Advertisement

ಡೆಲ್ಲಿ ಐಪಿಎಲ್‌ ಫೈನಲ್‌ಗೇರೋದ್ಯಾವಾಗ?

08:59 AM May 19, 2019 | Vishnu Das |

ವರ್ಷ ವರ್ಷ ಬರುವ ಯುಗಾದಿ, ದೀಪಾವಳಿಯಂತೆ ಈ ಬಾರಿಯೂ ಐಪಿಎಲ್‌ ಬಂದಿದೆ, ಹಾಗೆಯೇ ಮುಗಿದು ಹೋಗಿದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕೆಲವು ಪ್ರಶ್ನೆಗಳಿಗೆ ಉತ್ತರವೇ ಸಿಕ್ಕಿಲ್ಲ. ಇದರಲ್ಲಿ ಮುಖ್ಯವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐಪಿಎಲ್‌ ಫೈನಲ್‌ಗೇರುವುದು ಯಾವಾಗ? ಅದು ಸೋಲುತ್ತಿರುವುದಕ್ಕೆ ಕಾರಣವಾದರೂ ಏನು? ಎಂಬ ಪ್ರಶ್ನೆ. ಐಪಿಎಲ್‌ನಲ್ಲಿ ಫೈನಲ್‌ಗೇರದ ಏಕೈಕ ತಂಡ ಡೆಲ್ಲಿ. ಉಳಿದೆಲ್ಲ ತಂಡಗಳು ಕಪ್‌ ಗೆಲ್ಲದಿದ್ದರೂ, ಫೈನಲ್‌ಗಾದರೂ ಏರಿವೆ. ಕನಿಷ್ಠ ಆ ಭಾಗ್ಯವೂ ಡೆಲ್ಲಿಗೆ ಸಿಕ್ಕಿಲ್ಲ.

Advertisement

ಇನ್ನೂ ಕೆಲ ಪ್ರಶ್ನೆಗಳಿವೆ: ಉಳಿದೆಲ್ಲ ತಂಡಗಳ ವಿರುದ್ಧ ಮೇಲುಗೈ ಸಾಧಿಸಿರುವ ಚೆನ್ನೈ, ಮುಂಬೈ ವಿರುದ್ಧ ಮಾತ್ರ ಸೋಲುವುದೇಕೆ? ಮಾತ್ರವಲ್ಲ ಚೆನ್ನೈ ಸತತವಾಗಿ ಫೈನಲ್‌ಗೇರುವುದೇಕೆ? ಮುಂಬೈ ಗರಿಷ್ಠ ನಾಲ್ಕು ಬಾರಿ ಕಿರೀಟ ಗೆಲ್ಲಲು ಏನು ಕಾರಣ? ಪಂಜಾಬ್‌ ತಂಡ ಪ್ರಶಸ್ತಿ ಗೆಲ್ಲುವುದು ಯಾವಾಗ? ಯುವರಾಜ್‌, ಹರ್ಭಜನ್‌ ಸಿಂಗ್‌, ಅಮಿತ್‌ ಮಿಶ್ರಾರಂತಹ ಹಳೆಯ ತಲೆಮಾರಿನ ಕ್ರಿಕೆಟಿಗರು ನಿವೃತ್ತಿ ಹೇಳುವುದು ಯಾವಾಗ ಎಂಬ ಉಪಪ್ರಶ್ನೆಗಳೂ ಇವೆ.

