Advertisement

ಕ್ಯೂಆರ್‌ ಕೋಡ್‌ ಕಳುಹಿಸಿ ವಂಚನೆ

10:22 AM Oct 09, 2021 | Team Udayavani |

ಬೆಂಗಳೂರು: “ಸಿಲಿಕಾನ್‌ ಸಿಟಿಯ ಮನೆ ಮತ್ತು ಕಟ್ಟಡ ಮಾಲೀಕರೇ ಎಚ್ಚರ!’ ಆನ್‌ಲೈನ್‌ ವೆಬ್‌ಸೈಟ್‌ ಅಥವಾ ಆ್ಯಪ್‌ಗಳಲ್ಲಿ ಮನೆ, ವಾಣಿಜ್ಯ ಮಳಿಗೆಗಳು ಬಾಡಿಗೆಗೆ ಇವೆ ಎಂಬ ಜಾಹೀರಾತು ಆಧರಿಸಿ ವಂಚಿಸುವ ಜಾಲವೊಂದು ನಗರದಲ್ಲಿ ಸಕ್ರಿಯವಾಗಿದೆ.

Advertisement

ಕಳೆದ ಎರಡು ವರ್ಷಗಳಿಂದ ಕೊರೊನಾ ಆರ್ಭಟಕ್ಕೆ ಇಡೀ ವಿಶ್ವವೇ ನಲುಗಿದೆ. ಈ ವೇಳೆ ಲಕ್ಷಾಂತರ ಜೀವಗಳು ಮಹಾಮಾರಿಗೆ ಬಲಿಯಾದವು. ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡರು. ಆರ್ಥಿಕ ಪರಿಸ್ಥಿತಿ ಕುಂಠಿತವಾಯಿತು. ಅದೇ ವೇಳೆ ಸಿಲಿಕಾನ್‌ ಸಿಟಿಯಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದ ಸಾವಿರಾರು ಮಂದಿ ಬೆಂಗಳೂರು ತೊರೆದಿದ್ದರಿಂದ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳು ಖಾಲಿಯಾಗಿದ್ದವು.

ಮನೆ ಗೇಟಿನ ಮುಂಭಾಗ ಸೇರಿ ಎಲ್ಲೆಂದರಲ್ಲಿ ಮನೆ ಬಾಡಿಗೆಗೆ ಇದೆ ಎಂಬ ನಾಮಫ‌ಲಕಗಳು ನೇತಾಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಈ ಮಧ್ಯೆ ಕಳೆದ ಒಂದು ವರ್ಷದಿಂದ ಮನೆಗಳಿಗೆ ಬಾಡಿಗೆದಾರರು ಬಾರದ ಹಿನ್ನೆಲೆಯಲ್ಲಿ ಮಾಲೀಕರು ಆನ್‌ಲೈನ್‌, ಆ್ಯಪ್‌ಗಳ ಮೊರೆ ಹೋಗಿದ್ದಾರೆ. ಓಎಲ್‌ ಎಕ್ಸ್‌, ಮ್ಯಾಜಿಕ್‌ ಬ್ರಿಕ್ಸ್‌, 99 ಎರ್ಕೆಸ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟ್ರಾಗ್ರಾಂ ಇತರೆಡೆ ಮನೆ ಬಾಡಿಗೆಗೆ ಇದೆ ಎಂದು, ಮನೆ ಒಳಾಂಗಣದ ಫೋಟೋಗಳನ್ನು ತೆಗೆದು ಜಾಹೀರಾತು ನೀಡಲು ಆರಂಭಿಸಿದ್ದಾರೆ.

ಅದರೊಂದಿಗೆ ಮೊಬೈಲ್‌ ನಂಬರ್‌ ಕೂಡ ಉಲ್ಲೇಖೀಸುತ್ತಿದ್ದಾರೆ. ಇದೀಗ ಅದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್‌ ವಂಚಕರು ಕರೆ, ಕ್ಯೂಆರ್‌ ಕೋಡ್‌ ಮೂಲಕ ಮನೆ ಮಾಲೀಕರ  ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಂಚನೆ ಹೇಗೆ ?: ಸಾಮಾಜಿಕ ಜಾಲತಾಣ ಮತ್ತು ವೆಬ್‌ಸೈಟ್‌ಗಳ ಮೂಲಕ ನೀಡುವ ಜಾಹೀರಾತು ನೋಡಿ, ಸೈಬರ್‌ ವಂಚಕರು, ಅದರಲ್ಲಿರುವ ಮನೆ ಮಾಲೀಕರ ನಂಬರ್‌ಗೆ ಕರೆ ಮಾಡುತ್ತಾರೆ. ಬಳಿಕ

Advertisement

ಮನೆಯ ಒಳಾಂಗಣದ ಫೋಟೋಗಳನ್ನು ನೋಡಿದ್ದೇವೆ. ಮನೆ ಇಷ್ಟವಾಗಿದೆ. ಬೇರೆ ಯಾರಿಗೂ ಮನೆ ಬಾಡಿಗೆ ಕೊಡಬೇಡಿ. ಈಗಲೇ ಮುಂಗಡ ಹಣ ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ ಎಂದು ನಂಬಿಸುತ್ತಾರೆ.

