Advertisement

ಫ‌ಟಾಫ‌ಟ್‌ ಅಡುಗೆ

06:23 PM Oct 17, 2019 | mahesh |

ಬೆಳಗಿನ ಬಿಡುವಿಲ್ಲದ ಸಮಯದಲ್ಲಿ ತಿಂಡಿ ಅಥವಾ ಲಂಚ್‌ ಬಾಕ್ಸ್‌ಗೆ ಫ‌ಟಾಫ‌ಟ್‌ ಅಂತ ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ಸರಳ‌ವಾಗಿ ತಯಾರಿಸುವ ರುಚಿಕರ ಹಾಗೂ ಆರೋಗ್ಯಕರ ಕೆಲವು ರೆಸಿಪಿಗಳು ಇಲ್ಲಿವೆ.

Advertisement

ಅವಲಕ್ಕಿ ಒಗ್ಗರಣೆ
ಬೇಕಾಗುವ ಸಾಮಗ್ರಿ: ಅವಲಕ್ಕಿ – ಒಂದೂವರೆ ಕಪ್‌, ಈರುಳ್ಳಿ- 2, ಟೊಮೆಟೊ- 1, ಬೆಲ್ಲಹುಡಿ- 1 ಚಮಚ, ಕಡಲೆಬೇಳೆ-ಉದ್ದಿನಬೇಳೆ- 1 ಚಮಚ, ಎಳ್ಳು- 1 ಚಮಚ, 2 ಚಮಚ ಕಡಲೆಬೀಜ, ಅರಸಿನ ಹುಡಿ, ಕೊತ್ತಂಬರಿಸೊಪ್ಪು , ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಅವಲಕ್ಕಿಯನ್ನು ತೊಳೆದು ಹಿಂಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಬೀಜ, ಉದ್ದಿನಬೇಳೆ, ಕಡಲೆಬೇಳೆ, ಎಳ್ಳನ್ನು ಹಾಕಿ ಹುರಿಯಿರಿ. ನಂತರ ಇದಕ್ಕೆ ಈರುಳ್ಳಿ ಚೂರು, ಟೊಮೆಟೊ ಚೂರು ಸೇರಿಸಿ ಚೆನ್ನಾಗಿ ಪ್ರೈ ಮಾಡಿ, ಉಪ್ಪು , ಅರಸಿನ ಹುಡಿ, ಬೆಲ್ಲದ ಹುಡಿ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಕೊನೆಗೆ ತೊಳೆದಿಟ್ಟ ಅವಲಕ್ಕಿಯನ್ನು ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿದರೆ ರುಚಿಕರ ಒಗ್ಗರಣೆ ಅವಲಕ್ಕಿ ರೆಡಿ. ಬೆಳಗಿನ ತಿಂಡಿ ಹಾಗೂ ಟಿಫಿನ್‌ ಬಾಕ್ಸ್‌ ಚೆನ್ನಾಗಿರುತ್ತದೆ.

ಖಾರ ಪೊಂಗಲ್‌
ಬೇಕಾಗುವ ಸಾಮಗ್ರಿ: ಹೆಸರುಬೇಳೆ- 1 ಕಪ್‌ , ಬೆಳ್ತಿಗೆ ಅಕ್ಕಿ- 1 ಕಪ್‌, ಕರಿಮೆಣಸು- 1/2 ಚಮಚ, ಗೋಡಂಬಿ 5-6, ಜೀರಿಗೆ- 1/2 ಚಮಚ, ಸಾಸಿವೆ- 1 ಚಮಚ, ಕರಿಬೇವು, ಹಸಿಮೆಣಸು- 2, ಕೊತ್ತಂಬರಿ ಸೊಪ್ಪು , ತುಪ್ಪ , ಜಜ್ಜಿದ ಬೆಳ್ಳುಳ್ಳಿ-ಶುಂಠಿ, ಚಿಟಿಕೆ ಇಂಗು.

ತಯಾರಿಸುವ ವಿಧಾನ: ಅಕ್ಕಿ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಬೇಕಷ್ಟು ನೀರು ಮತ್ತು ಸ್ವಲ್ಪ ಎಣ್ಣೆ , ಚಿಟಿಕೆ ಅರಸಿನ ಸೇರಿಸಿ ಕುಕ್ಕರ್‌ನಲ್ಲಿ 2 ವಿಸಿಲ್‌ ಬೇಯಿಸಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಕರಿಮೆಣಸು, ಕರಿಬೇವು, ಜೀರಿಗೆ, ಹಸಿಮೆಣಸು, ಶುಂಠಿ-ಬೆಳ್ಳುಳ್ಳಿ, ಇಂಗು ಸೇರಿಸಿ ಒಗ್ಗರಣೆ ತಯಾರಿಸಿ ಬೇಯಿಸಿಟ್ಟ ಅಕ್ಕಿ-ಹೆಸರುಬೇಳೆ ಮಿಶ್ರಣಕ್ಕೆ ಸೇರಿಸಿ ಬೇಕಷ್ಟು ಉಪ್ಪು ಹಾಕಿ ಎರಡು ನಿಮಿಷ ಕುದಿಸಿ. ಬಳಿಕ ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಪುಷ್ಟಿಕರ ಪೊಂಗಲ್‌ ತಯಾರು.

