ಸುಬ್ರಹ್ಮಣ್ಯ/ಕೊಲ್ಲೂರು/ಕಟೀಲು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ಕರಾವಳಿ ಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪ್ರಮುಖ ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ಶೀಘ್ರ ದೇವರ ದರ್ಶನಕ್ಕೆ ಪ್ರತ್ಯೇಕ ಸೌಲಭ್ಯ ಕಲ್ಪಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯು 65 ವರ್ಷ ಮೇಲ್ಪಟ್ಟ ಭಕ್ತರಿಗೆ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ತನ್ನ ಅಧೀನದ ದೇಗುಲಗಳ ಆಡಳಿತ ಮಂಡಳಿಗಳಿಗೆ ಇತ್ತೀಚೆಗೆ ಆದೇಶ ನೀಡಿತ್ತು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಾಜಗೋಪುರ ಬಳಿ ವಿಶೇಷವಾಗಿ ಹಿರಿಯ ನಾಗರಿಕರ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಹಿರಿಯ ನಾಗರಿಕರು ಸಾಲಿನಲ್ಲಿ ನಿಂತು ಕಾಯದೆ ನೇರವಾಗಿ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅವರು ಶೀಘ್ರವಾಗಿ ಸೇವೆಗಳನ್ನು ನೆರವೇರಿಸಿ ಪ್ರಸಾದ ಭೋಜನ ಸ್ವೀಕರಿಸಬಹುದಾಗಿದೆ.
ಕೊಲ್ಲೂರು: ಕೊಲ್ಲೂರು ದೇಗುಲದಲ್ಲಿ ಹಿರಿಯ ನಾಗರಿಕರ ಆಧಾರ್ ಕಾರ್ಡ್ ಪರಿಶೀಲಿಸಿ ದೇವರ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಟೀಲು: ಕಟೀಲು ದೇವಸ್ಥಾನದಲ್ಲಿ ಶುಕ್ರವಾರ, ರವಿವಾರ ಮಾತ್ರ ಭಕ್ತರ ಸಂಖ್ಯೆ ಹೆಚ್ಚು ಇರುವುದರಿಂದ ಅಂದು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಬಾಕಿ ದಿನಗಳಲ್ಲಿ ಭಕ್ತರು ಬಂದ ಕೂಡಲೇ ದೇವಿಯ ದರ್ಶನಕ್ಕೆ ಅವಕಾಶವಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.
ಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾರಾಂತ್ಯದ ಶನಿವಾರ ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನ ಕಂಡುಬಂದಿದೆ. ಸರಕಾರಿ ಬಸ್‌ಗಳಲ್ಲಿ ಮಹಿಳೆ ಯರ ಆಗಮನ ಈ ವಾರವೂ ಅಧಿಕ ಸಂಖ್ಯೆಯಲ್ಲಿತ್ತು.