ಬೆಂಗಳೂರು: ಮಾರಕ ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 14 ನಿರಾಶ್ರಿತರ ಪರಿಹಾರ (ಭಿಕ್ಷುಕರ ಪುನರ್ವಸತಿ) ಕೇಂದ್ರಗಳು ಸದ್ಯ “ದಿಗ್ಬಂಧನ ಕೇಂದ್ರ’ಗಳಾಗಿ ಮಾರ್ಪಟ್ಟಿವೆ.
ಮುಂಜಾಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಕಳೆದ 15 ದಿನಗಳಿಂದ ಈ ಕೇಂದ್ರಗಳಲ್ಲಿ ವಾಸ ಮಾಡುತ್ತಿರುವ 2,802 ನಿರಾಶ್ರಿತರಿಗೆ ಸಂಪೂರ್ಣವಾಗಿ ಐಷೋಲೇಷನ್’ನಲ್ಲಿ ಇಡಲಾಗಿದೆ.
ಬೆಂಗಳೂರಿನ ಸುಮನಹಳ್ಳಿಯಲ್ಲಿರುವ ಪರಿಹಾರ ಕೇಂದ್ರ ಸೇರಿದಂತೆ ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ವಿಜಯಪುರದ ಪರಿಹಾರ ಕೇಂದ್ರಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಕೇಂದ್ರಗಳಲ್ಲಿರುವ ನಿರಾಶ್ರಿತರು ಯಾವುದೇ ಕಾರಣಕ್ಕೂ ಹೊರ ಹೋಗುವಂತಿಲ್ಲ. ಅಲ್ಲದೆ, ರಸ್ತೆಗಳಲ್ಲಿ ಸಿಗುವ ನಿರಾಶ್ರಿತರು, ನಿರ್ಗತಿಕರನ್ನು ಬಂಧಿಸಿ ಪರಿಹಾರ ಕೇಂದ್ರಗಳಿಗೆ ತರಲಾಗುತ್ತಿಲ್ಲ. ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಸರ್ಕಾರದ ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ ಎಂದು ಕೇಂದ್ರ ಪರಿಹಾರ ಸಮಿತಿ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಗಳು ಜಾರಿಗೆ ಬಂದಾಗಿನಿಂದ ನಿರಾಶ್ರಿತರು, ಬಿಕ್ಷುಕರ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ, ರಸ್ತೆ-ಬೀದಿಗಳಲ್ಲಿ ಯಾರೂ ಕಂಡು ಬರುತ್ತಿಲ್ಲ. ಹಾಗಾಗಿ, ಕಳೆದ 10-15ದಿನಗಳಿಂದ ಯಾರನ್ನೂ ಬಂಧಿಸಿ ಪರಿಹಾರ ಕೇಂದ್ರಕ್ಕೆ ಕರೆತರುವ ಸಂದರ್ಭ ಬಂದಿಲ್ಲ. ಹಾಗೊಮ್ಮೆ ಸಂದರ್ಭ ಬಂದರೆ ವೈದ್ಯಕೀಯ ತಪಾಸಣೆ ಬಳಿಕವೇ ಅವರನ್ನು ಕೇಂದ್ರಕ್ಕೆ ಸೇರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಸ್ವಚ್ಛತೆ-ಅರೋಗ್ಯ ತಪಾಸಣೆಗೆ ಆದ್ಯತೆ: ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಸ್ವತ್ಛತೆ ಮತ್ತು ಆರೋಗ್ಯ ತಪಾಸಣೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಕೇಂದ್ರಗಳಲ್ಲಿದ್ದವರಿಗೆ ಮಾಸ್ಕ್, ಸ್ಯಾನಿಟೈಸರ್ ಒದಗಿಸಲಾಗುತ್ತಿದೆ. ವೈದ್ಯರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅಗತ್ಯವಿದ್ದಲ್ಲಿ ವೈದ್ಯರ ನೆರವೂ ನೀಡಲಾಗುತ್ತಿದೆ ಎಂದು ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಚಂದ್ರ ನಾಯಕ್ ಉದಯವಾಣಿ’ಗೆ ತಿಳಿಸಿದರು.
ಕೋವಿಡ್ 19 ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುನ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಹಲವು ದಿನಗಳಿಂದ ಪರಿಹಾರ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲಾ ಕೇಂದ್ರಗಳಿಗೆ ತಾಕೀತು ಮಾಡಲಾಗಿದೆ.
– ಚಂದ್ರ ನಾಯಕ್, ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ
–ರಫೀಕ್ ಅಹ್ಮದ್