ಸುರತ್ಕಲ್: ಕೇಂದ್ರ ಮತ್ತು ರಾಜ್ಯ ಸರಕಾರದ ಗ್ರಾಮೀಣ ಪ್ರದೇಶದ ಮಹತ್ವಾಕಾಂಕ್ಷೆಯ ನೀರಿನ ಯೋಜನೆ ಜಲವಿಷನ್ (ಜೆ.ಜೆ.ಎಂ.) ಮನೆ ಮನೆ ಗಂಗೆ ಯೋಜನೆಯಲ್ಲಿ ಚೇಳ್ಯಾರು ಗ್ರಾ.ಪಂ. ವ್ಯಾಪ್ತಿಯ ಒಂದು ಕಡೆಯ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಇದೆ ಎಂಬ ಬಗ್ಗೆ ಆರೋಪ ಕೇಳಿ ಬಂದಿದೆ.
ಇಲ್ಲಿನ ಕೆಲಸದಲ್ಲಿ ಮೂರು ಅಡಿ ಕೆಳಗೆ ಹಾಕಬೇಕಾದ ನೀರಿನ ಪೈಪ್‌ಗಳು ಒಂದೇ ಮಳೆಗೆ ಮೇಲೆದ್ದು ಬಂದಿವೆ. ವಾಹನಗಳು ಇದರ ಮೇಲೆ ಹೋದರೆ ಒಡೆದು ಹೋಗುವ ಸಾಧ್ಯತೆಯೂ ಇದೆ. ಮಧ್ಯ ಗ್ರಾಮಕ್ಕೆ ಈ ಯೋಜನೆಯಲ್ಲಿ 54 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ನೀರಿನ ಓವರ್ ಹೆಡ್ ಟ್ಯಾಂಕ್, ತೆರೆದ ಬಾವಿ, ಕೊಳವೆ ಬಾವಿ, ಪೈಪ್‌ಲೈನ್ ಕಾಮಗಾರಿ ಒಳಗೊಂಡಿದೆ. ಈಗಾಗಲೇ ಪೈಪ್‌ಲೈನ್ ಹಾಕಲಾಗಿದ್ದು, ಕಳಪೆ ಮಟ್ಟದ ಪೈಪ್ ಗಳನ್ನು ಬಳಸಲಾಗಿದೆ ಎಂಬ ಸಂಶಯ ಗ್ರಾಮಸ್ಥರದ್ದು, ಇತ್ತೀಚೆಗೆ ಸುರಿದ ಮಳೆಗೆ ಮಣ್ಣು ಹೋಗಿ ಪೈಪ್ ರಸ್ತೆಯಲ್ಲಿ ಬಿದ್ದಿದೆ ಎಂಬ ಆಕ್ರೋಶ ಗ್ರಾಮಸ್ಥರದ್ದಾಗಿದೆ.
ನೀರಿನ ಓವರ್ ಹೆಡ್ ಟ್ಯಾಂಕ್ ಪ್ರಾರಂಭಿಸಿ ಒಂದು ವರ್ಷ ಕಳೆದರೂ ಮುಕ್ತಾಯ ಹಂತಕ್ಕೆ ಬಂದಿಲ್ಲ. ಕಾಮಗಾರಿಯ ಅಂದಾಜು ಪಟ್ಟಿಯಲ್ಲಿ ತೆರೆದ ಬಾವಿಗೆ ಅನು ದಾನ ಇದ್ದರೂ ಮಳೆಗಾ ಲದ ನೆಪವೊಡ್ಡಿ ಅದನ್ನು ಮಾಡದೆ ಕೊಳವೆ ಬಾವಿ ಮಾಡಿ ಮುಗಿಸುವ ಚಿತಾವಣೆ ನಡೆದಿದೆ ಎಂಬ ಆರೋಪವಿದೆ.
ಗ್ರಾಮಸ್ಥರು ಈ ಬಗ್ಗೆ ಎರಡು ಸಲ ಗ್ರಾಮ ಸಭೆಯಲ್ಲಿ ಈಗಾಗಲೇ ಆಗಿರುವ ಕಾಮಗಾರಿ ಕಳಪೆಯಾಗಿದೆ. ನಮಗೆ ಕೊಳವೆ ಬಾವಿ ಬೇಡ ಈಗಾಗಲೇ 4 ಕೊಳವೆ ಬಾವಿ ನೀರು ಇಲ್ಲದೆ ಮುಚ್ಚಿವೆ. ಹಾಗಾಗಿ ನಮಗೆ ತೆರೆದ ಬಾವಿ ಬೇಕು ಎಂದು ಆಗ್ರಹಿಸಿದ್ದರು. ಕಾಮಗಾರಿಯ ಉಸ್ತುವಾರಿಯನ್ನು ನೋಡ ಬೇಕಾದ ಜಿ.ಪಂ., ನೀರು ಸರಬ ರಾಜು ಇಲಾಖೆಯ ಎಂಜಿನಿಯರ್‌ಗಳು ಕಾಮಗಾರಿಯನ್ನು ಇಷ್ಟರವರೆಗೆ ಪರಿಶೀಲನೆ ಮಾಡಿಲ್ಲ. ಅಕ್ಟೋಬರ್ ತಿಂಗಳೊಳಗೆ ಕಾಮಗಾರಿಯನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಲಾಗುತ್ತದೆ. ಇದಕ್ಕೆ ಗ್ರಾಮಸ್ಥರ, ಗ್ರಾ.ಪಂ. ವಿರೋಧವಿದ್ದು, ಅಗತ್ಯವೆನಿಸಿದರೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಲು ಪಂಚಾಯತ್ ಚಿಂತನೆ ನಡೆಸಿದೆ.
ಕ್ರಮದ ಎಚ್ಚರಿಕೆ: ಕಾಮಗಾರಿಯಲ್ಲಿನ ಗುಣ ಮಟ್ಟದ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರಿಗೆ ತಿಳಿಸಿದ್ದೇವೆ. ಅವರು ಕೂಡ ಕಳಪೆ ಕಾಮಗಾರಿ ಯಾಗಿದ್ದರೆ ಕ್ರಮ ಜರಗಿಸುವ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕಾಮಗಾರಿ ಸರಿಯಾಗದೆ ಸುಪರ್ದಿಗೆ ನಾವು ತೆಗೆದುಕೊಳ್ಳುವುದಿಲ್ಲ. ಸರಕಾರದ ಅನುದಾನ ಪೋಲಾಗಲು ಬಿಡುವುದಿಲ್ಲ. –
ಯಶೋದಾ ಬಿ., ಅಧ್ಯಕ್ಷರು, ಚೇಳ್ಯಾರು ಗ್ರಾ.ಪಂ.