Advertisement

ಕ್ವಾರಂಟೈನ್‌: ತ್ಯಾಜ್ಯ ವಿಲೇಗೆ ಮಾರ್ಗಸೂಚಿ

06:26 PM Apr 02, 2020 | Sriram |

 

Advertisement

ಬೆಂಗಳೂರು: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕ್ವಾರಂಟೈನ್‌ ಆದ ಮನೆಗಳಲ್ಲಿನ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಸಂಬಂಧ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿರುವ ಮಾರ್ಗಸೂಚಿಯನ್ವಯ ನಿರ್ದಿಷ್ಟ ಕ್ರಮಗಳನ್ನು ಪಾಲಿಸಬೇಕು ಎಂದು ಪೌರಾಡಳಿತ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯದಲ್ಲಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಕ್ವಾರಂಟೈನ್‌ ಆದ ಮನೆಗಳಿಂದ ತ್ಯಾಜ್ಯವನ್ನು ಕೆಳಕಂಡ ವಿಧಾನದಲ್ಲೇ ಸಂಗ್ರಹಿಸಿ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿ ಪೌರಾಡಳಿತ ಇಲಾಖೆ ನಿರ್ದೇಶಕಿ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.

ಪ್ರಮುಖವಾಗಿ ಕ್ವಾರಂಟೈನ್‌ ಆದ ಮನೆಗಳಿಗೆ ಹಳದಿ ಕೈಚೀಲ ನೀಡಿ ಆ ತ್ಯಾಜ್ಯವನ್ನು ಬಯೋ ಮೆಡಿಕಲ್‌ ತ್ಯಾಜ್ಯವೆಂದು ಪರಿಗಣಿಸಬೇಕು. ಈ ತ್ಯಾಜ್ಯವನ್ನು ದಹನ (ಇನ್‌ಸಿನರೇಷನ್‌) ಇಲ್ಲವೇ ಆಳ ದಹನ ಗುಂಡಿ(ಡೀಪ್‌ ಬರಿಯಲ್‌ ಪಿಟ್‌)ಯಲ್ಲೇ ವಿಲೇವಾರಿ ಮಾಡಬೇಕು. ಒಂದೊಮ್ಮೆ ಹಳದಿ ಬಣ್ಣದ ಚೀಲ ಸಿಗದಿದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾಂತೀಯ ಪರಿಸರ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕ್ವಾರಂಟೈನ್‌ ಆದ ಮನೆಗಳ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಬೇಕು. ಈ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಪೌರ ಕಾರ್ಮಿಕರು, ಚಾಲಕರ ವೈಯಕ್ತಿಕ ಸುರಕ್ಷತೆಗೆ ಮೂರು ಪದರವುಳ್ಳ ಮುಖಗವಸು, ವೈಯಕ್ತಿಕ ಸುರಕ್ಷ ಕವಚ ಒದಗಿಸಬೇಕು. ಈ ಮನೆಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಜಿಲ್ಲಾ ಮಟ್ಟದ “ಕಾಮನ್‌ ಬಯೋಮೆಡಿಕಲ್‌ ಟ್ರೀಟ್‌ಮೆಂಟ್‌ ಫೆಸಿಲಿಟಿ’ಗೆ ಸಾಗಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು. ಆ ಸೌಲಭ್ಯವಿಲ್ಲದಿದ್ದರೆ ಡೀಪ್‌ ಬರಿಯಲ್‌ ಪಿಟ್‌ ಮೂಲಕ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಈ ತ್ಯಾಜ್ಯ ಸಾಗಿಸಿದ ವಾಹನವನ್ನು ನಿತ್ಯ ಸ್ವಚ್ಛಗೊಳಿಸಬೇಕು ಎಂದು ಸೂಚಿಸಲಾಗಿದೆ.

