ಬೆಂಗಳೂರು: ನೋಡಲು ಸುಂದರವಾಗಿಲ್ಲ. ಕಪ್ಪಾಗಿದಿಯಾ ಎಂದೆಲ್ಲ ಪತಿಯ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಮೈಮೇಲೆ ಸ್ಯಾನಿಟೈಸರ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆರ್‌ಟಿ ನಗರದ ಮಠದ ಹಳ್ಳಿಯ ನಿವಾಸಿ ಶಾಜಿಯಾ ಬಾನು ಮೃತ ಮಹಿಳೆ.
ಆಕೆಯ ಪತಿ ಇಮ್ರಾನ್ ವಿರುದ್ಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 8 ವರ್ಷಗಳ ಹಿಂದೆ ಇಮ್ರಾನ್ ಹಾಗೂ ಶಾಜಿಯಾ ವಿವಾಹವಾಗಿ ಆರ್.ಟಿ.ನಗರದಲ್ಲಿ ವಾಸವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಇತ್ತೀಚೆಗೆ ಕೌಟುಂಬಿಕ ವಿಚಾರಕ್ಕೆ ಪತ್ನಿಯ ಜತೆಗೆ ಜಗಳ ಮಾಡುತ್ತಿದ್ದ ಇಮ್ರಾನ್, ನೀನು ಕಪ್ಪಾಗಿದ್ದೀಯಾ, ಸುಂದರವಾಗಿಲ್ಲ ಎಂದು ಕಿರುಕುಳ ಕೊಡುತ್ತಿದ್ದ. ಅದಕ್ಕೆ ಇಮ್ರಾನ್ ತಾಯಿ ಕೂಡ ಪುತ್ರನಿಗೆ ಸಹಕಾರ ನೀಡುತ್ತಿದ್ದರು. ಇತ್ತ ಪತಿಯ ಕಿರುಕುಳದಿಂದ ನೊಂದ ಶಾಜಿಯಾ ಏ.20ರಂದು ಮನೆಯಲ್ಲಿದ್ದ ಸ್ಯಾನಿಟೈಸರ್‌ನ್ನು ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪತಿ ಹಾಗೂ ಕುಟುಂಬ ಸ್ಥರು ಕೂಡಲೇ ಶಾಜಿಯಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಶಾಜಿಯಾ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಹರ್ಷ ಹತ್ಯೆ ಆರೋಪಿಗಳಿಗೆ 180 ದಿನ ನ್ಯಾಯಾಂಗ ಬಂಧನ
“ನೋಡಲು ಚೆನ್ನಾಗಿಲ್ಲ, ಕಪ್ಪಾಗಿದ್ದಾಳೆ’ ಎಂದು ಆಕೆಯ ಪತಿ ಹಾಗೂ ಅತ್ತೆ ನಿಂದಿಸಿ ಹಿಂಸೆ, ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಆಕೆಯ ಸಾವಿಗೆ ಪತಿ ಇಮ್ರಾನ್ ಹಾಗೂ ಆತನ ತಾಯಿಯೇ ಕಾರಣ ಎಂದು ಮೃತ ಶಾಜಿಯಾ ಪೋಷಕರು ಆರೋಪಿಸಿದ್ದಾರೆ.