Advertisement

ಕ್ವಾಂಟಂ ಕ್ರಿಪ್ಟೋಗ್ರಫಿಗೆ ರಾಜ್ಯದ ಮಿದುಳು

09:44 AM Dec 24, 2018 | |

ಉಡುಪಿ: ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಹ್ವಾನಿಸಿದ “ಕ್ವಾಂಟಂ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಇನೀಶಿಯೇಟಿವ್ಸ್‌’ ಯೋಜನೆಯಡಿ “ಕ್ವಾಂಟಮ್‌ ಕ್ರಿಪ್ಟೋಗ್ರಫಿ’ ಕ್ಷೇತ್ರದಲ್ಲಿ ಸಂಶೋಧನೆಗೈಯಲು ಕರ್ನಾಟಕದ ತಂತ್ರಜ್ಞಾನಿಗೆ ಅವಕಾಶ ಲಭಿಸಿದೆ.

Advertisement

ಕ್ವಾಂಟಂ ತಂತ್ರಜ್ಞಾನದಲ್ಲಿ ಪ್ರಸ್ತುತ ಚೀನ ಮುಂಚೂಣಿಯಲ್ಲಿದ್ದು, ಅಮೆರಿಕ, ಯೂರೋಪ್‌ಗೆ
ಅನಂತರದ ಸ್ಥಾನ. ಚೀನವನ್ನು ಹಿಂದಕ್ಕೆ ಹಾಕಬೇಕೆಂಬುದು ಕೇಂದ್ರ ಸರಕಾರದ ಆಶಯ. ಈ ಹಿನ್ನೆಲೆಯಲ್ಲಿ ಸಂಶೋಧನೆಗೆ ಪ್ರಸ್ತಾವನೆ ಕೋರಲಾಗಿತ್ತು. ಈ ಸಂಬಂಧ ವಿವಿಧೆಡೆಗಳಿಂದ ಸುಮಾರು 300 ಪ್ರಸ್ತಾವನೆ ಸಲ್ಲಿಕೆಯಾಗಿದ್ದವು. ಈ ಪೈಕಿ ಆಯ್ಕೆಯಾದ 30ರಲ್ಲಿ ಕ್ವಾಂಟಂ ಕ್ರಿಪ್ಟೋಗ್ರಫಿಗೆ ಸಂಬಂಧಿಸಿ ಅದಮಾರು ಮಠ ಶಿಕ್ಷಣ ಮಂಡಳಿ ಪ್ರವರ್ತಿಸಿದ ಬೆಂಗಳೂರು ದೇವನ ಹಳ್ಳಿಯಲ್ಲಿರುವ ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನ ಸಂಸ್ಥೆಯ (ಪಿಪಿಐಎಸ್‌ಆರ್‌) ಸಂಶೋಧಕ ಡಾ| ಶ್ರೀಕಾಂತ್‌ ಅವರ ಪ್ರಸ್ತಾವನೆಗೆ ಅವಕಾಶ ಸಿಕ್ಕಿದೆ. 

ಪಿಪಿಐಎಸ್‌ಆರ್‌ ಜತೆ ದಿಲ್ಲಿಯ ಜೆಪಿ ವಿಜ್ಞಾನ ಸಂಸ್ಥೆ (ಡಾ| ಅನಿರ್ಬಾನ್‌ ಪಾಠಕ್‌) ಕೈಜೋಡಿಸಲಿದ್ದು, ಪ್ರಸ್ತಾವನೆಗಾಗಿ 2.8 ಕೋ.ರೂ. ಅನುದಾನ ದೊರಕಲಿದೆ. ಪ್ರಸ್ತಾವನೆಯಲ್ಲಿ ಎರಡು ಭಾಗಗಳಿದ್ದು, ಪ್ರಯೋಗಾಲಯದ ಕೆಲಸವನ್ನು ದಿಲ್ಲಿ ಸಂಸ್ಥೆ ನಿರ್ವಹಿಸಿದರೆ ಬೌದ್ಧಿಕ ಜ್ಞಾನವನ್ನು ಪಿಪಿಐಎಸ್‌ಆರ್‌ ಒದಗಿಸಲಿದೆ. ಮೂರು ವರ್ಷಗಳಲ್ಲಿ ಸಂಶೋಧನೆ ಪೂರ್ಣಗೊಳ್ಳಲಿದೆ.

ಡಾ| ಶ್ರೀಕಾಂತ್‌ ಪಾಂಡಿಚೇರಿ ಮೂಲದವರು. ಕೆಮಿಕಲ್‌ ಎಂಜಿನಿಯರಿಂಗ್‌ ಪದವಿ ಓದಿ, ಭೌತಶಾಸ್ತ್ರ ಕ್ಷೇತ್ರಕ್ಕೆ ಜಿಗಿದು ಈಗ ಕ್ವಾಂಟಮ್‌ ಫಿಸಿಕ್ಸ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 2006ರಿಂದ ಪಿಪಿಐಎಸ್‌ಆರ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇವರ ಕಾರುಬಾರುಗಳೆಲ್ಲ ಕೇವಲ ಮಿದುಳಿನಿಂದಲೇ. ಈಗಾಗಲೇ ಇವರು, ವಿವಿಧ ವಿಷಯಗಳಿಗೆ ಸಂಬಂಧಿಸಿ ಪಿಎಚ್‌ಡಿ ಪದವೀಧರರಿಗೆ ಮಾರ್ಗದರ್ಶಕರಾಗಿದ್ದು, ಕ್ರಿಪ್ಟೋಗ್ರಫಿಗೆ ಸಂಬಂಧಿಸಿ ಇಬ್ಬರು ಸಂಶೋಧನ ವಿದ್ಯಾರ್ಥಿಗಳಿಂದ ಸಂಶೋಧನೆ ನಡೆಸುವರು. ಕ್ವಾಂಟಮ್‌ ವಿಜ್ಞಾನದಲ್ಲಿ ನಮ್ಮ ದೇಶ ಮುಂದಿದ್ದರೂ ತಂತ್ರಜ್ಞಾನದಲ್ಲಿ ಹಿಂದಿದೆ. ಯಾವುದೇ ವಿಜ್ಞಾನಿಯ ಸಂಶೋಧನೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಅದು ಆನ್ವಯಿಕಗೊಳ್ಳಬೇಕು. ಇದಕ್ಕಾಗಿ ಕೇಂದ್ರ ಸರಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ 700 ಕೋ.ರೂ. ಮೀಸಲಿರಿಸಿದೆ.  