ಡೆಲ್ಲಿ ಫೈನಲ್‌ಗೆ ಯಾಕೆ ಏರುತ್ತಿಲ್ಲ ಎಂಬ ಪ್ರಶ್ನೆಯ ಬಗ್ಗೆ ಮೊದಲು ಗಮನ ಹರಿಸೋಣ. ಐಪಿಎಲ್‌ 2008ರಲ್ಲಿ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಆಡುತ್ತಲೇ ಇರುವ ತಂಡಗಳಲ್ಲಿ ಡೆಲ್ಲಿಯೂ ಒಂದು. ಪ್ರಾರಂಭದಲ್ಲಿ ಅದರ ಹೆಸರು ಡೆಲ್ಲಿ ಡೇರ್‌ ಡೆವಿಲ್ಸ್‌ ಎಂದಿತ್ತು. ಈ ಬಾರಿ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಎಂದು ಬದಲಿಸಲಾಯಿತು. ಹೆಸರು ಬದಲಾವಣೆಯ ಪರಿಣಾಣವೋ ಏನೋ, ಡೆಲ್ಲಿ ಈ ಬಾರಿ ಅತ್ಯುತ್ತಮವಾಗಿ ಆಡಿತು. ಲೀಗ್‌ ಹಂತವನ್ನು ಅತ್ಯುತ್ತಮವಾಗಿ ಆಡಿ ಅಗ್ರಸ್ಥಾನಿಯಾಗಿ ಫೈನಲ್‌ಗೇರುವ ಮಟ್ಟಕ್ಕೂ ಬಂದಿತ್ತು. ಕಡೆಯ ಹಂತದಲ್ಲಿ ರನ್‌ರೇಟ್‌ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದು 3ನೇ ಸ್ಥಾನಿಯಾಯಿತು. ಗಮನಾರ್ಹ ಸಂಗತಿಯೆಂದರೆ ಅಗ್ರಸ್ಥಾನಿ ಮುಂಬೈ, ದ್ವಿತೀಯ ಸ್ಥಾನಿ ಚೆನ್ನೈ ಗೆದ್ದಿದ್ದೂ 9 ಪಂದ್ಯ. 3ನೇ ಸ್ಥಾನಿ ಡೆಲ್ಲಿ ಗೆದ್ದಿದ್ದೂ 9 ಪಂದ್ಯ. ಇಷ್ಟೆಲ್ಲ ಸುಂದರವಾಗಿ ಆಡಿದರೂ 2ನೇ ಕ್ವಾಲಿಫೈಯರ್‌ನಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿ, ಚೆನ್ನೈ ಎದುರು ಸೋತು ಹೋಯಿತು! ಅಲ್ಲಿ ಡೆಲ್ಲಿಯ ಪ್ರದರ್ಶನ ಬಹಳ ಕಳಪೆಯಾಗಿತ್ತು.

ಈ ಬಾರಿಯ ಒಟ್ಟಾರೆ ಪ್ರದರ್ಶನ ಗಮನಿಸಿದಾಗ, ಡೆಲ್ಲಿ ಅರ್ಹವಾಗಿಯೇ ಪ್ರಶಸ್ತಿ ಗೆಲ್ಲಬೇಕಿತ್ತು. ಆ ತಂಡಕ್ಕೆ ರಿಕಿ ಪಾಂಟಿಂಗ್‌ ತರಬೇತುದಾರರಾಗಿದ್ದರೆ, ಭಾರತೀಯ ಕ್ರಿಕೆಟ್‌ನ ರೂಪವನ್ನೇ ಬದಲಿಸಿದ ಸೌರವ್‌ ಗಂಗೂಲಿ ಸಲಹೆಗಾರರಾಗಿದ್ದರು. ತಂಡದಲ್ಲಿ ರಿಷಭ್‌ ಪಂತ್‌, ಪೃಥ್ವಿ ಶಾ, ಶ್ರೇಯಸ್‌ ಐಯ್ಯರ್‌ರಂತಹ ಯುವ ಆಟಗಾರರಿದ್ದಾರೆ. ಶಿಖರ್‌ ಧವನ್‌, ಕ್ಯಾಗಿಸೊ ರಬಾಡ, ಕ್ರಿಸ್‌ ಮಾರಿಸ್‌, ಇಶಾಂತ್‌ ಶರ್ಮ, ಟ್ರೆಂಟ್‌ ಬೌಲ್ಟ್ರಂತಹ ಅನುಭವಿಗಳಿದ್ದಾರೆ. ಇವರೆಲ್ಲ ಇದ್ದೂ ಡೆಲ್ಲಿಗೆ ಫೈನಲ್‌ಗೇರಲು ಸಾಧ್ಯವಾಗಲಿಲ್ಲ. ಆದರೂ ಹಿಂದಿನ ವರ್ಷಗಳ ಪ್ರದರ್ಶನ ಗಮನಿಸಿದಾಗ, ಡೆಲ್ಲಿ ಈ ಬಾರಿ ಬಹಳ ಸುಧಾರಿತ ತಂಡ. ಪ್ರಬಲ ತಂಡವೂ ಹೌದು. ಈ ಸುಧಾರಣೆಯ ಪ್ರಕ್ರಿಯೆಯನ್ನು ನಿರಂತರವಾಗಿ ಕಾಪಾಡಿಕೊಂಡರೆ, ಡೆಲ್ಲಿಗೆ ಮುಂದೆ ಯಾವತ್ತೂ ಶಾಪ ಮುಕ್ತಿಯಾಗಬಹುದು.

