ಹೊಸದಿಲ್ಲಿ: ಉತ್ತಮ ಫಾರ್ಮ್ನಲ್ಲಿರುವ ಭಾರತದ ಶಟ್ಲರ್ ಪಿವಿ ಸಿಂಧು ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಕೌಲೂನ್‌ನಲ್ಲಿ ನಡೆಯುತ್ತಿರುವ ಈ ಕೂಟದ ಪಂದ್ಯದಲ್ಲಿ ಸಿಂಧು ಕೇವಲ 39 ನಿಮಿಷಗಳ ಹೋರಾಟದಲ್ಲಿ ಜಪಾನಿನ ಅಯಾ ಒಹೋರಿ ಅವರನ್ನು 21-14, 21-17 ಗೇಮ್‌ಗಳಿಂದ ಕೆಡಹಿದರು.
ಏಕಮುಖವಾಗಿ ಸಾಗಿದ ಈ ಪಂದ್ಯದಲ್ಲಿ ಸಿಂಧು ಮೊದಲ ಗೇಮ್‌ನಲ್ಲಿ ಮುನ್ನಡೆ ಪಡೆದರಲ್ಲದೇ ಸುಲಭವಾಗಿ ಗೆದ್ದರು. ಆದರೆ ದ್ವಿತೀಯ ಗೇಮ್‌ನಲ್ಲಿ ಒಹೋರಿ ಸ್ವಲ್ಪಮಟ್ಟಿಗೆ ಪ್ರತಿಹೋರಾಟ ನೀಡಲು ಯಶಸ್ವಿಯಾದರು. ಆದರೆ ಗೆಲುವಿನಿಂದ ದೂರ ಉಳಿದರು.
ಸಿಂದು ಶುಕ್ರವಾರ ನಡೆಯುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಪಾನಿನ ಇನ್ನೋರ್ವ ಆಟಗಾರ್ತಿ ಅಕಾನೆ ಯಮಗುಚಿ ಅವರ ಸವಾಲನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಎಚ್‌ಎಸ್ ಪ್ರಣಯ್ ಸೋತು ಹೊರಬಿದ್ದಿದ್ದಾರೆ. 54 ನಿಮಿಷಗಳ ಹೋರಾಟದಲ್ಲಿ ಅವರು ಜಪಾನಿನ ಕಝುಮಸ ಸಕಾಯಿ ಅವರೆದುರು 21-11, 10-21, 15-21 ಗೇಮ್‌ಗಳಿಂದ ಶರಣಾದರು. ಈ ಮೊದಲು ಪಾರುಪಳ್ಳಿ ಕಶ್ಯಪ್ ಮತ್ತು ಸೌರಭ್ ವರ್ಮ ಮೊದಲ ಸುತ್ತಿನಲ್ಲಿಯೇ ಸೋತಿದ್ದರು.