ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿಯ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ಸರ್ಕಾರ ನಿಷೇಧಿಸಿ, ಹಸಿರು ಪಟಾಕಿ ಬಳಸಲು ಅಸ್ತು ಎಂದಿದೆ. 2018ರ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ಮತ್ತು ಮಕ್ಕಳು ಹಾಗೂ ಕೋವಿಡ್ ಸೋಕಿತರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹಸಿರು ಪಟಾಕಿ ಮಾರಾಟದ ಕುರಿತಾಗಿಯೂ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ನವೆಂಬರ್ 16ರವರೆಗೆ ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಹಾಗಾದರೇ ಏನಿದು ಹಸಿರು ಪಟಾಕಿ?
ಕೇಂದ್ರ ಸಚಿವ ಡಾ.ಹರ್ಷವರ್ಧನ್ ಕಳೆದ ವರ್ಷ ದೆಹಲಿಯಲ್ಲಿ ಹಸಿರು ಪಟಾಕಿಯನ್ನು ಅನಾವರಣಗೊಳಿಸಿದ್ದರು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಹಾಗೂ ಎನ್‌ಇಇಆರ್‌ಐನ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಈ ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ.
ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ. ಅಲ್ಲದೆ ಇದು ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ 30%ರಷ್ಟು ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುತ್ತದೆ.
ಹಸಿರು ಪಟಾಕಿ ಲಭ್ಯತೆ ಎಲ್ಲಿ? ಗುರುತಿಸುವುದು ಹೇಗೆ?
ಹಸಿರು ಪಟಾಕಿಗಳ ಉತ್ಪಾದನೆಗೆ ಸಂಬಂಧಿಸಿದಂತೆ ಸರ್ಕಾರ ದೇಶದ 230 ಪಟಾಕಿ ಉತ್ಪಾದನಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಲಭ್ಯತೆ ಕುರಿತಾಗಿ ಹಾಗೂ ಬೇರೆ ಪಟಾಕಿಗಳ ನಡುವೆ, ಹಸಿರು ಪಟಾಕಿಗಳನ್ನು ಗುರುತಿಸುವಲ್ಲಿ ಜನರಲ್ಲಿ ಗೊಂದಲ ಉಂಟಾಗಿದೆ.
ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಅಧೀಕೃತ ಪರವಾನಿಗೆ ಪಡೆದಿರುವ ಮಳಿಗೆಗಳಿಗಷ್ಟೇ ತಾತ್ಕಾಲಿಕ ಮಾರಾಟಕ್ಕೆ ಅನುಮತಿ ನೀಡಿದೆ. ಗ್ರಾಹಕರು ತಾವು ಕೊಳ್ಳುವ ಪಟಾಕಿಗಳು ಹಸಿರು ಪಟಾಕಿ ಹೌದೆ ? ಇಲ್ಲವೆ? ಎಂಬುದನ್ನು ಖಾತರಿಪಡಿಸಿಕೊಳ್ಳಲು ಪ್ಯಾಕ್‌ನ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅರಿತುಕೊಳ್ಳಬಹುದಾಗಿದೆ.