ಡೆಲ್ಲಿಯ ಹಿಂದಿನ ಕಥೆ: ಡೆಲ್ಲಿ ತಂಡಕ್ಕೆ ವೀರೇಂದ್ರ ಸೆಹ್ವಾಗ್‌ ಕೂಡ ನಾಯಕರಾಗಿದ್ದರು, ಗೌತಮ್‌ ಗಂಭೀರ್‌ ಕೂಡ ಆಳ್ವಿಕೆ ನಡೆಸಿದ್ದರು. ಒಂದೆರಡು ಬಾರಿ ಅದು ಅದ್ಭುತ ಪ್ರದರ್ಶನ ನೀಡಿ, ಇನ್ನೇನು ಫೈನಲ್‌ಗೇರಿಯೇಬಿಟ್ಟಿತು ಎಂಬ ನಿರೀಕ್ಷೆಯನ್ನು ಹುಟ್ಟಿಸಿತ್ತು. ಅಲ್ಲೆಲ್ಲ ಅದಕ್ಕೆ ಅದೃಷ್ಟ ಕೈಕೊಟ್ಟು 3ನೇ ಸ್ಥಾನಿ, 4ನೇ ಸ್ಥಾನಿಯಾಗಿ ಕೂಟ ಮುಗಿಸಿದೆ. ಒಮ್ಮೆ ಡೆಲ್ಲಿಯ ಹಿಂದಿನ ಇತಿಹಾಸವನ್ನು ನೋಡೋಣ. 2008ರಲ್ಲಿ 4ನೆ ಸ್ಥಾನ, 2009ರಲ್ಲಿ 3ನೆ ಸ್ಥಾನ, 2010ರಲ್ಲಿ 5ನೆ ಸ್ಥಾನ, 2011ರಲ್ಲಿ 10ನೆ ಸ್ಥಾನ, 2012ರಲ್ಲಿ ಮತ್ತೆ 3ನೆ ಸ್ಥಾನ, 2013ರಲ್ಲಿ 10ನೆ ಸ್ಥಾನ, 2014ರಲ್ಲಿ 8ನೆ ಸ್ಥಾನ, 2015ರಲ್ಲಿ 7ನೆ ಸ್ಥಾನ, 2016ರಲ್ಲಿ 6ನೆ ಸ್ಥಾನ, 2017ರಲ್ಲಿ 6ನೆ ಸ್ಥಾನ, 2018ರಲ್ಲಿ 8ನೆ ಸ್ಥಾನ ಗಳಿಸಿದೆ. ಈ ಪ್ರದರ್ಶನವನ್ನು ಗಮನಿಸಿದಾಗ, ಐಪಿಎಲ್‌ ಇತಿಹಾಸದ ಕಳಪೆ ತಂಡಗಳಲ್ಲಿ ಡೆಲ್ಲಿಯೂ ಒಂದೆನ್ನುವುದು ಖಚಿತ. ಇತಿಹಾಸ ಡೆಲ್ಲಿ ಪರವಾಗಿಲ್ಲ, ಯಾಕೆ ಹೀಗೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ವರ್ತಮಾನ ಗಮನಿಸಿದರೆ, ಭವಿಷ್ಯ ಡೆಲ್ಲಿಗೆ ಕೈಹಿಡಿಯುವ ಸಾಧ್ಯತೆಯೊಂದು ಗೋಚರವಾಗಿದೆ.

