Advertisement

ಪ್ರಶ್ನಾವಳಿಗೆ ನೀಡಿಲ್ಲ ಸಮರ್ಪಕ ಉತ್ತರ: ಚಿನ್ನಸ್ವಾಮಿ

12:37 PM Jan 05, 2017 | Team Udayavani |

ಕಲಬುರಗಿ: ಜಿಲ್ಲೆಗೆ ಬಂದ ಅನುದಾನದಲ್ಲಿನ ವಿಕೇಂದ್ರಿಕರಣದಲ್ಲಿ ಆಗುವ ತೊಂದರೆ, ಸಮಸ್ಯೆ ನಿವಾರಿಸಲು ಈಗಾಗಲೇ ಪ್ರಶ್ನಾವಳಿಗಳನ್ನು ಪಂಚಾಯಿತಿಗಳಿಗೆ ಒದಗಿಸಲಾಗಿದ್ದರೂ, ಜಿಲ್ಲೆಯಯಾವುದೇ ಪಂಚಾಯಿತಿಗಳು ಸಮರ್ಪಕ ಉತ್ತರ ಕೊಟ್ಟಿಲ್ಲ ಎಂದು 4ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜೆ.ಚಿನ್ನಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಹೊಸ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯಿತಿರಾಜ್‌ ಸಂಸ್ಥೆಗಳ ಪ್ರತಿನಿಧಿಗಳೊಂದಿಗಿನ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 264 ಗ್ರಾಮ ಪಂಚಾಯಿತಿಗಳು, 4345 ಗ್ರಾಮ ಪಂಚಾಯಿತಿ ಸದಸ್ಯರು, ಏಳು  ತಾಲೂಕು ಪಂಚಾಯಿತಿಗಳಲ್ಲಿ 179 ಸದಸ್ಯರು, ಒಂದು ಜಿಲ್ಲಾ ಪಂಚಾಯಿತಿಯಲ್ಲಿ 47 ಸದಸ್ಯರು ಇದ್ದಾರೆ.

ಜಿಲ್ಲಾ ಪಂಚಾಯಿತಿಯು ಆಯೋಗದ ಎಲ್ಲ ಪ್ರಶ್ನಾವಳಿಗಳಿಗೆ ಉತ್ತರ ಕೊಟ್ಟಿಲ್ಲ ಎಂದರು. ಕೇವಲ 86 ಗ್ರಾಮ ಪಂಚಾಯಿತಿಗಳು ಪ್ರಶ್ನಾವಳಿಗಳಿಗೆ ಉತ್ತರಿಸಿದರೂ ಆ ಪ್ರಶ್ನೆಗಳಿಗೆ ಉತ್ತರ ಪರಿಪೂರ್ಣವಾಗಿಲ್ಲ. ಹೀಗಾದಲ್ಲಿ ನಿಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲು ಕಷ್ಟವಾಗುತ್ತದೆ.

ಆದ್ದರಿಂದ ಆಯೋಗದ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳು ಹಾಗೂ ಗ್ರಾಮ ಪಂಚಾಯಿತಿಗಳು ಸಮರ್ಪಕ ಉತ್ತರಗಳನ್ನು ಕೊಡಬೇಕು ಎಂದು ಸೂಚಿಸಿದರು. ಆಯೋಗದ ಸದಸ್ಯ ಎಚ್‌.ಡಿ.ಅಮರನಾಥ ಮಾತನಾಡಿ, ಪಂಚಾಯತ್‌ ರಾಜ್‌ ವ್ಯವಸ್ಥೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು ಇಡೀ ರಾಷ್ಟ್ರದಲ್ಲೇ ಎರಡು-ಮೂರನೇ ಸ್ಥಾನದಲ್ಲಿದೆ. 

ಯೋಜನೆಗಳು ಗ್ರಾಮ ಮಟ್ಟದಿಂದ ತಯಾರಾಗಬೇಕು ಹಾಗೂ ಐದು ವರ್ಷಗಳ ದೂರದೃಷ್ಟಿತ್ವದ ಯೋಜನೆಗಳನ್ನು ರೂಪಿಸಬೇಕು. ತೆರಿಗೆ ಸಂಗ್ರಹ ಮತ್ತಿತರ ಆದಾಯ ಮೂಲಗಳಿಂದ ಪಂಚಾಯತ್‌ ರಾಜ್‌ ಸಂಸ್ಥೆಗಳು ಆರ್ಥಿಕ ಸದೃಢತೆ ಹೊಂದಬೇಕು ಎಂದರು. ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್‌ ರಮೇಶ ಯಾಕಾಪುರ ಮಾತನಾಡಿ, ಜಿಲ್ಲಾ ಪಂಚಾಯಿತಿಗೆ ಅದರಲ್ಲಿಯೂ ಸದಸ್ಯರಿಗೆ ಯಾವುದೇ ರೀತಿಯ ನಿಧಿ ಇಲ್ಲ. 

Advertisement

ಬಂದ ಅಲ್ಪ ಅನುದಾನದಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಕಷ್ಟವಾಗಿದೆ. ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯೂ ಸ್ಥಗಿತಗೊಂಡಿದೆ. ಶಾಸಕರ ರೀತಿಯಲ್ಲಿಯೇ ಜಿಲ್ಲಾ ಪಂಚಾಯಿತಿ ಸದಸ್ಯರಿಗೂ ಒಂದು ಕೋಟಿ ರೂ.ಗಳ ನಿಧಿ ಒದಗಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯ ಶಿವರಾಜ ಪಾಟೀಲ ಧನಿಗೂಡಿಸಿದರು. 

ಇನ್ನೊಬ್ಬ ಸದಸ್ಯ ದಾಮೋದರ್‌ ಪಾಟೀಲ್‌ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೊರತೆ ಇದೆ. ಮೂರು ಗ್ರಾಪಂಗಳಿಗೆ ಒಬ್ಬ ಅಭಿವೃದ್ಧಿ ಅಧಿಕಾರಿ  ನಿಯೋಜಿಸಲಾಗಿದೆ. 27 ಗ್ರಾಮ ಪಂಚಾಯಿತಿಗಳಿಗೆ ಕೇವಲ 8 ಜನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು  ಇದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೂ ಒಬ್ಬ ಅಭಿವೃದ್ಧಿ ಅಧಿಕಾರಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು. 

ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಯೋಜನಾಧಿಕಾರಿ ಪ್ರವೀಣಪ್ರಿಯಾ, ಆಯೋಗದ ಸದಸ್ಯರಾದ ಎಚ್‌.ಡಿ. ಅಮರನಾಥ, ಡಾ|  ಡಿ.ಎಚ್‌. ಶಶಿಧರ್‌, ಜಾಫರ್‌ ಷರೀಫ್‌, ಶ್ರೀಕಾಂತ ವನಹಳ್ಳಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next