ದಾಂಡೇಲಿ: ಬೃಹತ್ ಗಾತ್ರದ ಹೆಬ್ಬಾವೊಂದು ಮನೆಯ ಆವರಣದಲ್ಲಿ ಪ್ರತ್ಯಕ್ಷವಾದ ಘಟನೆ ಇಂದು ಭಾನುವಾರ ದಾಂಡೇಲಿ ತಾಲ್ಲೂಕಿನ ಕುಳಗಿ ಗ್ರಾಮದಲ್ಲಿ ನಡೆದಿದೆ.
ಅಂಚೆಪಾಲಕ ರಘುವೀರ್ ಗೌಡ ಮತ್ತು ಸ್ಥಳೀಯ ಗ್ರಾಮ ಪಂಚಾಯ್ತು ಸದಸ್ಯರಾದ ಮುರಳೀಧರ್ ಗೌಡ ಅವರ ಮನೆಯ ಆವರಣದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಹೆಬ್ಬಾವನ್ನು ಕಂಡೊಡನೆಯೆ ಮನೆಮಂದಿಯೆಲ್ಲ ಹೌಹಾರಿದ್ದರು. ಹಾವು ಬಂತೆಂದರೆ ದಾಂಡೇಲಿ ಸುತ್ತಮುತ್ತಲು ಥಟ್ಟಂನೆ ನೆನಪಿಗೆ ಬರುವ ಹೆಸರೆ ಸಾವಿರಾರು ಹಾವುಗಳನ್ನು ಸಂರಕ್ಷಿಸಿದ ಉರಗಪ್ರೇಮಿ ರಜಾಕ್ ಶಾ ಅವರ ಹೆಸರು.
ಹಾಗಾಗಿ ಮುರಳೀಧರ್ ಅವರು ರಜಾಕ್ ಶಾ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೆ ಸ್ಥಳಕ್ಕೆ ಭೇಟಿ ನೀಡಿದ ರಜಾಕ್ ಶಾ ಅವರು ಮುರಳೀಧರ್ ಅವರ ಮನೆಯ ಆವರಣದಲ್ಲಿ ಅವಿತುಕೂತಿದ್ದ ಹಾವನ್ನು ಸಾಹಸಿಕವಾಗಿ ಮತ್ತು ಅಷ್ಟೇ ಸುರಕ್ಷಿತವಾಗಿ ಹಿಡಿದು ಮನೆಮಂದಿಯ ಆತಂಕವನ್ನು ದೂರ ಮಾಡಿರುವುದಲ್ಲದೇ ಹಾವಿನ ಬಗ್ಗೆ ಜಾಗೃತಿಯನ್ನು ಮೂಡಿಸಿದ ಬಳಿಕ ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಈ ಸಂದರ್ಭದಲ್ಲಿ ದಾಂಡೇಲಿಯ ಪತ್ರಕರ್ತ ರಾಜೇಶ್ ತಳೇಕರ್ ಹಾಗೂ ಕರವೇ (ಪ್ರ) ಬಣದ ಯುವ ಘಟಕದ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕೊಠಾರಿಯವರು ಉಪಸ್ಥಿತರಿದ್ದರು. ರಜಾಕ್ ಶಾ ಅವರ ವನ್ಯಕಾಳಜಿಗೆ ಮುರಳೀಧರ್ ಗೌಡ ಮತ್ತು ರಘುವೀರ ಗೌಡ ಹಾಗೂ ಸ್ಥಳೀಯ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ, ಶ್ಲಾಘಿಸಿದ್ದಾರೆ.