Advertisement

ನವಿಲೂರಿನಲ್ಲಿ ಕದಂಬ ಕಾಲದ ಶಾಸನ ಶೋಧ

05:58 PM Nov 24, 2021 | Team Udayavani |

ಧಾರವಾಡ: ಇಲ್ಲಿಯ ನವಿಲೂರಿನ (ನವಲೂರು) ಜನತಾ ಪ್ಲಾಟಿನಲ್ಲಿರುವ ಶಿವಾನಂದ ಮಾದರ ಅವರ ಮನೆಯ ಹಿಂಭಾಗದ ಜಾಗದಲ್ಲಿ ಭೂಮಿಯ ಅಡಿಯಲ್ಲಿ ಹುದುಗಿದ್ದ ಕದಂಬ ಮಹಾಮಂಡಳೇಶ್ವರ ಮನೆತನದ ಮುಮ್ಮಡಿ ಜಯಕೇಶಿಯ ಕಾಲದ ಹೊಸ ಶಾಸನವೊಂದು ಪತ್ತೆಯಾಗಿದೆ.

Advertisement

ಮಾದರ ಮನೆ ಹಿಂಭಾಗ ಸ್ವತ್ಛಗೊಳಿಸುವಾಗ ಭೂಮಿಯಲ್ಲಿ ಹುಗಿದಿದ್ದ ಈ ಶಾಸನ ಬೆಳಕಿಗೆ ಬಂದಿದೆ. 6 ಅಡಿ ಎತ್ತರ 3 ಅಡಿ ಅಗಲದ ಈ ಶಾಸನದ ಮೇಲ್ಭಾಗದ 2 ಅಡಿಯ ಮಧ್ಯದಲ್ಲಿ ದೇವಾಲಯದ ಮಂಟಪವಿದ್ದು, ಶಿವಲಿಂಗವನ್ನು ಧೂಪಾರತಿಯೊಂದಿಗೆ ಪೂಜಿಸುತ್ತಿರುವ ಕಾಳಾಮುಖ ಯತಿಯಿದ್ದಾನೆ.

ಶಿವಲಿಂಗದ ಬಲಭಾಗದಲ್ಲಿ ಕುಳಿತ ನಂದಿ, ಎಡಭಾಗದಲ್ಲಿ ಕರುವಿಗೆ ಹಾಲು ಕುಡಿಸುತ್ತಿರುವ ಆಕಳುಗಳ ಉಬ್ಬುಶಿಲ್ಪಗಳಿವೆ. ಅಂತೆಯೇ ಬಲಭಾಗದ ಮೇಲ್ಭಾಗದಲ್ಲಿ ಸೂರ್ಯ, ಎಡಭಾಗದಲ್ಲಿ ಖಡ್ಗ, ಚಂದ್ರರ ಉಬ್ಬುಶಿಲ್ಪಗಳಿವೆ. ಕೆಳಗೆ 2 ಚಿಕ್ಕ ಪಟ್ಟಿಕೆಯಲ್ಲಿ ಎರಡು ಸಾಲುಗಳ ಶಾಸನವಿದ್ದು, ಅದರಲ್ಲಿ ಶಿವ ಮತ್ತು ವರಾಹವತಾರ ವಿಷ್ಣುವಿನ ಸ್ತುತಿಗಳಿವೆ. ಕೆಳಗಿನ ದೊಡ್ಡ ಫಲಕದಲ್ಲಿ 37 ಸಾಲುಗಳ ಶಾಸನವನ್ನು ಅತ್ಯಂತ ಸುಂದರವಾದ ಅಕ್ಷರಗಳಲ್ಲಿ ಆಳವಾಗಿ ಗ್ರಾನೈಟ್‌ ಕಲ್ಲಿನಲ್ಲಿ ಕೆತ್ತಲಾಗಿದೆ.

ಗೋವೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಸುಪ್ರಸಿದ್ಧ ಗೋವೆಯ ಕದಂಬ ಮಹಾಮಂಡಳೇಶ್ವರ ಮನೆತನದ ಮುಮ್ಮಡಿ ಜಯಕೇಶಿಯ ಕಾಲದ ಶಾಸನವಿದಾಗಿದೆ. ಜಯಕೇಸಿದೇವ ವರ್ಷದ 9ನೆಯ ರಾಕ್ಷಸ ಸಂವತ್ಸರದ ಶ್ರಾವಣ ಬಹುಳ ಛಟ್ಟಿ ವಡ್ಡವಾರದಂದು ಈ ಶಾಸನ ಬರೆಸಲಾಗಿದೆ. ಇದು ಕ್ರಿ.ಶ.1186ರಲ್ಲಿ ಬರುತ್ತದೆ.

ಕದಂಬ ಶಿವಚಿತ್ತ ವೀರ ಪೆರ್ಮಾಡಿ ದೇವರಸರು ಕೊಟ್ಟ ಸರ್ವ ನಮಸ್ಯದ ಪಿರಿಯ ಬ್ರಹ್ಮಪುರಿ ಮತ್ತು ಪಿರಿಯ ಅಗ್ರಹಾರವಾದ ನವಿಲೂರ 200 ಮಹಾಜನರು ಗವರೆಗಳ (ವರ್ತಕರ ಪ್ರಕಾರ) ಸಭಾಮಂಟಪದಲ್ಲಿ ಮಹಾನಾಡಾಗಿ ಸೇರಿ, ಬಿಲ್ಲ ಮೂನೂರ್ವರು ಎಂದು ಕರೆಸಿಕೊಳ್ಳುವ ಆಯುಧ ಜೀವಿಗಳ ಸಂಘದವರು ಕಟ್ಟಿಸಿದ ಬಿಲ್ಲೇಶ್ವರ ದೇವರ ನೈವೇದ್ಯ, ನಂದಾದೀಪ, ಚೈತ್ರ ಪವಿತ್ರ ಹಬ್ಬಗಳಿಗಾಗಿ ಬಿಟ್ಟ ಭೂದಾನ, ಹೂದೋಟ, ನಿವೇಶನ, ಹಣದಾನ ಮತ್ತು ಸುಂಕದಾನಗಳನ್ನು ಈ ಶಾಸನವು ತಿಳಿಸುತ್ತದೆ.

