ಹೊಸದಿಲ್ಲಿ: ಪಾದದ ನೋವಿಗೊಳಗಾಗಿರುವ ಭಾರತದವ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಕಾಮನ್ವೆಲ್ತ್ ಗೇಮ್ಸ್ ಸ್ಪರ್ಧೆಯ ಹೊತ್ತಿಗೆ ಸಂಪೂರ್ಣ ಫಿಟ್‌ನೆಸ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿರುವಾಗ ಸಿಂಧು ಬಲಗಾಲಿನ ಪಾದದ ನೋವಿಗೆ ಸಿಲುಕಿದ್ದರು. ಸ್ವಲ್ಪ ನೋವು ಇದೆಯಾದರೂ ಇದೇನೂ ಗಂಭೀರ ಸಮಸ್ಯೆ ಅಲ್ಲ ಎಂದು ವರದಿಯಾಗಿದೆ. ಹೀಗಾಗಿ ಭಾರತದ ಕ್ರೀಡಾಭಿಮಾನಿಗಳು ಸಮಾಧಾನದ ನಿಟ್ಟುಸಿರೆಳೆದಿದ್ದಾರೆ.
“ಎಲ್ಲ ಸಿದ್ಧತೆ ಸರಾಗವಾಗಿ ಸಾಗುತ್ತಿರುವಾಗಲೇ ದುರದೃಷ್ಟವಶಾತ್ ಪಾದದ ನೋವಿಗೆ ಸಿಲುಕಬೇಕಾಯಿತು. ಆದರೆ ಗೇಮ್ಸ್ ಸ್ಪರ್ಧೆ ಆರಂಭವಾಗುವಾಗ ಪೂರ್ತಿ ಚೇತರಿಸಿಕೊಳ್ಳುವ ವಿಶ್ವಾಸವಿದೆ’ ಎಂದು ಸಿಂಧು ಪಿಟಿಐಗೆ ತಿಳಿಸಿದರು. 2014ರ ಗ್ಲಾಸೊYà ಗೇಮ್ಸ್‌ನಲ್ಲಿ ಬಂಗಾರದ ಭರವಸೆ ಮೂಡಿಸಿದ್ದ 18ರ ಹರೆಯದ ಸಿಂಧು ಸೆಮಿಫೈನಲ್‌ನಲ್ಲಿ ಕೆನಡಾದ ಮೈಕೆಲ್ ಲೀಗೆ ಶರಣಾಗಿ ಕಂಚಿನ ಪದಕಕ್ಕೆ ತೃಪ್ತರಾಗಿದ್ದರು. ಆದರೆ ಈ 4 ವರ್ಷಗಳಲ್ಲಿ ಸಿಂಧು ಆಟ ಭಾರೀ ಪ್ರಗತಿ ಕಂಡಿದೆ. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದದ್ದು ಐತಿಹಾಸಿಕ ಸಾಧನೆಯಾಗಿ ದಾಖಲಾಗಿದೆ. ಹೀಗಾಗಿ ಗೋಲ್ಡ್ ಕೋಸ್ಟ್‌ನಲ್ಲಿ “ಗೋಲ್ಡನ್ ಮೆಡಲ್’ ಬೇಟೆಯಾಡುವುದು ಸಿಂಧುಗೆ ಕಷ್ಟವಲ್ಲ ಎಂಬುದೊಂದು ಲೆಕ್ಕಾಚಾರ.
“ಕಳೆದ ಸಲ ನಾನು ಕಂಚಿನ ಪದಕ ಜಯಿಸಿದ್ದೆ. ಈ ಬಾರಿ ಇದಕ್ಕಿಂತ ಮಿಗಿಲಾದ ಸಾಧನೆ ಮಾಡಬೇಕು. ನಮ್ಮ ಆಟಗಾರರು ಹೆಚ್ಚಿನ ಸಂಖ್ಯೆಯ ಬ್ಯಾಡ್ಮಿಂಟನ್ ಪದಕಗಳನ್ನು ಗೆಲ್ಲಲಿದ್ದಾರೆ’ ಎಂದು ಸಿಂಧು ಪುನರುತ್ಛರಿಸಿದರು.”ಎಲ್ಲರೂ ನನ್ನ ಮೇಲೆ ವಿಪರೀತ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿದೆ. ನನ್ನ ಅತ್ಯುತ್ತಮ ಆಟವನ್ನಿಲ್ಲಿ ಪ್ರದರ್ಶಿಸಲೇಬೇಕಿದೆ…’ ಎಂದು ಸಿಂಧು ಹೇಳಿದರು.