ಪುತ್ತೂರು: ನಗರ ಠಾಣೆಯ ಒಟ್ಟು ಸಿಬಂದಿ ಸಂಖ್ಯೆ 101. ಆದರೆ ಇಲ್ಲಿರುವ ವಸತಿಗೃಹಗಳ ಸಂಖ್ಯೆ ಕೇವಲ 25. ಇರುವ 25 ವಸತಿಗೃಹಗಳಲ್ಲಿ ಮಂಗಳೂರು, ಬಂಟ್ವಾಳ ಠಾಣೆಯ ಸಿಬಂದಿಗಳೂ ಇದ್ದಾರೆ. ಹಾಗಾದರೆ ಪುತ್ತೂರು ಠಾಣೆಯ ಸಿಬಂದಿ ಏಲ್ಲಿಗೆ ಹೋಗಬೇಕು? ಸಮಾಜದ ರಕ್ಷಕರಿಗೇ ಸರಿಯಾದ ಸೂರು ಇಲ್ಲದ ದೈನಸೀ ಪರಿಸ್ಥಿತಿ ಪುತ್ತೂರು ನಗರ ಠಾಣೆಯಲ್ಲಿದೆ. ಹೊತ್ತಲ್ಲದ ಹೊತ್ತಲ್ಲಿ ಕೆಲಸ, ಮಹಿಳಾ ಸಿಬಂದಿ ರಾತ್ರಿ ಪಾಳಿಯಲ್ಲಿಯೂ ಕೆಲಸ ನಿರ್ವಹಿಸುವ ಉದಾಹರಣೆ, ಇನ್ನು ಚುನಾವಣೆ- ತುರ್ತು ಪರಿಸ್ಥಿತಿಯಲ್ಲಂತೂ ಕೇಳುವುದೇ ಬೇಡ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಷ್ಟೆಲ್ಲ ಪಾಡು ಪಡುವ ಆರಕ್ಷಕರಿಗೆ, ಸೂಕ್ತ ವ್ಯವಸ್ಥೆ ನೀಡದೇ ಇರುವುದು ವಿಪರ್ಯಾಸ.
ಜಿಲ್ಲೆಯ ಎರಡನೇ ದೊಡ್ಡ ವಾಣಿಜ್ಯ ನಗರಿ ಎಂಬ ಬಿರುದು ಪುತ್ತೂರಿಗಿದೆ. ಸಾಲದ್ದಕ್ಕೆ ಜಿಲ್ಲಾ ಕೇಂದ್ರ ಮಾಡಬೇಕೆಂದು ಜನಪ್ರತಿನಿಧಿಗಳು ಭರವಸೆ ಮೇಲೆ ಭರವಸೆ ನೀಡುತ್ತಿದ್ದಾರೆ. ಸದ್ಯ ಮೂರು ತಾಲೂಕು ಗಳಿಗೆ ಪುತ್ತೂರು ಕೇಂದ್ರಸ್ಥಾನ. ಹಾಗಿರುವಾಗ ಪೊಲೀಸ್ ಇಲಾಖೆ ಮೇಲೆ ಸಾಕಷ್ಟು ಒತ್ತಡ ಸಹಜವಾಗಿ ಇರುತ್ತವೆ. ಇದನ್ನು ಸರಿಯಾಗಿ ನಿಭಾಯಿಸಬೇಕು ಎಂದರೆ, ತಲೆಮೇಲೆ ಭದ್ರವಾದ ಸೂರು ಇರಬೇಕಲ್ಲವೇ? ವಸತಿ ಇಲ್ಲ ಎಂದು ಠಾಣೆಯಲ್ಲಿ ಬಂದು ಮಲಗಲು ಸಾಧ್ಯವೇ ಎನ್ನುವುದು ಪೊಲೀಸರ ಪ್ರಶ್ನೆ.
ಪುತ್ತೂರು ನಗರದಲ್ಲಿ ಮೂರು ಠಾಣೆಗಳಿವೆ. ಕಾನೂನು ಸುವ್ಯವಸ್ಥೆ, ಸಂಚಾರಿ ಠಾಣೆ, ಮಹಿಳಾ ಠಾಣೆ. ಇದರಲ್ಲಿ ಸಂಚಾರಿ ಹಾಗೂ ಮಹಿಳಾ ಠಾಣೆ ಇತ್ತೀಚೆಗೆ ಆಗಿದ್ದರೂ, ಇವರಿಗೆ ಇನ್ನೂ ಕೂಡ ವಸತಿಗೃಹಗಳನ್ನು ಅಧಿಕೃತವಾಗಿ ನೀಡಲಾಗಿಲ್ಲ. ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವ ನಗರ ಠಾಣೆಯಲ್ಲಿ 55 ಮಂದಿ ಅಧಿಕಾರಿ, ಸಿಬಂದಿಗಳಿದ್ದು ಇವರು ಕಳೆದ ಹಲವಾರು ವರ್ಷಗಳಿಂದ ಇದೇ ಸಮಸ್ಯೆಯಲ್ಲಿ ನರಳುತ್ತಿದ್ದಾರೆ. ಸಂಚಾರಿ ಠಾಣೆಯ ಸಿಬಂದಿಗೆ ಇದೇ ವಸತಿಗೃಹವನ್ನು ನೀಡಿದ್ದು, ಒಂದರಲ್ಲಿ 3-4 ಮಂದಿ ವಾಸ್ತವ್ಯ ಹೂಡಿದ್ದಾರೆ.
