Advertisement

ಚಾರ್ಲ್ಸ್‌ ಕಾಮನ್ವೆಲ್ತ್‌ ಮುಖ್ಯಸ್ಥ?

09:24 AM Apr 20, 2018 | Karthik A |

ಲಂಡನ್‌: ಭಾರತ ಪರ ಮತ್ತು ವಿರೋಧಿ ಘೋಷಣೆಗಳ ನಡುವೆಯೇ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ದೇಶಗಳ ಮುಖ್ಯಸ್ಥರ ಸಭೆಯಲ್ಲಿ ಮಹತ್ವದ ನಿರ್ಣಯವೊಂದು ಹೊರಬೀಳುವ ಸಮಯ ಸನ್ನಿಹಿತವಾಗಿದೆ. ಇದುವರೆಗೆ 53 ಸದಸ್ಯ ದೇಶಗಳ ಮುಖ್ಯಸ್ಥೆ ಸ್ಥಾನ ಅಲಂಕರಿಸಿದ್ದ ರಾಣಿ 2ನೇ ಎಲಿಜಬೆತ್‌ ಅವರು ಹುದ್ದೆಯಿಂದ ನಿರ್ಗಮಿಸುವ ಸುಳಿವು ನೀಡಿದ್ದು, ಈ ಸ್ಥಾನಕ್ಕೆ ಪುತ್ರ ಚಾರ್ಲ್ಸ್‌ ಹೆಸರನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ತಂದೆ ಕಟ್ಟಿದ್ದ ಕಾಮನ್ವೆಲ್ತ್‌ ದೇಶಗಳ ಒಕ್ಕೂಟ ಇಂದು ಹೆಮ್ಮರವಾಗಿ ಬೆಳೆದಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾನು ನಡೆದಿದ್ದು, ಮುಂದೆ ಈ ಸ್ಥಾನದಲ್ಲಿ ಪುತ್ರ ಪ್ರಿನ್ಸ್‌ ಚಾರ್ಲ್ಸ್‌ ಅವರನ್ನು ನೋಡುವಾಸೆ ಇದೆ ಎಂದು ಕಾಮನ್ವೆಲ್ತ್‌ ಸರಕಾರಗಳ ಮುಖ್ಯಸ್ಥರ ಸಭೆಯಲ್ಲಿ ಹೇಳಿದ್ದಾರೆ.

Advertisement

ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 53 ಕಾಮನ್ವೆಲ್ತ್‌ ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ. ರಾಣಿ 2ನೇ ಎಲಿಜಬೆತ್‌ ಪ್ರಸ್ತಾಪಿಸಿರುವ ವಿಚಾರ ಶುಕ್ರವಾರದ ಸಭೆಯಲ್ಲಿ ಚರ್ಚೆಯಾಗಲಿದ್ದು, ಪ್ರಧಾನ ಕಾರ್ಯದರ್ಶಿಯಾಗಿರುವ ಸ್ಕಾಟ್‌ಲೆಂಡ್‌ನ‌ ಪ್ರಧಾನಿ ಅಧಿಕೃತವಾಗಿ ಅಂದೇ ಮುಂದಿನ ಮುಖ್ಯಸ್ಥರು ಯಾರು ಎಂದು ಘೋಷಿಸುವರು. ಮುಖ್ಯಸ್ಥರ ಸ್ಥಾನ ವಂಶಪಾರಂಪರ್ಯವಾಗಿರದೆ ಪ್ರಜಾಪ್ರಭುತ್ವದ ಮಾದರಿಯಲ್ಲೇ ನೇಮಕವಾಗಲಿ ಎಂಬ ಆಶಯವೂ ಇದೆ. ಆದರೂ ರಾಜಮನೆತನದವರೇ ಈ ಹುದ್ದೆಯಲ್ಲಿ ಮುಂದುವರಿಯಲಿ ಎಂದು ಕೆಲವು ದೇಶಗಳ ಅಭಿಪ್ರಾಯ. ಭಾರತ ಮಾತ್ರ ತನ್ನ ನಿಲುವನ್ನು ಇದುವರೆಗೆ ಸ್ಪಷ್ಟಪಡಿಸಿಲ್ಲ.

ಭಾರತ ಧ್ವಜ ಹರಿದ ದೇಶದ್ರೋಹಿಗಳು
ಮೋದಿ ಗೋ ಬ್ಯಾಕ್‌ ಪ್ರತಿಭಟನೆ ವೇಳೆ ಕಾಣಿಸಿಕೊಂಡಿದ್ದ ಖಲಿಸ್ತಾನ್‌ ಉಗ್ರರ ಬೆಂಬಲಿಗರು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿ ಬೆಂಬಲಿಗರು ಬ್ರಿಟನ್‌ ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿ ಇದ್ದ ಭಾರತ ಧ್ವಜವನ್ನು ಹರಿದು ಹಾಕಿದ್ದರು. ಇದಷ್ಟೇ ಅಲ್ಲ, ಪ್ರತಿಭಟನೆ ಸಂಬಂಧ ವರದಿ ಮಾಡುತ್ತಿದ್ದ ಭಾರತದ ಆಂಗ್ಲ ಸುದ್ದಿವಾಹಿನಿಯೊಂದರ ವರದಿಗಾರ್ತಿಯನ್ನು ನಿಂದಿಸಿ ಅವಮಾನಿಸಿದ್ದರು. ಕೊನೆಗೆ ಸ್ಕಾಟ್ಲಂಡ್‌ಯಾರ್ಡ್‌ ಪೊಲೀಸರು ಇವರನ್ನು ರಕ್ಷಿಸಿದ್ದರು. ಈ ಬಗ್ಗೆ ಭಾರತ ದೂರು ನೀಡಿದ ಮೇಲೆ ಅಲ್ಲಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ಬಗ್ಗೆ ಬ್ರಿಟನ್‌ ಆಡಳಿತದ ಮುಂದೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಗೆ ಬಗ್ಗೆ ಅಲ್ಲಿನ ಪೊಲೀಸರು ಕ್ಷಮೆ ಕೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next