Advertisement

ಸಬ್ಬಕ್ಕಿ ಕಿಚಡಿ
ಬೇಕಾಗುವ ಸಾಮಗ್ರಿ: ಸಬ್ಬಕ್ಕಿ- 1 ಕಪ್‌, ಆಲೂಗಡ್ಡೆ- 1 ದೊಡ್ಡದು, ಕಡಲೆಬೀಜ- 3 ಚಮಚ, ಸಾಸಿವೆ-ಜೀರಿಗೆ 1 ಚಮಚ, ಹಸಿಮೆಣಸು- 2, ಲಿಂಬೆರಸ- 2 ಚಮಚ, ಮೆಣಸಿನ ಪುಡಿ- 1/2 ಚಮಚ, ಅರಸಿನ ಚಿಟಿಕೆ, ಉಪ್ಪು, ಕರಿಬೇವು, ಎಣ್ಣೆ .

ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು ನೀರನ್ನು ಬಸಿಯಿರಿ. ನಂತರ ಸಬ್ಬಕ್ಕಿ ಮುಳುಗುವಷ್ಟು ನೀರು ಸೇರಿಸಿ ನೆನೆಸಿ. ಉದುರುದುರಾಗುತ್ತದೆ. ಕಡಲೆ ಬೀಜವನ್ನು ಹುರಿದು ಪುಡಿಮಾಡಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ-ಜೀರಿಗೆ ಚಟಪಟಿಸಿ ಹಸಿಮೆಣಸಿನ ಕಾಯಿ, ಆಲೂಗಡ್ಡೆ , ಕರಿಬೇವು ಹಾಕಿ ಎರಡು ನಿಮಿಷ ಮುಚ್ಚಿ ಬೇಯಿಸಿ. ನಂತರ ಸಬ್ಬಕ್ಕಿಯನ್ನು ಸೇರಿಸಿ ಅರಸಿನ ಹುಡಿ, ಉಪ್ಪು , ಕಡಲೆಬೀಜ ಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಮುಚ್ಚಿಡಿ. ಕೊನೆಗೆ ನಿಂಬೆ ರಸ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿಕರ ಕಿಚಡಿ ತಯಾರು.

ಸಿಹಿ ಜೋಳದ ದೋಸೆ
ಬೇಕಾಗುವ ಸಾಮಗ್ರಿ: ಸಿಹಿಜೋಳ- 1/2 ಕಪ್‌, ಬೆಳ್ತಿಗೆ ಅಕ್ಕಿ- 1 ಕಪ್‌, ದಪ್ಪ ಅವಲಕ್ಕಿ- 1/2 ಕಪ್‌, ಹಸಿಮೆಣಸು- 2, ಶುಂಠಿ- ಸಣ್ಣ ತುಂಡು, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ.

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ನೆನೆಸಿ. ನಂತರ ಇದಕ್ಕೆ ತೊಳೆದ ಅವಲಕ್ಕಿ, ಸಿಹಿ ಜೋಳ, ಹಸಿಮೆಣಸು, ಶುಂಠಿ ಚೂರು, ಉಪ್ಪು , ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ . ಕಾವಲಿ ಬಿಸಿಯಾದ ಎಣ್ಣೆ ಹಾಕಿ ತೆಳ್ಳಗೆ ದೋಸೆ ಹೊಯ್ದು ಎರಡೂ ಬದಿ ಬೇಯಿಸಿ ತೆಗೆದರೆ ರುಚಿಕರ ದಿಢೀರ್‌ ದೋಸೆ ತಿನ್ನಲು ಸಿದ್ಧ.

ಒಗ್ಗರಣೆ ಅನ್ನ
ಬೇಕಾಗುವ ಸಾಮಗ್ರಿ: ಅಕ್ಕಿ- 2 ಕಪ್‌, ಈರುಳ್ಳಿ- 2, ಕಡಲೆಬೇಳೆ- ಉದ್ದಿನಬೇಳೆ- 1 ಚಮಚ, ಕಡಲೆಬೀಜ- 2 ಚಮಚ, ಎಣ್ಣೆ, ಸಾಸಿವೆ, ಬೆಳ್ಳುಳ್ಳಿ 7-8 ಎಸಳು, ಕರಿಬೇವು, ಅರಸಿನ- 1/2 ಚಮಚ, ಸಾರಿನ ಪುಡಿ- 2 ಚಮಚ, ಖಾರಪುಡಿ- 1 ಚಮಚ, ಲಿಂಬೆರಸ- 1/2 ಚಮಚ, ರುಚಿಗೆ ಬೇಕಷ್ಟು ಉಪ್ಪು,

ತಯಾರಿಸುವ ವಿಧಾನ: ಮೊದಲು ಅನ್ನವನ್ನು ಮಾಡಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ, ಉದ್ದಿನಬೇಳೆ, ಕಡಲೆಬೇಳೆ, ಕಡಲೆಬೀಜ, ಕರಿಬೇವು ಸೇರಿಸಿ ಹುರಿಯಿರಿ. ನಂತರ ಹೆಚ್ಚಿ ಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿರಿ. ಇದಕ್ಕೆ ಮಾಡಿಟ್ಟ ಅನ್ನ ಸೇರಿಸಿ, ಸಾರಿನ ಪುಡಿ, ಅರಸಿನ, ಖಾರಪುಡಿ ಸೇರಿಸಿ ಕೊನೆಗೆ ನಿಂಬೆ ರಸ ಹಿಂಡಿ ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿಟ್ಟರೆ ರುಚಿಕರ ಅನ್ನ ತಯಾರು. ಇದು ಮೊಸರುಬಜ್ಜಿಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.

ಸ್ವಾತಿ

Advertisement

Udayavani is now on Telegram. Click here to join our channel and stay updated with the latest news.

Next