Advertisement

ಕಾರ್ಕಳ ಒಳಚರಂಡಿ ಕಾಮಗಾರಿಗೆ ಶೀಘ್ರ ಚಾಲನೆ

10:36 PM Jan 15, 2020 | Sriram |

ಬೆಳೆಯುತ್ತಿರುವ ನಗರಕ್ಕೆ ತುರ್ತು ಅಗತ್ಯವಿದ್ದ ಒಳಚರಂಡಿ, ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಅನುದಾನ ಮಂಜೂರಾಗಿದ್ದು, ದಶಕದ ಬೇಡಿಕೆಯೊಂದು ಈಡೇರುವ ಸಂದರ್ಭ ಬಂದಿದೆ.

Advertisement

ವಿಶೇಷ ವರದಿ- ಕಾರ್ಕಳ: ದಶಕಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ನಗರದ ಒಳಚರಂಡಿ ಕಾಮಗಾರಿಗೆ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ. ಒಳಚರಂಡಿ ಕಾಮ ಗಾರಿಗೆ 13 ಕೋಟಿ ರೂ., ತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣಕ್ಕೆ 2.5 ಕೋಟಿ ರೂ. ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಆದೇಶ ಪ್ರತಿ ದೊರೆತ ತತ್‌ಕ್ಷಣ ಕಾಮಗಾರಿಗೆ ಚಾಲನೆ ದೊರೆಯಲಿದೆ. 1994ರ ವೇಳೆ 50 ಲಕ್ಷ ರೂ. ಅನುದಾನದಲ್ಲಿ ನಗರದ ಒಳಚರಂಡಿ ಕಾಮಗಾರಿ ನಡೆದಿತ್ತು.

ನರಕ ಯಾತನೆ
ನಗರದಲ್ಲಿ ಸುಮಾರು 100ಕ್ಕಿಂತಲೂ ಅಧಿಕ ಮ್ಯಾನ್‌ಹೋಲ್‌ಗ‌ಳಿದ್ದು, ಅವುಗಳು ದುಃಸ್ಥಿತಿಯಲ್ಲಿದೆ. ಹೀಗಾಗಿ ಇರುವ ಒಳಚರಂಡಿಯಲ್ಲಿ ತ್ಯಾಜ್ಯ ಸರಾಗವಾಗಿ ಹರಿಯ ದಂತಾಗಿದೆ. ಕಟ್ಟೆಮಾರ್‌ ಎಂಬಲ್ಲಿ 2.73 ಎಕರೆ ಪ್ರದೇಶದಲ್ಲಿ ಸಂಗ್ರಹವಾಗುವ ಕೊಳಚೆ ಸುತ್ತಮುತ್ತಲಿನ ಜನರ ನೆಮ್ಮದಿಗೆಡಿಸಿದೆ. ದುರ್ವಾಸನೆ, ಸೊಳ್ಳೆ ಕಾಟದಿಂದಾಗಿ ಪರಿಸರದ ಜನತೆ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಹೊಟೇಲ್‌, ಮನೆಗಳ ತ್ಯಾಜ್ಯ ನೀರು ಬ್ಲಾಕ್‌ಗೊಂಡು ತೀರಾ ಸಂಕಟ ತಂದೊಡ್ಡುತ್ತಿದೆ.

ಚರಂಡಿ ವ್ಯವಸ್ಥೆ
ಪ್ರಮುಖ ಸಮಸ್ಯೆಗಳಲ್ಲಿ ಚರಂಡಿ ಸಮಸ್ಯೆಯೂ ಒಂದು. ಇಲ್ಲಿನ ಮುಖ್ಯ ರಸ್ತೆ ಬದಿ ಸಮರ್ಪಕವಾದ ಚರಂಡಿ ಇಲ್ಲದಿರುವುದು ಮತ್ತು ಇದ್ದ ಚರಂಡಿಗಳು ನಿರ್ವಹಣೆ ಇಲ್ಲದೇ ಮಳೆನೀರು ಸರಾಗವಾಗಿ ಹರಿಯದಂತಿದೆ. ಹೀಗಾಗಿ ನಗರದಲ್ಲಿ ಮಳೆ ನೀರು ರಸ್ತೆಯಲ್ಲೆ ಹರಿಯುವುದು ಸಾಮಾನ್ಯ. ಜೋರು ಮಳೆ ಬಂದಲ್ಲಿ ರಸ್ತೆ ಬದಿ ನಡೆದಾಡಲು ಕಷ್ಟಕರವಾಗಿರುತ್ತದೆ.

