕ್ಕುಪತ್ರ ವಿತರಣೆ ನನ್ನ ಅವಧಿಯಲ್ಲಿ ನಡೆಯುತ್ತಿರುವುದು ಸಂತೋಷ ತಂದಿದೆ. ಮುಂದಿನ ದಿನದಲ್ಲಿ ನಗರದ ಇತರ ಕಡೆಗಳಲ್ಲಿ ಸಮಸ್ಯೆಯನ್ನು ನಿವಾರಿಸಿ ಹಕ್ಕುಪತ್ರ ನೀಡುವ ಕಾರ್ಯ ನಡೆಸಲಿದ್ದು, ಪಾಲಿಕೆ ವ್ಯಾಪ್ತಿಯ ಜನಸಾಮಾನ್ಯರ ಎಲ್ಲ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು ಎಂದು ಹೇಳಿದರು.

ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ಸುದೀರ್ಘ‌ ಕಾಲದ ಬೇಡಿಕೆಯಾಗಿರುವ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಆಯೋಜಿಸುವ ಮೂಲಕ ಪಾಲಿಕೆ ಅತ್ಯುತ್ತಮ ಆಡಳಿತ ನಡೆಸುತ್ತಿದೆ ಎಂದರು.

ವ್ಯಾಪಾರ ವಲಯ ಬಳಸಿ
ಬೀದಿಬದಿ ವ್ಯಾಪಾರಿಗಳಿಗೆ ಮನಪಾದಿಂದ ಗುರುತಿನ ಚೀಟಿ ನೀಡುವ ಮಹತ್ವಪೂರ್ಣ ಕಾರ್ಯವನ್ನು ಮಾಡಿದೆ.ಜತೆಗೆ ಲೇಡಿಗೋಶನ್‌ ಆಸ್ಪತ್ರೆ ಎದುರು ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಥಳ ನಿಗದಿಪಡಿಸಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಇನ್ನೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪಾಲಿಕೆ ಸಿದ್ಧವಿದ್ದು, ಮನಪಾದ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಂದಾಯ, ಆರೋಗ್ಯ ಇಲಾಖೆಯ ಪ್ರತಿನಿಧಿಗಳು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಪರ ಹೋರಾಡುತ್ತಿರುವ ಪ್ರೊ| ರೀಟಾ ನೊರೊನ್ನಾ ನೇತೃತ್ವದಲ್ಲಿ ಬೇಡಿಕೆಗಳನ್ನು
ಸಲ್ಲಿಸಿದ್ದಾರೆ. ಇದನ್ನು ಈಡೇರಿಸುವ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಆದರೆ ಅಲ್ಲಿಯೇ ಅವರು ವ್ಯಾಪಾರ
ನಡೆಸಬೇಕು. ತಪ್ಪಿದಲ್ಲಿ ಪಾಲಿಕೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾದೀತು ಎಂದು ಹೇಳಿದರು.

ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನಾಗವೇಣಿ ಮಾತನಾಡಿ, ಎಲ್ಲರೂ ಒಂದು ಕಡೆ ವ್ಯಾಪಾರ ನಡೆಸಲು ಆರಂಭಿಸಿದರೆ
ಜನರು ಸಹಜವಾಗಿ ಅಲ್ಲಿಗೆ ಬರುತ್ತಾರೆ. ವ್ಯವಸ್ಥೆಯ ಸುಧಾರಣೆಗೆ ಪಾಲಿಕೆಯ ಜತೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು. 

Advertisement

ವಿಪಕ್ಷ ಮುಖಂಡ ಪ್ರೇಮಾನಂದ ಶೆಟ್ಟಿ ಮಾತನಾಡಿ, ಶಾಂತ ಆಳ್ವ ಕಾಲನಿಯಲ್ಲಿನ ದಲಿತರ ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ಮನಪಾದಿಂದ ಅಗತ್ಯ ಹಣವನ್ನು ಬಿಡುಗಡೆ ಮಾಡಿ ಅವರ ಮನೆ ನಿರ್ಮಾಣಕ್ಕೆ ತತ್‌ಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಉಪ ಮೇಯರ್‌ ರಜನೀಶ್‌, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಮನಪಾ ಸದಸ್ಯ ನವೀನ್‌ ಡಿ’ಸೋಜಾ, ಆಯುಕ್ತ ಮಹಮ್ಮದ್‌ ನಝೀರ್‌
ಉಪಸ್ಥಿತರಿದ್ದರು.

ನಿಗದಿತ ಸ್ಥಳದಲ್ಲಿ ವ್ಯಾಪಾರ ಮಾಡದಿದ್ದರೆ ಗುರುತುಚೀಟಿ ರದ್ದು
ಆಯುಕ್ತ ಮಹಮ್ಮದ್‌ ನಝೀರ್‌ ಮಾತನಾಡಿ, ಗುರುತಿನ ಚೀಟಿ ಪಡೆದಿರುವ ಬೀದಿ ಬದಿ ವ್ಯಾಪಾರಿಗಳು ಮುಂದಿನ ಸೋಮವಾರದೊಳಗೆ ಲೇಡಿಗೋಶನ್‌ ಆಸ್ಪತ್ರೆ ಎದುರಿನ ನಿಗದಿತ ಸ್ಥಳದಲ್ಲಿ ವ್ಯಾಪಾರ ಆರಂಭಿಸಬೇಕು. ಇಲ್ಲವಾದಲ್ಲಿ ಗುರುತಿನ ಚೀಟಿ ರದ್ದಾಗಲಿದೆ. ಕಳೆದ ವರ್ಷ ಮೊದಲ ಹಂತದಲ್ಲಿ 208 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಗಿತ್ತು. ಆದರೆ ಅವರು ನಿಗದಿಪಡಿಸಿದ ವಲಯದಲ್ಲಿ ವ್ಯಾಪಾರ ನಡೆಸುತ್ತಿಲ್ಲ. ಅಲ್ಲಿ ವ್ಯಾಪಾರಿಗಳಿಗೆ ಅನುಕೂಲಕರ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್‌ ದೀಪ, ಇಂಟರ್‌ಲಾಕ್‌ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವ್ಯಾಪಾರ ನಡೆಸಿದರೆ ಇನ್ನಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next