ಬಾಡಿಗೆ ಮನೆಯೇ ಗತಿ
ಠಾಣೆಗೆ ಹೊಸದಾಗಿ ನೇಮಕವಾದ ಅನೇಕ ಮಂದಿ ಸಿಬಂದಿಗಳಿದ್ದಾರೆ. ಇದರಲ್ಲಿ ಮಹಿಳಾ ಸಿಬಂದಿಯೂ ಸೇರಿದ್ದಾರೆ. ಇವರಿಗೆ ವಸತಿಗೃಹವಿಲ್ಲದೇ, ದೂರದ ಪ್ರದೇಶದಲ್ಲಿ ಬಾಡಿಗೆ ಕೊಠಡಿ ಹುಡುಕುವಂತಾಗಿದೆ. ಕೆಲಸ ಮುಗಿಸಿ ರಾತ್ರಿ ಹೊತ್ತು ಇಷ್ಟು ದೂರದ ರೂಂಗಳಿಗೆ ಮಹಿಳಾ ಸಿಬಂದಿ ನಡೆದುಹೋಗಬೇಕಾದ ಸ್ಥಿತಿ ಇದೆ. ಸುಳ್ಯ ಹಾಗೂ ಇದರ ಆಸುಪಾಸು ಮನೆ ಇದ್ದವರು ದಿನನಿತ್ಯ ಹೋಗಿ ಬರುವಂತಹ ಪರಿಸ್ಥಿತಿ ಇದೆ. ಇದರ ಬಗ್ಗೆ ಪೊಲೀಸ್ ಉಪಾಧೀಕ್ಷಕರಿಗೆ ಈಗಾಗಲೇ ಮನವಿ ನೀಡಲಾಗಿದೆ.
ತುಂಬಿ ಹೋಗಿರುವ ಟಾಯ್ಲೆಟ್, ಚರಂಡಿ ಸಮಸ್ಯೆ, ಆವರಣ ಗೋಡೆ ಇಲ್ಲ, ಒಂದು ಮನೆಯಲ್ಲಿ 2-3 ಸಿಬಂದಿ ವಾಸ, ಸೋರುವ ಹಂಚು, ಎದುರು ಭಾಗಕ್ಕೆ ಮಾತ್ರ ಟೈಲ್ಸ್, ಗಾಳಿ- ಬೆಳಕು ಇಲ್ಲ, ವಿದ್ಯುತ್ ಕೈಕೊಟ್ಟರೆ ವಿಪರೀತ ಸೆಖೆ, ಅಸಮರ್ಪಕ ಕೊಠಡಿ, ಟ್ಯಾಂಕ್ ಇಲ್ಲದ ಕಾರಣ ಬೆಳಗ್ಗೆ ಮಾತ್ರ ನೀರು, ನೀರು ಬರುವಾಗ ಡ್ಯೂಟಿಯಲ್ಲಿರುವ ಸಿಬಂದಿಗೆ ದಿನಪೂರ್ತಿ ನೀರಿಲ್ಲ, ಕುಟುಂಬವನ್ನು ಬಿಟ್ಟಿರಬೇಕಾದ ಸ್ಥಿತಿ, ಇಲಿ- ಹುಳ ಕಾಟ ಹೀಗೆ ಅನೇಕ ಸಮಸ್ಯೆಗಳು ಪೊಲೀಸ್ ವಸತಿಗೃಹ ವಾಸಿಗಳನ್ನು ಕಾಡುತ್ತಿವೆ.
ಕಾಮಗಾರಿ ನಡೆಯುತ್ತಿದೆ
ಬನ್ನೂರು, ಸಾಮೆತ್ತಡ್ಕದಲ್ಲಿ ಹೊಸ ವಸತಿಗೃಹದ ಕಾಮಗಾರಿ ನಡೆಯುತ್ತಿದೆ. ಕೆಲಸ ವೇಗ ಪಡೆದುಕೊಂಡರೆ, 2-3 ತಿಂಗಳಲ್ಲಿ ವಸತಿಗೃಹ ವಾಸಕ್ಕೆ ಯೋಗ್ಯವಾಗಲಿದೆ. ಮಹಿಳಾ ಸಿಬಂದಿಗಳಿಗೆ ಹೆಚ್ಚಾಗಿ ರಾತ್ರಿ ಪಾಳಿ ಕೊಡುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ಮುಂದೆ ಅವರಿಗೆ ಠಾಣೆ ಪಕ್ಕದ ವಸತಿಗೃಹವನ್ನೇ ನೀಡಲಾಗುವುದು.
– ಶ್ರೀ ನಿವಾಸ್, ಡಿವೈಎಸ್ಪಿ, ಪುತ್ತೂರು
— ಗಣೇಶ್ ಎನ್. ಕಲ್ಲರ್ಪೆ