ಬಂಟ್ವಾಳ: ಇಲ್ಲಿನ ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆ ವೇಳೆ ಗೊಂದಲ ಉಂಟಾಗಿದ್ದು, ಕಾರ್ಯಕರ್ತರ ನಡುವೆ ಹೊಯ್ ಕೈ ಗೂ ಸಾಕ್ಷಿಯಾದ ಘಟನೆ ಶನಿವಾರ ನಡೆದಿದೆ.
ಮತದಾರರ ಪಟ್ಟಿಯಲ್ಲಿನ ದೋಷದಿಂದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಇದರಿಂದಾಗಿ ಸ್ವಲ್ಪ ಸಮಯ ಮತದಾನ ಸ್ಥಗಿತವಾಗಿತ್ತು.
ಬಂಟ್ವಾಳದ ಮಿನಿ ವಿಧಾನಸೌಧದಲ್ಲಿ ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆ ನಡೆಯುತ್ತಿದೆ. ಒಟ್ಟು 12 ಸ್ಥಾನಗಳಿಗೆ ಇಲ್ಲಿ ಇಂದು ಮತದಾನ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಇಲ್ಲಿ ಸೆಣಸಾಡುತ್ತಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಬಿಜೆಪಿಯಿಂದ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಸ್ಥಳದಲ್ಲಿದ್ದಾರೆ.
ಗೊಂದಲದ ಕಾರಣದಿಂದ ಎರಡೂ ಬಣಗಳ ನೂರಾರು ಜನ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನಂತರ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮತ್ತೆ ಮತದಾನ ಮುಂದುವರಿಸಲಾಯಿತು.
ಸ್ಥಳದಲ್ಲಿ ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಲಾಠಿ ಚಾರ್ಜ್ ಗೂ ಸಿದ್ದತೆ ನಡೆಸಿದ್ದರು ಎನ್ನಲಾಗಿದೆ.
ಸದ್ಯ ಪೊಲೀಸರ ಭದ್ರತೆಯಲ್ಲಿ ಮತದಾನ ಮುಂದುವರಿದಿದ್ದು, ಸ್ಥಳದಲ್ಲಿ ಇನ್ನೂ ಬಿಗು ವಾತಾವರಣ ಮುಂದುವರಿದಿದೆ.