Advertisement

ಉತ್ತರವಿಲ್ಲದ ಇತರೆ ಪ್ರಶ್ನೆಗಳು

ಮುಂಬೈ ವಿರುದ್ಧ ಚೆನ್ನೈ ಸೋಲುವುದೇಕೆ?
ಬಹಳ ಅಚ್ಚರಿ ಮೂಡಿಸುವುದು ಈ ಪ್ರಶ್ನೆ. ಈ ಬಾರಿ ಐಪಿಎಲ್‌ನಲ್ಲಿ ಮುಂಬೈ ವಿರುದ್ಧ ಚೆನ್ನೈ ಫೈನಲ್‌ ಸೇರಿ 4 ಪಂದ್ಯಗಳನ್ನಾಡಿದೆ. ಅಷ್ಟರಲ್ಲೂ ಸೋತಿದೆ. ಫೈನಲ್‌ಗ‌ೂ ಮುನ್ನವೇ ಚೆನ್ನೈ, ಮುಂಬೈ ವಿರುದ್ಧ 3 ಬಾರಿ ಸೋತಿದ್ದರಿಂದ, ಫೈನಲ್‌ನಲ್ಲಿ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯಿತ್ತು. ಅದು ಕೇವಲ 1 ರನ್‌ಗಳಿಂದ ಹುಸಿಯಾಯಿತು. ಈ ಬಾರಿ ಮಾತ್ರವಲ್ಲ, ಹಿಂದಿನ ಹಲವು ಕೂಟಗಳಲ್ಲೂ ಚೆನ್ನೈ ವಿರುದ್ಧ ಮುಂಬೈ ಮೇಲುಗೈ ಸಾಧಿಸಿದೆ. ಒಟ್ಟಾರೆ ಇತ್ತಂಡಗಳ ಮುಖಾಮುಖೀಯಲ್ಲಿ ಚೆನ್ನೈ 11 ಬಾರಿ ಗೆದ್ದಿದ್ದರೆ, ಮುಂಬೈ 17 ಬಾರಿ ಗೆದ್ದಿದೆ. ಕಿರೀಟ ಸಮರದಲ್ಲೂ ಅಷ್ಟೇ. ಎರಡೂ ತಂಡಗಳ ನಡುವೆ 4 ಬಾರಿ ಫೈನಲ್‌ ನಡೆದಿದೆ. ಅದರಲ್ಲಿ ಮುಂಬೈ 3 ಬಾರಿ ಗೆದ್ದಿದೆ. ಒಮ್ಮೆ ಮಾತ್ರ ಚೆನ್ನೈ ಗೆದ್ದಿದೆ. ಆದ್ದರಿಂದಲೇ ಉಳಿಯುವ ಪ್ರಶ್ನೆ: ಮುಂಬೈ ವಿರುದ್ಧ ಚೆನ್ನೈ ಸೋಲುವುದೇಕೆ?

ಪಂಜಾಬ್‌ ಏಕೆ ಹೀಗೆ?
ಐಪಿಎಲ್‌ನಲ್ಲಿ ಕಳಪೆ ಫ‌ಲಿತಾಂಶ ದಾಖಲಿಸಿರುವ ತಂಡಗಳಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ಕೂಡ ಒಂದು. 2014ರಲ್ಲಿ ಒಮ್ಮೆ ಫೈನಲ್‌ಗೇರುವ ಮೂಲಕ, ಒಮ್ಮೆಯೂ ಫೈನಲ್‌ಗೇರದ ತಂಡವೆಂಬ ಅಪಖ್ಯಾತಿಯಿಂದ ಪಾರಾಗಿದೆ. ಆದರೆ ಪ್ರದರ್ಶನವನ್ನೇ ಗಮನಿಸಿದರೆ, ಡೆಲ್ಲಿಯಂತೆ ಈ ತಂಡವೂ ಕಳಪೆಯೇ. ಪ್ರಶಸ್ತಿ ಗೆಲ್ಲುವಂತಹ ಆಟವಾಡಿದ್ದೂ ಕಡಿಮೆ. ಕೇವಲ 2 ಬಾರಿ ಹೊರತುಪಡಿಸಿದರೆ, ಉಳಿದೆಲ್ಲ ಸಲ ಅದರ ಸ್ಥಾನ, ಐದು ಅಥವಾ ಅದಕ್ಕಿಂತ ಕೆಳಮಟ್ಟದಲ್ಲಿದೆ. ಈ ಬಾರಿ ಆರಂಭದಲ್ಲಿ ಪಂಜಾಬ್‌ ಮಿಂಚಿದರೂ, ಮತ್ತೆ ಎಂದಿನಂತೆ ಸೋಲಿನ ಹಾದಿ ಹಿಡಿದು, 6ನೇ ಸ್ಥಾನಿಯಾಗಿ ಕೂಟ ಮುಗಿಸಿದೆ.