ನಂತರ ತಾವು ಕಳುಹಿಸುವ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ, ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ ಎಂದು ನಂಬಿಸಲು ಹತ್ತು ಅಥವಾ 100 ರೂ. ಹಾಕುತ್ತಾರೆ. ನಂತರ ಕ್ಯೂಆರ್‌ ಕೋಡ್‌ ಕಳುಹಿಸುತ್ತಾರೆ. ಇತ್ತ ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ಮನೆ ಮಾಲೀಕರು, ಹಣ ಬಂದಿರುವುದಾಗಿ ಪ್ರತಿಕ್ರಿಯೆ ನೀಡುತ್ತಾರೆ. ಈ ವೇಳೆ ಮನೆ ಮಾಲೀಕರ ಖಾತೆಗೆ ಮಾಲ್‌ವೇರ್‌ಗಳನ್ನು ಬಿಟ್ಟು ಮೊಬೈಲ್‌ ಸೇರಿ ಅವರ ಎಲ್ಲ ಗೌಪ್ಯ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

ಸೆಂಡ್‌ ಬದಲು ರಿಸೀವ್‌ ಕಳುಹಿಸಿ ವಂಚನೆ: ನಂತರ ಭಾರೀ ಮೊತ್ತ ಕಳುಹಿಸುವುದಾಗಿ ಆರೋಪಿಗಳು ಮತ್ತೂಮ್ಮೆ ಕ್ಯೂಆರ್‌ ಕೋಡ್‌ ಕಳುಹಿಸುತ್ತಾರೆ. ಆದರೆ, ಈ ವೇಳೆ ಸೆಂಡ್‌ ಬದಲು (ಹಣ ಕಳುಹಿಸುವುದು) ರಿಸೀವ್‌(ವಾಪಸ್‌ ಬರುವಂತಹ) ಲಿಂಕ್‌ ಕಳುಹಿಸುತ್ತಾರೆ. ಆಗ ಮನೆ ಮಾಲೀಕರು ಆ ಕ್ಯೂಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡುತ್ತಿದ್ದಂತೆ ಅವರ ಖಾತೆಯಲಿದ್ದ ಹಣ ಸಂಪೂರ್ಣವಾಗಿ ಆರೋಪಿಗಳ ಖಾತೆಗೆ ಸ್ವಯಂ ಚಾಲಿತವಾಗಿ ವರ್ಗಾವಣೆ ಆಗುತ್ತದೆ. ಮತ್ತೂಂದೆಡೆ ಕೆಲವೊಮ್ಮೆ ಓಟಿಪಿ ಪಡೆದು ವಂಚಿಸುತ್ತಾರೆ.

ಈ ಮೊದಲು ಓಎಲ್‌ಎಕ್ಸ್‌ನಲ್ಲಿ ನಿವೇಶನ, ವಸ್ತುಗಳು, ವಾಹನಗಳ ಖರೀದಿಸಿ ಹೆಸರಿನಲ್ಲಿ ವಂಚಿಸುತ್ತಿದ್ದರು. ಇದೀಗ ಬಾಡಿಗೆ ಮನೆ ನೆಪದಲ್ಲಿ ವಂಚಿಸಲು ಆರಂಭಿಸಿದ್ದಾರೆ ಎಂದು ಸೈಬರ್‌ ಕ್ರೈಂ ಪೊಲೀಸರು ಮಾಹಿತಿ ನೀಡಿದರು.

