Advertisement
ನಗರದ ಕೆಇಬಿ ಸಮುದಾಯ ಭವನದಲ್ಲಿ ಕೋಚಿಮುಲ್ ಕರೆದಿದ್ದ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋಲಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ತಾಲೂಕು ಅತೀ ಹೆಚ್ಚು ಅಂದರೆ 258 ಡೇರಿಗಳು, ಪ್ರತಿ ನಿತ್ಯ 1.52 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಹಾಲಿನ ಗುಣಮಟ್ಟದಲ್ಲಿ 2ನೇ ಸ್ಥಾನದಲ್ಲಿದೆ. ಮಾಲೂರು ತಾಲೂಕು ಸಂಪೂರ್ಣ ಬಿಎಂಸಿ ಕೇಂದ್ರ ಹೊಂದಿದೆ. ಅದೇ ರೀತಿ ಕೋಲಾರ ತಾಲೂಕಿನಲ್ಲೂ ಇನ್ನೂ 32 ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸಿ, ಪ್ಲಾಸ್ಟಿಕ್ ಕ್ಯಾನ್ ಮುಕ್ತ ತಾಲೂಕನ್ನಾಗಿ ಮಾಡಿ ಗುಣಮಟ್ಟದ ಹಾಲಿನ ಶೇಖರಣೆಯಲ್ಲಿ ನಂ.1ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
Related Articles
Advertisement
ಒಕ್ಕೂಟ ಹಾಲು ಉತ್ಪಾದಕರಿಗೆ ಏನೂ ಮಾಡಿಲ್ಲ ಎಂದು ದೂಷಿಸುವುದು ಬೇಡ, ಎಲ್ಲ ಯೋಜನೆಗಳಲ್ಲಿ ಶೇ.50 ಹಣವನ್ನು ಒಕ್ಕೂಟ ಭರಿಸುತ್ತಿದೆ. ಏನೇನು ಸಾಧ್ಯವೋ ಎಲ್ಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಪ್ರಾತ್ಯಕ್ಷಿಕೆ ಕೇಂದ್ರ: ಹಾಲು ಉತ್ಪಾದಕರನ್ನು ಗುಜರಾತ್‌ನ ಅಮುಲ್, ಆಂಧ್ರದ ವಿಶಾಖಪಟ್ಟಣಂನ ಖಾಸಗಿ ಡೇರಿಗೆ ಅಧ್ಯಯನ ಪ್ರವಾಸಕ್ಕೆ ಕಳುಹಿಸುವ ಬದಲು ಕೋಲಾರದ ಹೊಳಲಿಯಲ್ಲಿ ಒಕ್ಕೂಟಕ್ಕೆ ಡಿ.ಕೆ.ರವಿ ಜಿಲ್ಲಾಕಾರಿಗಳಾಗಿದ್ದಾಗ ಮಂಜೂರು ಮಾಡಿರುವ 50 ಎಕರೆ ಜಮೀನಿನಲ್ಲೇ ಪ್ರಾತ್ಯಕ್ಷಿಕೆ ಕೇಂದ್ರ ಆರಂಭಿಸಿ, ಇತರೆ ಜಿಲ್ಲೆ, ರಾಜ್ಯದ ಹೈನುಗಾರರು ಇಲ್ಲಿ ನೋಡಿಕೊಂಡು ಹೋಗುವಂತೆ ಅಭಿವೃದ್ಧಿಪಡಿಸಬೇಕೆಂದು ಸಲಹೆ ನೀಡಿದರು.
ಪಶುಆಹಾರ ಘಟಕ: ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ತಿಪ್ಪಾರೆಡ್ಡಿ, ಶಿಡ್ಲಘಟ್ಟದ ಸಾದಲಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 500 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯದ ಪಶುಆಹಾರ ಘಟಕ ಸ್ಥಾಪಿಸಲಾಗುತ್ತಿದೆ.
ಟೆಂಡರ್ ಪ್ರಕ್ರಿಯೆ ಮುಗಿದಿದೆ. ಘಟಕ ಸ್ಥಾಪನೆಯಾದರೆ ಸಕಾಲಕ್ಕೆ ಪಶು ಆಹಾರ ಲಭ್ಯವಾಗಲಿದೆ. ಮೆಕ್ಕೆಜೋಳದ ಬೆಲೆ ಹೆಚ್ಚಾಗಿರುವುದರಿಂದ ಪಶು ಆಹಾರದ ಬೆಲೆ ಹೆಚ್ಚಳವಾಗಿದೆ ಎಂದು ನುಡಿದರು.
ರಾಮಸಂದ್ರ ಡೇರಿ ಅಧ್ಯಕ್ಷ ಶಿವರುದ್ರಪ್ಪ, ಪಶು ಆಹಾರ ಬೆಲೆ ಹೆಚ್ಚಳವಾಗಿದೆ, ಹಾಲು ಖರೀದಿ ದರ ಹೆಚ್ಚಿಸಿಲ್ಲ, ನಾನಾ ಹೆಸರಿನಲ್ಲಿ ಬಿಲ್ನಿಂದ ಹಣ ಕಡಿತ ಮಾಡಲಾಗುತ್ತಿದೆ, ಚಿಕ್ಕಬಳ್ಳಾಪುರದಲ್ಲಿ 3 ಚಿಲ್ಲಿಂಗ್ ಸೆಂಟರ್ ಇದೆ, ಪಶು ಆಹಾರ ಸೇರಿದಂತೆ ಕೋಲಾರ ಭಾಗದಲ್ಲಿ ಯಾವುದೇ ಘಟಕ ನಿರ್ಮಿಸಲು ನಿಮಗೆ ಆಸಕ್ತಿ ಇಲ್ಲ ಎಂದು ವಾಗ್ಧಾಳಿ ನಡೆಸಿದರೆ ನೋ ಪೇಮೆಂಟ್ ಬಗ್ಗೆ ಕಲ್ಲಂಡೂರು ಡೇರಿ ಅಧ್ಯಕ್ಷ ಕೃಷ್ಣಪ್ಪ ಗಮನ ಸೆಳೆದರು.
ಒಕ್ಕೂಟದ ವ್ಯವಸ್ಥಾಪಕ ವೇಣುಗೋಪಾಲ್, ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ, ಅಧಿಕಾರಿಗಳಾದ ಮೋಹನ್‌ಬಾಬು, ಮಂಜುನಾಥ್ ಇತರರು ಇದ್ದರು.