ಯುವರಾಜ್‌ ಇನ್ನಾದರೂ ನಿವೃತ್ತಿಯಾಗುತ್ತಾರಾ?
ಭಾರತೀಯ ಕ್ರಿಕೆಟ್‌ನ ಅತ್ಯಂತ ಹಿರಿಯ ಆಟಗಾರರಲ್ಲಿ ಯುವರಾಜ್‌ ಸಿಂಗ್‌ ಕೂಡ ಒಬ್ಬರು. ಅವರು ಭಾರತ ತಂಡದಿಂದ ಬೇರ್ಪಟ್ಟು ಬಹಳ ದೀರ್ಘ‌ಕಾಲವೇ ಆಗಿದೆ. ಆಗಾಗ ಬಂದು ಹೋದರೂ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ವಿಫ‌ಲವಾಗಿದ್ದಾರೆ. ಆದ್ದರಿಂದ ಶಾಶ್ವತವಾಗಿ ಹೊರಗೆ ಹೋಗಿದ್ದಾರೆ. ಈಗ ಐಪಿಎಲ್‌ನಲ್ಲೂ ನಿರಂತರವಾಗಿ ವೈಫ‌ಲ್ಯ ಕಾಣುತ್ತ, ಇಲ್ಲಿಂದಲೂ ಶಾಶ್ವತವಾಗಿ ಹೊರಹೋಗುವ ಸ್ಥಿತಿಗೆ ತಲುಪಿದ್ದಾರೆ. ಈಗಾಗಲೇ 37 ವರ್ಷವಾಗಿರುವುದರಿಂದ, ಅದೂ ಕೂಡ ಅವರಿಗೆ ಹಿನ್ನಡೆಯಾಗುತ್ತದೆ.

ಈ ಬಾರಿಯ ಐಪಿಎಲ್‌ಗಿಂತ ಮುಂಚೆ ನಡೆದ ಹರಾಜಿನಲ್ಲಿ ಯುವಿ ಮಾರಾಟವೇ ಆಗಿರಲಿಲ್ಲ. ಕಡೆಗೆ 2ನೇ ಬಾರಿ ಯುವರಾಜ್‌ ಸಿಂಗ್‌ ಹೆಸರು ಕೂಗಿದಾಗ, ಮುಂಬೈ ಇಂಡಿಯನ್ಸ್‌ ಕೊಳ್ಳುವ ಮನಸ್ಸು ಮಾಡಿತು. ಆರಂಭಿಕ ಕೆಲ ಪಂದ್ಯಗಳಲ್ಲಿ ಯುವಿಗೆ ಆಡಲು ಅವಕಾಶವನ್ನೂ ನೀಡಿತು. ಪ್ರಾರಂಭದ ಮೂರು ನಾಲ್ಕು ಪಂದ್ಯಗಳಲ್ಲಿ ಉತ್ತಮ ಆಟವನ್ನೇ ಆಡಿದರು. ಅಷ್ಟೇ ಮುಂದೆ ಸತತ ವೈಫ‌ಲ್ಯ ಕಂಡಾಗ, ತಕ್ಷಣವೇ ತಂಡ ಅವರನ್ನು ಹೊರಹಾಕಿತು. ಈ ಕೂಟದ ಆರಂಭದಲ್ಲಿ ಯುವರಾಜ್‌ ಸಿಂಗ್‌ ನಿವೃತ್ತಿಯಾಗುವ ಬಗ್ಗೆ ಯೋಚಿಸಿದ್ದರಂತೆ. ಆದರೆ ಸಚಿನ್‌ ತೆಂಡುಲ್ಕರ್‌ ಸಲಹೆ ನೀಡಿ, ಎಲ್ಲಿಯವರೆಗೆ ಆಡುವುದರಲ್ಲಿ ಆನಂದ ಕಾಣುತ್ತೀಯೋ, ಅಲ್ಲಿಯವರೆಗೆ ಆಡು ಎಂದಿದ್ದರಂತೆ. ಅದನ್ನು ಪರಿಗಣಿಸಿ ಯುವಿ ನಿವೃತ್ತಿ ಮುಂದೂಡಿದರು. ಇನ್ನಂತೂ ಯುವಿಯನ್ನು ಯಾವ ತಂಡವೂ ಕೊಳ್ಳುವುದಿಲ್ಲ. ಆದ್ದರಿಂದ ಉಳಿದಿರುವ ಪ್ರಶ್ನೆ, ಯುವರಾಜ್‌ ಇನ್ನಾದರೂ ನಿವೃತ್ತಿ ಹೇಳುತ್ತಾರಾ?

Advertisement

Udayavani is now on Telegram. Click here to join our channel and stay updated with the latest news.

Next