Advertisement

ಕಂದಾಯ ಗ್ರಾಮಗಳ ಮಹತ್ವದ ತಿದ್ದುಪಡಿ ಮಸೂದೆಗೆ ಶೀಘ್ರ ಒಪ್ಪಿಗೆ

12:20 PM Jan 25, 2017 | Team Udayavani |

ಧಾರವಾಡ: ರಾಜ್ಯದಲ್ಲಿ 58 ಸಾವಿರ ದಾಖಲೆ ರಹಿತ ತಾಂಡಾಗಳು, ದೊಡ್ಡಿಗಳು, ಹಾಡಿಗಳು, ಹಟ್ಟಿಗಳಿದ್ದು ಇವುಗಳಿಗೂ ಕಂದಾಯ ಗ್ರಾಮಗಳನ್ನಾಗಿ ಮಾಡುವ ಮಹತ್ವದ ತಿದ್ದುಪಡಿ ಮಸೂದೆಗೆ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದೆಂದು ರಾಜ್ಯ ವಿಧಾನಮಂಡಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ, ಶಾಸಕ ಕೆ. ಶಿವಮೂರ್ತಿ ಹೇಳಿದರು. 

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಎಸ್‌.ಸಿ ಹಾಗೂ ಎಸ್‌.ಟಿ.ಸಮುದಾಯಗಳ ಯೋಜನೆಗಳಅನುಷ್ಠಾನ ಕುರಿತು ನಡೆದ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ರಾಜ್ಯದಲ್ಲಿ 28 ಸಾವಿರ ಅಧಿಕೃತ ಕಂದಾಯ ಗ್ರಾಮಗಳಿವೆ. ಅವುಗಳಿಗೆ ಹೊಂದಿಕೊಂಡು 58 ಸಾವಿರ  ತಾಂಡಾಗಳು, ದೊಡ್ಡಿಗಳು, ಹಾಡಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮುದಾಯಗಳು, ಆದಿವಾಸಿಗಳು, ಮೂಲ ನಿವಾಸಿಗಳು, ಅಲೆಮಾರಿಗಳು, ಅರೆ ಅಲೆಮಾರಿಗಳು ವಾಸವಾಗಿದ್ದಾರೆ. ಆದರೆ ಇವು  ಕಂದಾಯ ಇಲಾಖೆಯಲ್ಲಿ ನಮೂದಾಗಿಲ್ಲ. ಆದರೂ ಈ ಗ್ರಾಮಗಳ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲು ಶಿಫಾರಸು  ಮಾಡಲಾಗಿದೆ.

ವಿಶೇಷ ಸಭೆಗೆ ಆದ್ಯತೆ: ಕೆ.ಆರ್‌. ರಮೇಶಕುಮಾರ ನೇತೃತ್ವದ ಸದನ ಸಮಿತಿಯು ಗ್ರಾಮಸಭೆಗಳ ಮಾದರಿಯಲ್ಲಿ ಇಂತಹ ಜನವಸತಿ ಪ್ರದೇಶಗಳಲ್ಲಿಯೂ ವಿಶೇಷ ಸಭೆ ನಡೆಸಲು ಸಲಹೆ ನೀಡಿದೆ. ವಿಶೇಷ ಸಭೆಗಳ ಮೂಲಕ ಆಡಳಿತ ಯಂತ್ರ ಸ್ಥಳದಲ್ಲಿಯೇ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ. ಜನವಸತಿ ಪ್ರದೇಶಗಳನ್ನು ಅಧಿಕೃತವಾಗಿ ಗುರುತಿಸಲು ಸರ್ವೇ ಕಾರ್ಯವೂ ನಡೆದಿದೆ.

ಸರಕಾರ ಇದಕ್ಕಾಗಿ ಪ್ರತ್ಯೇಕ ಕೋಶವನ್ನೂ ತೆರೆದಿದೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಸೌಲಭ್ಯಗಳನ್ನು ನೇರವಾಗಿ ಆ ಪ್ರದೇಶಗಳಿಗೆ ಮಂಜೂರು ಮಾಡಲು ಸಾಧ್ಯವಾಗುತ್ತದೆ. ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಸರಕಾರ ಅವಕಾಶ ನೀಡುವುದಿಲ್ಲ. ಆ ಸಮುದಾಯದವರು ಬಯಸಿದರೆ ಮೂಲ ಸೌಕರ್ಯಗಳೊಂದಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರು. 

Advertisement

ತಾಂತ್ರಿಕ ಶಿಕ್ಷಣಕ್ಕೆ ಒತ್ತು: ಹಲವಾರು ಕಾರಣಗಳಿಂದ ಎಸ್‌ಸಿ, ಎಸ್‌ಟಿ ಜನಸಂಖ್ಯೆ ಏರಿಕೆಗೆ ಅನುಗುಣವಾಗಿ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ತಾಂತ್ರಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಅವರ ಪ್ರಾತಿನಿಧ್ಯ ಹೆಚ್ಚಳವಾಗಿಲ್ಲ. ಈ ಸಮುದಾಯಗಳು ಅಧಿಕವಾಗಿರುವ ಪ್ರದೇಶಗಳಲ್ಲಿ ಶಾಲೆ, ಕಾಲೇಜು, ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು. 

ವಿಧಾನ ಮಂಡಲದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಸಮುದಾಯ ಹಾಗೂ ಸರಕಾರದ ನಡುವೆ ಸಮರ್ಥ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಎಸ್‌ಸಿಪಿ ಹಾಗೂ ಟಿಎಸ್‌ಪಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತಿದೆ ಎಂದರು. 

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆರ್‌.ಸ್ನೇಹಲ್‌ ,ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್‌.ಮುನಿರಾಜು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next