ಒಳಚರಂಡಿಯ ಪೈಪುಗಳೆಲ್ಲ ಒಡೆದು ಹೋಗಿ ಪೈಪುಗಳ ಕೊಳಚೆ ನೀರು ನಗರ ನಿವಾಸಿಗಳ ಬಾವಿಗೆ ಸೇರಿ ಬಾವಿಯಲ್ಲಿರುವ ನೀರು ಕಲುಷಿತಗೊಂಡಿದೆ. ಈ ಬಾವಿಯ ನೀರು ಉಪಯೋಗಿಸಿದಲ್ಲಿ ಕಾಯಿಲೆಗೆ ತುತ್ತಾಗುವ ಆತಂಕ ಸ್ಥಳೀಯರದ್ದು.

Advertisement

ಕೃಷಿಭೂಮಿ ಹಾಳು
ನಗರದ ಆನೆಕೆರೆ, ಹಿರಿಯಂಗಡಿ, ಅನಂತಶಯನ, ಮಾರ್ಕೆಟ್‌ ರಸ್ತೆ, ಮೂರು ಮಾರ್ಗ, ವೆಂಕಟರಮಣ ದೇವ ಸ್ಥಾನದ ಪರಿಸರ, ಬಂಡಿಮಠ ಮನೆಗಳ ಬಾವಿಗಳ ನೀರು ಕಲುಷಿತಗೊಂಡು ಕೆಲವೆಡೆ ಫ‌ಲವತ್ತಾದ ಕೃಷಿಭೂಮಿ ಹಾಳಾಗಿದೆ. ಬಾವಿಯಿದ್ದರೂ ಬಾವಿ ನೀರು ಉಪಯೋಗಿಸುವಂತಿಲ್ಲ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ. ಆನೆಕೆರೆ ಭಾಗದ ತ್ಯಾಜ್ಯ ನೀರು ಆನೆಕೆರೆ ಮಸೀದಿ ಸಮೀಪ ದೊಡ್ಡ ಪೈಪ್‌ಲೈನ್‌ ಮೂಲಕ ಡಂಪಿಂಗ್‌ ಯಾರ್ಡ್‌ಗೆ ಸೇರುತ್ತದೆ. ಆದರೆ ಮಧ್ಯೆ ಮಧ್ಯೆ ಪೈಪ್‌ನ ಬಿರುಕಿನಿಂದಾಗಿ ತ್ಯಾಜ್ಯದ ನೀರು ಸೋರುತ್ತಿದೆ.

1994ರ ಅವಧಿಯಲ್ಲಿ ಒಳಚರಂಡಿ ಕಾಮಗಾರಿ ನಡೆದ ಪರಿಣಾಮ ಅಂದು ಅಳವಡಿಸಿದ ಪೈಪ್‌ ಶಿಥಿಲವಾಗಿದೆ. ಹೀಗಾಗಿ ನಗರದ ಅಲ್ಲಲ್ಲಿ ಕೊಳಚೆ ನೀರು ಸೋರುತ್ತಿದೆ. ಮಳೆಗಾಲದಲ್ಲಂತೂ ಮ್ಯಾನ್‌ಹೋಲ್‌ ಮೂಲಕ ಕೊಳಚೆ ನೀರು ಕಾರಂಜಿಯಂತೆ ಹೊರ ಚಿಮ್ಮುತ್ತಿದೆ.

ಮೇ ವೇಳೆ ಕಾಮಗಾರಿ ಪೂರ್ಣ
ಕಾಮಗಾರಿ ನಡೆಯುವ ವೇಳೆ ನಗರದ ಹೊಟೇಲ್‌, ಮನೆಗಳ ಕೊಳಚೆ ನೀರು ನಿರ್ವಹಣೆಯದ್ದೇ ಬಲುದೊಡ್ಡ ಸಮಸ್ಯೆಯಾಗಿ ಕಂಡುಬರಲಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಂಜಿನಿಯರ್‌ ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಮೇ ಅಂತ್ಯದ ವೇಳೆ ಕಾಮಗಾರಿ ಮುಗಿಸುವ ಇರಾದೆ ಹೊಂದಿರುವ ಶಾಸಕರು, ಸಂಬಂಧಪಟ್ಟ ಎಂಜಿನಿಯರ್‌, ಗುತ್ತಿಗೆದಾರರು ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ 2 ಬಾರಿ ಸಭೆ ನಡೆಸಿ ಯೋಜನೆ ಅನುಷ್ಠಾನ ಕುರಿತು ಚರ್ಚಿಸಿರುತ್ತಾರೆ. ಕಾಮಗಾರಿ ಪ್ರಾರಂಭವಾಗಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದೆನ್ನುವ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಅಭಿವೃದ್ಧಿ
ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ನಗರದಲ್ಲಿ ಇನ್ನಷ್ಟು ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ.

