Advertisement

ಪ್ರಶ್ನೆ ಪತ್ರಿಕೆ ಸೋರಿಕೆ: ಮೊದಲ ಬಂಧನ

07:00 AM Apr 01, 2018 | |

ಹೊಸದಿಲ್ಲಿ /ಛತ್ರಾ: ಸಿಬಿಎಸ್‌ಇಯ 10ನೇ ತರಗತಿ ಗಣಿತ ಪರೀಕ್ಷೆ ಸೋರಿಕೆಗೆ ಸಂಬಂಧಿಸಿದಂತೆ ಜಾರ್ಖಂಡ್‌ನ‌ ಛತ್ರಾದಲ್ಲಿ ಮೂವರನ್ನು ಬಂಧಿಸಲಾಗಿದೆ. ಇಬ್ಬರು ಕೋಚಿಂಗ್‌ ಕೇಂದ್ರದ ನಿರ್ದೇಶಕರು, 9 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ  ಎಂದು ಛತ್ರಾದ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ. ಶುಕ್ರವಾರದ ಕಾರ್ಯಾಚರಣೆಯಲ್ಲಿ ಪೊಲೀಸರು 10ನೇ ತರಗತಿಯ 6 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ತಮಗೆ ಪಾಟ್ನಾದಿಂದ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು ಎಂದು ಹೇಳಿದ್ದರು. ವಶಪಡಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಅವರ ವಿರುದ್ಧವೂ ಎಫ್ಐಆರ್‌ ದಾಖಲಿಸಲಾಗಿದೆ. 

Advertisement

ಸೋರಿಕೆಯಾಗಿಲ್ಲ: ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಜಾಲತಾಣಗಳಲ್ಲಿ ಸುಳ್ಳು ವರದಿ ಹಬ್ಬಿಸಲಾಗುತ್ತಿದೆ. ಅಂಥದ್ದೇನೂ ನಡೆದಿಲ್ಲ ಎಂದಿದೆ ಸಿಬಿಎಸ್‌ಇ. ಏ.2ರಂದು ಹಿಂದಿ ಪರೀಕ್ಷೆ ನಡೆಯಲಿದೆ. ಎಂದು ಸುಳ್ಳು ಹಬ್ಬಿಸಲಾಗಿತ್ತು. ಅದು ಸುಳ್ಳು, ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಈಡಾಗಬೇಡಿ ಎಂದು ಮಂಡಳಿ ಮನವಿ ಮಾಡಿದೆ. 

ಪೊಲೀಸರ ಭೇಟಿ: ಹೊಸದಿಲ್ಲಿ ಪೊಲೀಸರ ತಂಡಗಳು ನಗರದ ಹೊರವಲಯದ ಶಾಲೆಗಳು, ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿವೆ. ಜತೆಗೆ ವಿದ್ಯಾರ್ಥಿಗಳು, ಕೋಚಿಂಗ್‌ ಕೇಂದ್ರದ ಮಾಲೀಕರು ಸೇರಿ ಸುಮಾರು 50ಕ್ಕೂ ಅಧಿಕ ಮಂದಿಯ ಫೋನ್‌ ನಂಬರ್‌ಗಳನ್ನು ಪಡೆದಿದೆ. ಇದೇ ವೇಳೆ ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರ ಪ್ರತಿಭಟನೆಗಳು ಮುಂದುವರಿದಿವೆ. 

ಇ-ಮೇಲ್‌ ಮಾಹಿತಿ ಕೊಟ್ಟ ಗೂಗಲ್‌
ಸಿಬಿಎಸ್‌ಇ ಅಧ್ಯಕ್ಷರಿಗೆ ಗಣಿತ ಪ್ರಶ್ನೆ ಪತ್ರಿಕೆ ಮತ್ತು 12 ಪುಟಗಳ ಕೈಬರಹದ ಉತ್ತರ ಬಂದಿದ್ದ ಇ-ಮೇಲ್‌ ವಿವರ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಮನವಿಗೆ ಗೂಗಲ್‌ ಉತ್ತರ ನೀಡಿದೆ. ಮೇಲ್‌ ಕಳುಹಿಸಿದ್ದು ಯಾರು ಎಂಬ ಮಾಹಿತಿ ಗೊತ್ತಾಗಿದ್ದು, ಆತನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಸುಪ್ರೀಂಗೆ 2 ಅರ್ಜಿ
ಮರುಪರೀಕ್ಷೆ ನಡೆಸುವ ಸಿಬಿಎಸ್‌ಇ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 2 ಅರ್ಜಿ ಸಲ್ಲಿಕೆಯಾಗಿದೆ. ತನಿಖೆ ನಡೆಸದೇ, ಸೋರಿಕೆಗೆ ಯಾರು ಹೊಣೆ ಎಂಬುದನ್ನು ಪತ್ತೆ ಮಾಡುವ ಮೊದಲೇ ಮರುಪರೀಕ್ಷೆಗೆ ಆದೇಶಿಸಿರುವುದು ಸರಿಯಲ್ಲ ಎಂದು ರೀಪಕ್‌ ಕನ್ಸಾಲ್‌ ಎಂಬವರು ಅರ್ಜಿಯಲ್ಲಿ ತಿಳಿಸಿದ್ದಾರೆ. 10ನೇ ತರಗತಿ ಮರುಪರೀಕ್ಷೆ ನಡೆಸದಂತೆ ನಿರ್ದೇಶಿಸಬೇಕು ಎಂದು ಕೋರಿ ಕೇರಳದ ವಿದ್ಯಾರ್ಥಿಯೊಬ್ಬರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next