ಹೆಮ್ಮೆ ತರುವ ಸಂಗತಿ
ಅದಮಾರು ಮಠದ ಶ್ರೀವಿಬುಧೇಶ ತೀರ್ಥರು ಮೂಲ ವಿಜ್ಞಾನದ ಅಭಿವೃದ್ಧಿಗೆ ಸ್ಥಾಪಿಸಿದ ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನ ಸಂಸ್ಥೆಗೆ ದೇಶದ ಪ್ರತಿಷ್ಠಿತ ಯೋಜನೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಸಂಶೋಧಕರಿಗೆ ಮುಕ್ತ ಪ್ರೋತ್ಸಾಹ ನೀಡುತ್ತಿದ್ದು, ಹಲವು ಮಹತ್ವದ ಸಂಶೋಧನೆ ನಡೆಯುತ್ತಿವೆ. 
 ಡಾ| ಎ.ಬಿ.ಹಲಗೇರಿ, ಪಿಪಿಐಎಸ್‌ಆರ್‌ ನಿರ್ದೇಶಕರು. 

Advertisement

ಕ್ವಾಂಟಮ್‌ ಕ್ರಿಪ್ಟೋಗ್ರಫಿ ಎಂದರೇನು?
ಭೌತ ವಿಜ್ಞಾನದಲ್ಲಿ ಥಿಯರಿಟಿಕಲ್‌ ಮತ್ತು ಪ್ರಾಯೋಗಿಕ ಎಂಬ ವಿಭಾಗಗಳಿವೆ. ಥಿಯರಿಟಿಕಲ್‌ ಭೌತವಿಜ್ಞಾನದ ಎಲ್ಲವನ್ನೂ ತಿಳಿಸು ವುದು ಕ್ವಾಂಟಂ ಮೆಕ್ಯಾನಿಕ್ಸ್‌. ಇದರ ಜತೆ ಗಣಿತ ಮತ್ತು ಕಂಪ್ಯೂಟರ್‌ ವಿಜ್ಞಾನ ಸಮ್ಮಿಳಿತಗೊಂಡು ಸೃಷ್ಟಿಯಾಗಿರುವುದೇ ಕ್ವಾಂಟಂ ಕ್ರಿಪ್ಟೋಗ್ರಫಿ. ಹೀಗೆಂದರೆ ಇತರರಿಗೆ ತಿಳಿಯಲಾಗದಂತೆ ಸಂಕೀರ್ಣವಾಗಿ ಸಂದೇಶಗಳನ್ನು ರೂಪಿಸುವುದು. ಸಂದೇಶಗಳು ಅತಿ ಸೂಕ್ಷ್ಮವಾಗಿದ್ದು, ಅದನ್ನು ನಿಭಾಯಿಸಬಲ್ಲವರಷ್ಟೆ ಅರ್ಥ ಮಾಡಿ ಕೊಳ್ಳಬಲ್ಲರು. “ಪ್ರೊಟೋಕಾಲ್ಸ್‌ ಫಾರ್‌ ಮೆಥಡ್ಸ್‌ ಆಫ್ ಹ್ಯಾಕಿಂಗ್‌ ಆ್ಯಂಡ್‌ ಡಿಸೈನಿಂಗ್‌ ಆಫ್ ಕ್ವಾಂಟಂ ಕ್ರಿಪ್ಟೋಗ್ರಫಿ’ ಬಗ್ಗೆ ನಡೆಸುವ ಸಂಶೋಧನೆ ಮುಂದೆ ದೇಶ ವಿದೇಶಗಳ ಮಧ್ಯೆ ರಾಜತಾಂತ್ರಿಕ ಮಾತುಕತೆ, ಸಮರ, ಗುಪ್ತಚರ ಚಟುವಟಿಕೆ ಇತ್ಯಾದಿ ಸಂದರ್ಭ ಪ್ರಯೋಜನಕ್ಕೆ ಬರಲಿದೆ.

ಅನುಪಮ ಅವಕಾಶ
ಕ್ವಾಂಟಮ್‌ ಅಂದರೆ ನ್ಯಾನೋ ಗಿಂತಲೂ ಸೂಕ್ಷ್ಮ. ಹೀಗಾಗಿ ಅತಿಸೂಕ್ಷ್ಮ ಎನ್ನುತ್ತೇವೆ. ಬೆಳಕಿನ ಚಿಕ್ಕಕಣಗಳ ಸ್ತರದಲ್ಲಿ ಸಂಶೋಧನೆ ನಡೆಸುವ ಭೌತ ವಿಜ್ಞಾನ ಇದು. ಈ ಕ್ಷೇತ್ರದಲ್ಲಿ ಸಂಶೋಧನೆ ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ನನಗೆ ಅನುಪಮ ಅವಕಾಶ ಸಿಕ್ಕಿದೆ.
ಡಾ| ಶ್ರೀಕಾಂತ್‌, ಪಿಪಿಐಎಸ್‌ಆರ್‌ ಸಂಶೋಧಕರು. 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next