ಮುಳಬಾಗಿಲು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿಯಾದಾಗಲೇ ಸಮುದಾಯದ ಪ್ರಗತಿ ಸಾಧ್ಯ ಎಂದು ಮದ್ದೂರು ತಹಶೀಲ್ದಾರ್ ಗೀತಮ್ಮ ಅಭಿಪ್ರಾಯಪಟ್ಟರು.
ನಗರದ ಡಿವಿಜಿ ಗಡಿ ಕನ್ನಡ ಭವನದಲ್ಲಿ ಭಾನುವಾರ ತಾಲೂಕು ಕನಕ ನೌಕರರ ಸಂಘದಿಂದ ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಮಾಜದ ಮಕ್ಕಳಿಗೆ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದುವುದು ಒಳ್ಳೆಯ ಬೆಳವಣಿಗೆ. ಆದರೂ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿ ಇರುವುದರಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಗುಣಾತ್ಮಕ ಶಿಕ್ಷಣ ಪ್ರತಿಯೊಬ್ಬರೂ ಪಡೆದುಕೊಳ್ಳಲೇಬೇಕಿದೆ. ಆಗ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು, ಸಮುದಾಯವನ್ನು ಸಮರ್ಥ ವಾಗಿ ಮುನ್ನಡೆಸಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಹೊರ ಪ್ರಪಂಚಕ್ಕೆ ಪರಿಚಯಿಸಿ: ಸಾಕಷ್ಟು ಮಂದಿ ವಿದ್ಯಾರ್ಥಿಗಳು ಎಲೆ ಮರಿಕಾಯಿಗಳಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗದೆ, ಸೂಕ್ತ ಅವಕಾಶಗಳು ದೊರೆಯದೆ ವಂಚಿತರಾಗಿರುವ ಉದಾಹರಣೆಗಳಿವೆ. ಅದರಲ್ಲೂ ಗ್ರಾಮೀಣ ಭಾಗದ ಯುವಕ-ಯುವತಿಯರು ಹೆಚ್ಚನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಪ್ರತಿಭಾವಂತ ಮಗುವೂ ಹೊರ ಪ್ರಪಂಚಕ್ಕೆ ಪರಿಚಯಿಸುವ ಕೆಲಸವನ್ನು ಕನಕ ನೌಕರರ ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಉನ್ನತ ವ್ಯಾಸಂಗ ಮಾಡಿ: ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಆರ್.ವೆಂಕಟೇಶಪ್ಪ ಮಾತನಾಡಿ, ತಾಲೂಕಿನಲ್ಲಿ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದರೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಂಡು, ಉನ್ನತ ವಿದ್ಯಾಭ್ಯಾಸ ಪಡೆದುಕೊಳ್ಳಬೇಕೆಂದು ಹೇಳಿದರು.
ಅಭ್ಯಾಸ ಮಾಡಲು ಅವಕಾಶ ಕೊಡಿ: ಬಿಬಿಎಂಪಿ ಹಿರಿಯ ಅಧಿಕಾರಿ ಲಲಿತ ಕನ್ಯಾಗಪ್ಪ ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಪೂರಕ ವಾತಾವರಣ ಕಲ್ಪಿಸಿಕೊಡಬೇಕು. ಪಠ್ಯ ವಿಷಯಗಳಿಗೆ ಸಂಬಂಧಿಸಿದಂತೆ ಅಗತ್ಯವಾದ ಸಾಮಗ್ರಿಗಳನ್ನು ಪೂರೈಸಬೇಕು. ಮಕ್ಕಳ ಆಯ್ದ ವಿಷಯಗಳನ್ನು ಅಭ್ಯಾಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು, ಸಮುದಾಯದ ಹಿರಿಯರನ್ನು ಸನ್ಮಾನಿಸಲಾಯಿತು. ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟಶಿವಪ್ಪ, ಗೌರವಾಧ್ಯಕ್ಷ ಕೆ.ಮರಿಯಪ್ಪ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಸುಬ್ರಮಣಿ, ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್.ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎನ್.ತಾಯಲೂರಪ್ಪ, ಯುವ ವೇದಿಕೆ ಅಧ್ಯಕ್ಷ ಕೋಳಿ ಶ್ರೀನಿವಾಸ್, ಎನ್.ಶಂಕರ್, ಆದಿನಾರಾಯಣ, ಕಾರ್ಯದರ್ಶಿ ಬಿ.ಎಂ.ಶಂಕರಪ್ಪ, ರಮೇಶ್, ಎನ್.ಲೋಕೇಶ್ ಪಾಲ್ಗೊಂಡಿದ್ದರು.