Advertisement

ಬಿಲ್ಲುಗಾರರು, ಕುರಿಬರು, ಕಬ್ಬಿಲರು ಬಿಟ್ಟ ಸುಂಕ ದಾನಗಳನ್ನೂ ತಿಳಿಸುತ್ತದೆ. ಕೊನೆಯಲ್ಲಿ ಈ ಬಿಲ್ಲೇಶ್ವರ ದೇವಸ್ಥಾನದ ಸ್ಥಾನಪತಿಗಳು ಕೇದಾರ ಜೀಯರೆಂದು ಹೆಸರಿಸುತ್ತದೆ. ಮಹಾಜನರು ಮತ್ತು ಬಿಲ್ಲ ಮೂನೂರ್ವರನ್ನು ಅವರ ವಿಶೇಷಣ ಗಳೊಂದಿಗೆ ಶಾಸನವು ಬಣ್ಣಿಸುತ್ತದೆ. ಸದ್ಯ ಊರಲ್ಲಿ ಕೇವಲ 2 ಶಾಸನಗಳು ಮತ್ತು 2 ವೀರಗಲ್ಲುಗಳು ಇವೆ. ಈ ಕ್ಷೇತ್ರ ಕಾರ್ಯದ ಅಧ್ಯಯನಕ್ಕೆ ಸ್ಥಳೀಯರಾದ ಚೆನ್ನಯ್ಯಸ್ವಾಮಿ ಜಿ.ಹಿರೇಮಠ, ಹನುಮಂತ ಪೂಜಾರಿ, ಮಂಜುನಾಥ ಬಡಕುರಿ, ಶಿವಾನಂದ ಮಾದರ ಮತ್ತು ರೇಖಾ ಶೆಟ್ಟರ ಸಹಕಾರ ನೀಡಿದ್ದಾರೆಂದು ಸಂಶೋಧಕಿ ಗೋಗಿ ತಿಳಿಸಿದ್ದಾರೆ. ಪ್ರಾಚೀನ ಕಾಲದಲ್ಲಿ ನವಿಲೂರು ಒಂದು ಜೈನ ಕೇಂದ್ರವಾಗಿತ್ತು.

ಉತ್ತರ ಕರ್ನಾಟಕದ ಶಾಸನಗಳಲ್ಲಿ ಮತ್ತು ಶ್ರವಣಬೆಳಗೊಳದ ಶಾಸನಗಳಲ್ಲಿ ನವಿಲೂರು ಸಂಘದ ವಿವರಗಳಿವೆ. ಇದು ಜೈನಮುನಿಗಳ ಸಂಘವಾಗಿದ್ದು, ಇದರ
ಮೂಲಸ್ಥಾನ ನವಿಲೂರೇ ಆಗಿತ್ತು. ಈ ಊರಿಗೆ ಈ ಹೆಸರು ಬರಲು ಕಾರಣ ಇಲ್ಲಿದ್ದ ಸರಸ್ವತಿ ದೇವಾಲಯ. ಅವಳ ವಾಹನ ನವಿಲು. ಆದರೆ ಈಗ ಪ್ರಾಚೀನ ದೇವಾಲಯಗಳು ಇಲ್ಲಿಲ್ಲ. ಆದರೆ ಶಾಸನ ದೊರೆತಿರುವ ಸ್ಥಳದಲ್ಲಿಯೇ ದೇವಾಲಯದ ಅಡಿಪಾಯವಿದೆ. ಅಲ್ಲಿ ಗಣಪತಿ ವಿಗ್ರಹವೊಂದು ದೊರೆತಿತ್ತೆಂದು ಶಿವಾನಂದ ಮಾದರ ತಿಳಿಸಿದರು.

ಭೂದಾನದ ವಿವರಗಳನ್ನು ನೀಡುವಾಗ ಅಗಸ್ತೇಶ್ವರ, ಹುಲಿಯಮೇಶ್ವರ ಮತ್ತು ಕುಂಭೇಶ್ವರದೇವರ ಭೂಮಿಯ ಉಲ್ಲೇಖ ಬರುವುದರಿಂದ ಈ ದೇವಾಲಯಗಳು ಈ ಊರಿನಲ್ಲಿದ್ದವೆಂದು ತಿಳಿದು ಬರುತ್ತದೆ. ಬಿದಿರು, ಕಳಲೆಗಳು ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿದ್ದವು. ಎಂದರೆ ಊರ ಸುತ್ತ ಕಾಡಿತ್ತು. ಭತ್ತ, ಮಾವಿನಹಣ್ಣುಗಳ ಉಲ್ಲೇಖವೂ ಶಾಸನದಲ್ಲಿ ಇರುವುದರಿಂದ ಅವುಗಳನ್ನು ಇಲ್ಲಿ ಬೆಳೆಯುತ್ತಿದ್ದರೆಂದು ಸ್ಪಷ್ಟವಾಗುತ್ತದೆ.
ಹನುಮಾಕ್ಷಿ ಗೋಗಿ,
ಶಾಸನ ತಜ್ಞರು,ಧಾರವಾಡ.

Advertisement

Udayavani is now on Telegram. Click here to join our channel and stay updated with the latest news.

Next