ನವದೆಹಲಿ/ಕತಾರ್: ಗೂಢಚರ್ಯೆ ಆರೋಪದಲ್ಲಿ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಸಿಬಂದಿಗಳಿಗೆ ಕತಾರ್ ನ್ಯಾಯಾಲಯ ವಿಧಿಸಿರುವ ಮರಣದಂಡನೆ ಶಿಕ್ಷೆಯ ವಿರುದ್ಧದ ಭಾರತದ ಮೇಲ್ಮನವಿಯನ್ನು ಕತಾರ್ ಕೋರ್ಟ್ ಸ್ವೀಕರಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Odisha: ಕೋಣೆಯೊಳಗೆ ಹಾವು ಬಿಟ್ಟು ಪತ್ನಿ, ಮಗುವನ್ನು ಸಾಯಿಸಿದ ವ್ಯಕ್ತಿಯ ಬಂಧನ
ಗೂಢಚರ್ಯೆ ಆರೋಪದಲ್ಲಿ ಭಾರತದ ಎಂಟು ಮಂದಿ ನೌಕಾಪಡೆಯ ಮಾಜಿ ಸಿಬಂದಿಗಳಿಗೆ ಕತಾರ್ ನ್ಯಾಯಾಲಯ ಇತ್ತೀಚೆಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಮರಣದಂಡನೆ ಒಳಗಾಗಿರುವ ನೌಕಾಪಡೆಯ ಸಿಬಂದಿಗಳು ಕಳೆದ ವರ್ಷ ಆಗಸ್ಟ್ ನಿಂದ ಜೈಲಿನಲ್ಲಿದ್ದಾರೆ. ಆದರೆ ಅವರ ವಿರುದ್ಧದ ಆರೋಪಗಳನ್ನು ಕತಾರ್ ಅಧಿಕಾರಿಗಳು ಬಹಿರಂಗಗೊಳಿಸಿಲ್ಲವಾಗಿತ್ತು.
ಇದೀಗ ಮರಣದಂಡನೆ ಶಿಕ್ಷೆಯ ತೀರ್ಪಿನ ವಿರುದ್ಧ ಭಾರತ ಮೇಲ್ಮನವಿ ಸಲ್ಲಿಸಿದ್ದು, ಕತಾರ್ ಕೋರ್ಟ್ ಮೇಲ್ಮನವಿ ವಿಚಾರಣೆ ಕುರಿತು ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ವರದಿಯ ಪ್ರಕಾರ, ಭಾರತೀಯ ನೌಕಾಪಡೆಯ ಎಂಟು ಮಂದಿ ಹಲವು ಬಾರಿ ಕತಾರ್ ಕೋರ್ಟ್ ನಲ್ಲಿ ಬೇಲ್ ಗೆ ಅರ್ಜಿ ಸಲ್ಲಿಸಿದ್ದರೂ ಕೂಡಾ ವಜಾಗೊಳಿಸಲಾಗಿತ್ತು. ಕಳೆದ ತಿಂಗಳು ಕತಾರ್ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಶಿಕ್ಷೆಗೊಳಗಾದವರು: ಭಾರತೀಯ ನೌಕಾಪಡೆಯ ಹಿರಿಯ ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಾಕಾಲಾ, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಸಂಜೀವ್ ಗುಪ್ತಾ, ಕ್ಯಾಪ್ಟನ್ ನವ್ ತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಶಿಷ್ಠ ಹಾಗೂ ನಾವಿಕ ರಾಜೇಶ್ ಗೋಪ್ ಕುಮಾರ್.