ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ವಿದೇಶಗಳಿಂದ ಬರುವವರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಸಕಲ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ವಿದೇಶಗಳಲ್ಲಿರುವ ಕರಾವಳಿಯ ಜನರು ಮೇ 12ರಿಂದ ಜಿಲ್ಲೆಗೆ ಆಗಮಿಸಲಿದ್ದು, ಅವರನ್ನು ಹಾಸ್ಟೆಲ್‌ಗಳಲ್ಲಿ ಮತ್ತು ಖಾಸಗಿ ಹೊಟೇಲ್‌ಗಳಲ್ಲಿ ಇರಿಸಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಮಂಗಳೂರು ನಗರದಲ್ಲಿ 18 ಹೊಟೇಲ್/ ಲಾಡ್ಜ್ಗಳನ್ನು ಹಾಗೂ 6 ಹಾಸ್ಟೆಲ್‌ಗಳನ್ನು (ಸರಕಾರಿ/ ಖಾಸಗಿ) ಇದಕ್ಕಾಗಿ ಗುರುತಿಸಲಾಗಿದೆ. ಈ ದಿಶೆಯಲ್ಲಿ ಹೊಟೇಲ್ ಮಾಲಕರ ಸಂಘ ಮತ್ತು ಲಾಡ್ಜ್ ಗಳ ಮಾಲಕರ ಸಂಘಟನೆಗಳ ಸಹಕಾರವನ್ನು ನೀಡಿವೆ ಎಂದು ಮೂಲಗಳು ವಿವರಿಸಿವೆ.
ಮೇ 12 ರಂದು ಮಂಗಳೂರಿಗೆ ಬರುವ ಮೊದಲ ವಿಮಾನದಲ್ಲಿ 170 ಮಂದಿ ಆಗಮಿಸಲಿದ್ದಾರೆ. ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಮಂದಿ ಇದ್ದಾರೆ ಹಾಗೂ ಇತರ ಜಿಲ್ಲೆಗಳ ಎಷ್ಟು ಜನ ಇದ್ದಾರೆ ಎಂಬ ಮಾಹಿತಿ ಇಲ್ಲ. ದ.ಕ. ಜಿಲ್ಲೆಯ ಜನರಿಗೆ ಮಾತ್ರ ಇಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುವುದು. ಉಡುಪಿ, ಉತ್ತರ ಕನ್ನಡ, ಕಾಸರಗೋಡು ಇತ್ಯಾದಿ ಜಿಲ್ಲೆಗಳ ಜನರನ್ನು ಅವರವರ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ.
ಮೇ 12ರಂದು ವಿಮಾನದಲ್ಲಿ ಆಗಮಿಸುವ ಎನ್‌ಆರ್‌ಐಗಳಿಗೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವ ಕುರಿತು ಶನಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸಿದ್ಧತಾ ಸಭೆ ನಡೆಸಿ ಚರ್ಚಿಸಲಾಗಿದೆ.
ಆಹಾರ ಐಚ್ಛಿಕ
ವಿಮಾನದಲ್ಲಿ ಬರುವ ಮಂದಿಗೆ ಅವರ ಇಚ್ಛೆಯಂತೆ ಹೊಟೇಲ್ ಅಥವಾ ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಹೊಟೇಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗುವವರಿಗೆ ಜಿಲ್ಲಾಡಳಿತ ಒದಗಿಸುವ ಆಹಾರ ಬೇಕಿಲ್ಲದಿದ್ದರೆ ಅವರು ತಮಗೆ ಬೇಕಾದ ಆಹಾರವನ್ನು ಪಾರ್ಸೆಲ್ ಮೂಲಕ ತರಿಸಲು ಅವಕಾಶ ಇದೆ ಎಂದು ಮೂಲಗಳು ತಿಳಿಸಿವೆ.