ಬೆಂಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗಳ ಅಂಕಪಟ್ಟಿಗೆ ಇನ್ನಷ್ಟು ಸುರಕ್ಷೆ ಒದಗಿಸುವುದಕ್ಕಾಗಿ ಕ್ಯುಆರ್ ಕೋಡ್ ಅಳವಡಿಸುವ ಬಗ್ಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಅಂಕಪಟ್ಟಿ ನಕಲು ತಡೆಯಲು, ಶೀಘ್ರ ಮಾಹಿತಿ ಪಡೆಯಲು ಅನುಕೂಲಕರ ಎನ್ನು ವುದು ಮಂಡಳಿಯ ಪ್ರತಿಪಾದನೆ. ಸರಕಾರದ ಅನುಮತಿ ದೊರೆತರೆ 2020-21ನೇ ಸಾಲಿನ ಅಂಕಪಟ್ಟಿಯಲ್ಲೇ ಈ ವ್ಯವಸ್ಥೆ ಬರುವ ಸಾಧ್ಯತೆ ಇದೆ.
ಬಹುತೇಕ ಎಲ್ಲ ಔದ್ಯೋಗಿಕ ಮತ್ತು ಶೈಕ್ಷಣಿಕ ಉದ್ದೇಶ ಗಳಿಗೆ ಎಸೆಸೆಲ್ಸಿ ಅಂಕಪಟ್ಟಿ ಅಗತ್ಯ. ಇದಕ್ಕೆ ಎಷ್ಟು ಭದ್ರತೆ ಒದಗಿಸಿದರೂ ನಕಲಿ ಅಂಕಪಟ್ಟಿ ಸೃಷ್ಟಿಸುವವರು ಹೊಸ ಮಾರ್ಗಗಳನ್ನು ಪತ್ತೆಹಚ್ಚುತ್ತಲೇ ಇರುತ್ತಾರೆ. ಹೀಗಾಗಿ ಕ್ಯುಆರ್ ಕೋಡ್ ಅಳವಡಿಸಲು ನಿರ್ಧರಿಸಲಾಗಿದೆ.
ಡಿಜಿ ಲಾಕರ್‌ಗೆ ಅಂಕಪಟ್ಟಿ ಅಪ್‌ಡೇಟ್ ಮಾಡುವ ಕಾರ್ಯವೂ ನಡೆಯುತ್ತಿದೆ. ಇದೆಲ್ಲ ಪೂರ್ಣಗೊಂಡ ಅನಂತರ ಕ್ಯುಆರ್ ಕೋಡ್ ಅಳವಡಿಸುವ ಚಿಂತನೆ ಇದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.
ಎಲ್ಲ ದಾಖಲೆಗಳ ಡಿಜಿಟಲೀಕರಣ ಬಹು ತೇಕ ಪೂರ್ಣಗೊಳ್ಳುತ್ತಿದೆ. ಅಂಕಪಟ್ಟಿ ಗಳಿಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಅಂಕಪಟ್ಟಿಗಳ ಸುರಕ್ಷೆ ಸಂಬಂಧ ಕ್ಯುಆರ್ ಕೋಡ್ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ.
–ವಿ. ಸುಮಂಗಲಾ, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ
- ರಾಜು ಖಾರ್ವಿ ಕೊಡೇರಿ