ಬೆಂಗಳೂರು: ಕೇಂದ್ರದ ಗುಜರಿ ನೀತಿ ಬೆನ್ನಲ್ಲೇ ರಾಜ್ಯದಲ್ಲಿಯೂ ಗುಜರಿಗೆ ಸೇರಲಿರುವ ವಾಹನಗಳ ಪತ್ತೆಗೆ ಕ್ಯುಆರ್ ಕೋಡ್ ರೂಪಿಸಲು ಸರಕಾರ ಮುಂದಾಗಿದೆ.
ರಾಜ್ಯದಲ್ಲಿ ಅಂದಾಜು 40 ಲಕ್ಷಕ್ಕೂ ಅಧಿಕ ಗುಜರಿ ಸೇರಬೇಕಾದ ವಾಹನಗಳಿವೆ. ಇಂತಹ ವಾಹನಗಳ ಶೋಧಕ್ಕೆ ಸಾರಿಗೆ ಇಲಾಖೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿದೆ.
ಇದಕ್ಕಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ, ಪ್ರತ್ಯೇಕ ಕ್ಯುಆರ್ ಕೋಡ್ ರೂಪಿಸಲಾಗುತ್ತಿದೆ. ಬಳಿಕ ಅದಕ್ಕೆ ವಾಹನಗಳ ಆರ್‌ಸಿ ನಂಬರ್ ಲಿಂಕ್ ಮಾಡಲಾಗುತ್ತದೆ. ಅದರ ಸ್ಟಿಕರ್‌ಗಳನ್ನು ವಾಹನಗಳ ಮೇಲೆ ಅಂಟಿಸಲಾಗುತ್ತದೆ. ವಿವಿಧ ಪ್ರಕಾರದ ವಾಹನಗಳಿಗೆ ವಿವಿಧ ಬಣ್ಣಗಳ ಸ್ಟಿಕರ್ ಇರಲಿದೆ. ಇದನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ ಆ ವಾಹನ ಎಷ್ಟು ವರ್ಷ ಹಳೆಯದು, ಯಾರ ಹೆಸರಿನಲ್ಲಿದೆ ಎನ್ನುವುದು ಸೇರಿದಂತೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಅದನ್ನು ಆಧರಿಸಿ ಗುಜರಿಗೆ ಕಳುಹಿಸುವ ಕೆಲಸ ನಡೆಯಲಿದೆ ಎಂದು ಸಾರಿಗೆ ಇಲಾಖೆ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ವಾರದಲ್ಲಿ ಪ್ರಸ್ತಾವನೆ :
ಈ ಸಂಬಂಧ ಪ್ರಸ್ತಾವನೆಯನ್ನು ವಾರದಲ್ಲಿ ಸರಕಾರಕ್ಕೆ ಕಳುಹಿಸಲಾಗುವುದು. ಪ್ರತೀ ಪ್ರಾದೇಶಿಕ ಸಾರಿಗೆ ಕಚೇರಿಗೆ ಸ್ಟಿಕರ್ ತಲುಪಿಸಲಾಗುತ್ತದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹಳೆಯ ವಾಹನಗಳಿಗೆ ಈ ಸ್ಟಿಕರ್‌ಗಳನ್ನು ಅಂಟಿಸುತ್ತಾರೆ. ಬಳಿಕ ಆ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಯುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಸ್ವಯಂ ಗುಜರಿ ಹಾಕಿದರೆ ಸಬ್ಸಿಡಿ? :
ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ಮುಂದೆ ಬಂದರೆ ರಾಜ್ಯ ಸರಕಾರ ಕೂಡ ಸಬ್ಸಿಡಿ ನೀಡಲು ಚಿಂತನೆ ನಡೆಸಿದೆ.
ಬಣ್ಣದ ಸ್ಟಿಕರ್‌ಗಳಿಂದ ಸುಲಭವಾಗಿ ಹಳೆಯ ವಾಹನ ಪತ್ತೆ ಹಚ್ಚುವುದರ ಜತೆಗೆ ಗುಜರಿ ನೀತಿಯ ನಿರ್ವಹಣೆ ಸರಳವಾಗಲಿದೆ. ಭವಿಷ್ಯದಲ್ಲಿ ಸಮ-ಬೆಸ ನೋಂದಣಿ ಸಂಖ್ಯೆಯ ವಾಹನಗಳ ಸಂಚಾರಕ್ಕೆ ನಿರ್ದಿಷ್ಟ ದಿನ ನಿಗದಿಪಡಿಸಿದರೆ ಅದರ ಅನುಷ್ಠಾನಕ್ಕೂ ಅನುಕೂಲ ಆಗಲಿದೆ. ಸದ್ಯ ಸಾರಿಗೆ ವಾಹನಗಳು ಮತ್ತು ಚತುಶ್ಚಕ್ರ ಖಾಸಗಿ ವಾಹನಗಳಿಗೆ ಇವುಗಳನ್ನು ಅಂಟಿಸಲು ಉದ್ದೇಶಿಸಲಾಗಿದೆ.
-ವಿಜಯಕುಮಾರ್ ಚಂದರಗಿ