 ಮನೆ ಬೇಕಾದವರು ಸ್ಥಳಕ್ಕೆ ಹೋಗಲಿ-

ಸಾರ್ವಜನಿಕರು ತಮಗೆ ಪರಿಚಯವಿರುವವರು, ಆಪ್ತರು ಕಳುಹಿಸುವ ಕ್ಯೂಆರ್‌ ಕೋಡ್‌ ಮಾತ್ರ ಸ್ಕ್ಯಾನ್‌ ಮಾಡಿ, ಅಪರಿಚಿತ ವ್ಯಕ್ತಿಗಳು ಕಳುಹಿಸುವ ಸ್ಕ್ಯಾನ್‌ ಮಾಡಬೇಡಿ. ಒಂದು ವೇಳೆ ಬಾಡಿಗೆ ಮನೆ ಬೇಕಾದಲ್ಲಿ ಅವರೇ ನೇರವಾಗಿ ಬಂದು ಮನೆ ನೋಡಲಿ, ನಂತರ ಹಣದ ವ್ಯವಹಾರ ನಡೆಸಿ. ಅದು ಹೊರತು ಪಡಿಸಿ ಪೋನ್‌ ಅಥವಾ ಇತರೆ ಆ್ಯಪ್‌ಗಳು, ಕ್ಯೂಆರ್‌ ಕೋಡ್‌ಗಳ ಮೂಲಕ ಯಾವುದೇ ಹಣಕಾಸಿನ ವ್ಯವಹಾರ ನಡೆಸಬೇಡಿ ಎಂದು ಸೈಬರ್‌ ಕ್ರೈಂ ಪೊಲೀಸರು ಮನವಿ ಮಾಡಿದ್ದಾರೆ.

ವಕೀಲರ ಪತ್ನಿಗೆ ವಂಚನೆ-

ನಗರದ ಸಿಇಎನ್‌ ಠಾಣೆಯೊಂದರಲ್ಲಿ ವಕೀಲರ ಪತ್ನಿಯೊಬ್ಬರು ತಮಗೆ ಲಕ್ಷಾಂತರ ರೂ. ವಂಚನೆ ಆಗಿದೆ ಎಂದು ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ವಕೀಲರ ಪತ್ನಿ ತಮ್ಮ ಮನೆಗಳು ಬಾಡಿಗೆಗೆ ಇದೆ ಎಂದು ಓಎಲ್‌ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದರು.

ಅದನ್ನು ಗಮನಿಸಿದ ವಂಚಕರು, ಮಹಿಳೆಗೆ ಕರೆ ಮಾಡಿ ಮನೆ ಬಾಡಿಗೆ ಪಡೆಯುವುದಾಗಿ ನಂಬಿಸಿದ್ದಾರೆ. ನಂತರ ಮುಂಗಡ ಹಣ ಕೊಡುವುದಾಗಿ ಹೇಳಿ ಕ್ಯೂಆರ್‌ ಕೋಡ್‌ ಕಳುಹಿಸಿದ್ದಾರೆ. ಅದನ್ನು ಸ್ಕ್ಯಾನ್‌ ಮಾಡುತ್ತಿದ್ದಂತೆ ಮಹಿಳೆಯ ಖಾತೆಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಹಣ ಅನ್ನು ಆರೋಪಿಗಳು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಅದನ್ನು ಅರಿತ ಮಹಿಳೆ ಕೂಡಲೇ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದು, ಇದೀಗ ಆರೋಪಿಗಳ ಖಾತೆಯಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಹಣ ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕ್ಷಣಾರ್ಧದಲ್ಲಿ ಹಣ ಜಪ್ತಿ-

ವಂಚನೆ ಸಂಬಂಧ ನಗರದ ಎಂಟು ಸೈಬರ್‌ ಠಾಣೆಗಳಲ್ಲಿ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಕೆಲವು ಮನೆ ಮಾಲೀಕರು ಎಚ್ಚೆತ್ತುಕೊಂಡು ಪೊಲೀಸ್‌ ಸಹಾಯವಾಣಿ ಅಥವಾ ಸೈಬರ್‌ ಠಾಣೆಗೆ ದೂರು ನೀಡುತ್ತಿದ್ದಾರೆ. ನಂತರ ಸೈಬರ್‌ ಕ್ರೈಂ ತಂಡ ಕ್ಷಣಾರ್ಧದಲ್ಲಿ ಆರೋಪಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಜಪ್ತಿ ಮಾಡುತ್ತಿದ್ದಾರೆ. ಹೀಗಾಗಿ ಯಾರೇ ವಂಚನೆಗೊಳಗಾದರೆ ಕೂಡಲೇ ಪೊಲೀಸ್‌ ಸಹಾಯವಾಣಿ 112 ಅಥವಾ 100ಗೆ ಕರೆ ಮಾಡಿ ದೂರು ನೀಡಿ, ಹಣ ಉಳಿಸಿಕೊಳ್ಳಬಹುದು ಎಂದು ಸೈಬರ್‌ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.

 

  • ಮೋಹನ್‌ ಭದ್ರಾವತಿ
Advertisement

Udayavani is now on Telegram. Click here to join our channel and stay updated with the latest news.

Next