Advertisement

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕ್ವಾರಂಟೈನ್‌ ಆದ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಮತ್ತು ಸಾಗಿಸುವ ಎಲ್ಲ ಸ್ವಚ್ಛತಾ ಕೆಲಸಗಾರರಿಗೆ ನಿತ್ಯ ಹೊಸ ವೈಯಕ್ತಿಕ ರಕ್ಷಣಾ ಕಿಟ್‌ ನೀಡಬೇಕು. ವೈಯಕ್ತಿಕ ರಕ್ಷಣಾ ಕಿಟ್‌ನಲ್ಲಿ ಮೂರು ಪದರದ ಮಾಸ್ಕ್, ಕೈಗವಸು, ಕನ್ನಡಕ, ಗೌನ್‌, ಪರಿಕರ ಇರಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಕ್ವಾರಂಟೈನ್‌ ಆದ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಹೊಗುವ ಮುನ್ನ ಮತ್ತು ತ್ಯಾಜ್ಯ ಸಂಗ್ರಹಿಸಿ ಸಾಗಿಸಿದ ಅನಂತರ ನಿತ್ಯ ಎಲ್ಲ ಸ್ವಚ್ಛತಾ ಕೆಲಸಗಾರರಿಗೆ ಥರ್ಮಲ್‌ ಸೆನ್ಸರ್‌ ಮೂಲಕ ತಪಾಸಣೆಗೆ ಒಳಪಡಿಸಬೇಕು. ಕೆಲಸಗಾರರು ಕಡ್ಡಾಯವಾಗಿ ಸೋಪ್‌ನಿಂದ ಕೈ ತೊಳೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ತ್ಯಾಜ್ಯ ಸಂಗ್ರಹಣೆ ವೇಳೆ ಕೆಲಸಗಾರರು ಕನಿಷ್ಠ 3 ಮೀ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಸೂಚಿಸಲಾಗಿದೆ.

ಪೌರ ಕಾರ್ಮಿಕರು, ಸ್ವಚ್ಛತಾ ಕೆಲಸಗಾರರು ಅನಾರೋಗ್ಯಕ್ಕೆ ಒಳಗಾದರೆ ಕೂಡಲೇ ಜಿಲ್ಲಾ ಅಥವಾ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು. ಸ್ವಚ್ಛತಾ ಕೆಲಸಗಾರರು ಬಳಸಿದ ರಕ್ಷಣಾ ಪರಿಕರಗಳನ್ನು ಇನ್‌ಸಿರೇಷನ್‌ ಇಲ್ಲವೇ ಡೀಪ್‌ ಬರಿಯಲ್‌ ಪಿಟ್‌ನಲ್ಲೇ ವಿಲೇವಾರಿ ಮಾಡಬೇಕು. ಸ್ವಚ್ಛತಾ ಕೆಲಸಗಾರರು ವೈಯಕ್ತಿಕ ತೊಂದರೆ ಅಥವಾ ಸಂಕಷ್ಟದಿಂದಾಗಿ ಗೈರಾದರೆ ಅವರನ್ನು ಕೆಲಸದಿಂದ ವಜಾ ಮಾಡಬಾರದು. ಸ್ವಚ್ಛತಾ ಕೆಲಸಗಾರರಿಗೆ ಅನಾರೋಗ್ಯ ಉಂಟಾದರೆ ಅಗತ್ಯವೆನಿಸಿದರೆ ವೇತನ ಸಹಿತ ರಜೆ ನೀಡಲು ಜಿಲ್ಲಾಧಿಕಾರಿ ಹಂತದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಪ್ರತ್ಯೇಕವಾಗಿ ಸಂಗ್ರಹ
ಕ್ವಾರೆಂಟೈನ್‌ ಅಲ್ಲದ ಮನೆಗಳಿಂದ ಸಂಗ್ರಹವಾಗುವ ಮಾಸ್ಕ್, ಗ್ಲೌಸ್‌ಗಳನ್ನು ಗೃಹಬಳಕೆ ಅಪಾಯಕಾರಿ ತ್ಯಾಜ್ಯವೆಂದು ಪರಿಗಣಿಸಿ ಇತರ ತ್ಯಾಜ್ಯಗಳೊಂದಿಗೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಸಂಗ್ರಹಿಸಿ ತ್ಯಾಜ್ಯ ನಿರ್ವಹಣೆ ನಿಯಮ 2016ರ ಅನ್ವಯ ವಿಲೇವಾರಿ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next