ಶೀಘ್ರ ಕೆಲಸ ಆರಂಭ
ಒಳಚರಂಡಿ, ಚರಂಡಿ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿ ಕೆಲಸ ಆರಂಭವಾಗಲಿದೆ. ಹೆಚ್ಚು ದಿನ ಮುಖ್ಯರಸ್ತೆಯನ್ನು ಬಂದ್‌ ಮಾಡುವುದು ಕಷ್ಟಕರವಾದ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ 2 ಬಾರಿ ಸಭೆ ನಡೆಸಲಾಗಿದೆ. ಮೇ. 30ರೊಳಗೆ ಎಲ್ಲ ಕಾಮಗಾರಿ ಮುಗಿಸುವ ಯೋಜನೆ ಇದೆ. ಮೊದಲ ಹಂತದಲ್ಲಿ ಹಳೆ ಪೈಪ್‌ಲೈನ್‌ ಮತ್ತು ಮ್ಯಾನ್‌ಹೋಲ್‌ಗ‌ಳನ್ನು ಬದಲಾಯಿಸುವ ಕೆಲಸ, ಎರಡನೇ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ (ಎಸ್‌ಟಿಪಿ ಪ್ಲಾಂಟ್‌) ನಿರ್ಮಾಣ, ಮೂರನೇ ಹಂತದ ಸಂಸ್ಕರಿಸಿದ ತ್ಯಾಜ್ಯ ಪುನರ್‌ ಬಳಕೆ (ಎಸ್‌ಎಸ್‌ಎಲ್‌ಎಂ ಘಟಕ) ಕಾಮಗಾರಿ ಏಕಕಾಲದಲ್ಲಿ ನಡೆಯಲಿದೆ.
ವಿ. ಸುನಿಲ್‌ ಕುಮಾರ್‌,
ಶಾಸಕರು, ಕಾರ್ಕಳ

ಕಲುಷಿತ
ಕಟ್ಟಣಿಗೆ ತೋಡು ಬಳಿ ಬಾವಿ ನೀರು ಕಲುಷಿತವಾಗಿದೆ. ಗದ್ದೆಗೆ ಕೊಳಚೆ ನೀರು ತುಂಬಿ ಬೇಸಾಯ ಮಾಡದಂತಾಗಿದೆ. ಒಳಚರಂಡಿ ನೀರು ತೋಡಿಗೆ ಸಂಪರ್ಕ ಹೊಂದಿರುವುದು ಸಮಸ್ಯೆ ಉಂಟುಮಾಡಿದೆ.
-ಪಲ್ಲವಿ, ಪುರಸಭಾ ಸದಸ್ಯೆ

ವ್ಯವಸ್ಥೆ ಕಲ್ಪಿಸಿ
50 ವರ್ಷಗಳ ದೂರದೃಷ್ಟಿಯಿಟ್ಟುಕೊಂಡು ಒಳಚರಂಡಿ ಕಾಮಗಾರಿ ಕೈಗೊಳ್ಳಬೇಕು. ಮ್ಯಾನ್‌ಹೋಲ್‌ ನಿರ್ಮಾಣದಲ್ಲೂ ಆಧುನಿಕ ತಂತ್ರಜ್ಞಾನ ಅಳವಡಿಸಬೇಕು. ಎಸ್‌ಟಿಪಿ ಘಟಕವನ್ನು ನೀರು ನಿಲ್ಲುವ ಸ್ಥಳದಲ್ಲಿ ಮಾಡದೇ ಅದಕ್ಕೊಂದು ಸರಿಯಾದ ವ್ಯವಸ್ಥೆ ಕಲ್ಪಿಸಬೇಕು.
ಕೆ.ಪಿ. ಶೆಣೈ,
ಮಾಜಿ ಅಧ್ಯಕ್ಷರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next