Advertisement

ಇಂಡಿಯ ಓಪನ್‌ ಬ್ಯಾಡ್ಮಿಂಟನ್‌ : ಫೈನಲಿಗೇರಿದ ಸಿಂಧು

01:26 PM Apr 02, 2017 | Team Udayavani |

ಹೊಸದಿಲ್ಲಿ: ನಿರೀಕ್ಷೆಯಂತೆ ಅಮೋಘ ಆಟದ ಪ್ರದರ್ಶನ ನೀಡಿದ ರಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತೆ ಪಿವಿ ಸಿಂಧು ಅವರು ವಿಶ್ವದ ಎರಡನೇ ರ್‍ಯಾಂಕಿನ ಕೊರಿಯದ ಸಂಗ್‌ ಜಿ ಹ್ಯುನ್‌ ಅವರನ್ನು ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಇಂಡಿಯ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಫೈನಲಿಗೇರಿದರು.

Advertisement

ಇಲ್ಲಿನ ಸಿರಿ ಫೋರ್ಟ್‌ ಕ್ರೀಡಾ ಸಂಕೀರ್ಣದಲ್ಲಿ ತೀವ್ರ ಪೈಪೋಟಿಯಿಂದ ಸಾಗಿದ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಪ್ರಚಂಡ ಹೋರಾಟ ಸಂಘಟಿಸಿ 21-18, 14-21, 21-14 ಗೇಮ್‌ಗಳಿಂದ ಹ್ಯುನ್‌ ಅವರನ್ನು ಉರುಳಿಸಿ ಪ್ರಶಸ್ತಿ ಸುತ್ತಿಗೇರಿದರು. 

ಚೊಚ್ಚಲ ಬಾರಿ ಫೈನಲಿಗೇರಿದ ವಿಶ್ವದ ಐದನೇ ರ್‍ಯಾಂಕಿನ ಸಿಂಧು ಪ್ರಶಸ್ತಿಗಾಗಿ ಒಲಿಂಪಿಕ್‌ ಚಾಂಪಿಯನ್‌ ಸ್ಪೇನ್‌ನ ಕರೋಲಿನಾ ಮರಿನ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ಪಂದ್ಯ ರವಿವಾರ ನಡೆಯಲಿದೆ. ಇದು ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್‌ ಚಿನ್ನ ಪಂದ್ಯದ ಪುನರಾ ವರ್ತನೆಯ ಹೋರಾಟವಾಗಿದೆ. ಈ ಬಾರಿ ಸೇಡು ತೀರಿಸಿಕೊಳ್ಳುವ ಅವಕಾಶ ಸಿಂಧು ಅವರಿಗಿದೆ. ತವರಿನ ಪ್ರೇಕ್ಷಕರ ಲಾಭದೊಂದಿಗೆ ಗೆಲ್ಲುವ ಕನಸಿ ನೊಂದಿಗೆ ಸಿಂಧು ಹೋರಾಡುವ ಸಾಧ್ಯತೆಯಿದೆ.

ಸಿಂಧು ಮತ್ತು ಮರಿನ್‌ ನಡುವಣ ಮುಖಾಮುಖೀ ಯಲ್ಲಿ ಸಿಂಧು 3 ಜಯ 5 ಸೋಲಿನ ದಾಖಲೆ ಹೊಂದಿದ್ದಾರೆ. ರಿಯೋ ಫೈನಲ್‌ನಲ್ಲಿ ಮರಿನ್‌ಗೆ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು ದುಬೈ ಯಲ್ಲಿ ನಡೆದ ಕೂಟದಲ್ಲಿ ಮರಿನ್‌ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದ ಸಾಧನೆ ಮಾಡಿದ್ದಾರೆ.

ಸಿಂಧು ಈ ವರ್ಷ ಇಷ್ಟರವರೆಗೆ ಕೇವಲ ಒಂದು ಪ್ರಶಸ್ತಿ ಜಯಿಸಿದ್ದಾರೆ. ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಕೂಟದ ಪ್ರಶಸ್ತಿ ಜಯಿಸಿರುವ ಸಿಂಧು ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಸಿಂಧು 2016ರಲ್ಲಿ ಚೀನ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದ ಪ್ರಶಸ್ತಿ ಜಯಿಸಿದ್ದರು.

Advertisement

ಈ ಮೊದಲು ನಡೆದ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್‌ ಮರಿನ್‌ ನಾಲ್ಕನೇ ಶ್ರೇಯಾಂಕದ ಜಪಾನಿನ ಅಕಾನೆ ಯಮಗುಚಿ ಅವರನ್ನು 21-16, 21-14 ಗೇಮ್‌ಗಳಿಂದ ಸುಲಭವಾಗಿ ಮಣಿಸಿ ಫೈಲಿಗೇರಿದರು. 

ಪ್ರಬಲ ಹೋರಾಟ: ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದವರೇ ಆದ ಸೈನಾ ನೆಹ್ವಾಲ್‌ ಅವ ರನ್ನು ಕೆಡಹಿದ್ದ ಸಿಂಧು ಸೆಮಿಫೈನಲ್‌ನಲ್ಲಿ ಗೆಲುವು ದಾಖಲಿಸಲು ಪ್ರಬಲ ಹೋರಾಟ ಸಂಘಟಿಸಿದರು. ಪ್ರತಿಯೊಂದು ಅಂಕಕ್ಕೂ ತೀವ್ರ ಹೋರಾಡಿದ ಸಿಂಧು ಮೊದಲ ಗೇಮ್‌ ಗೆದ್ದು ಮುನ್ನಡೆದರು. ಆದರೆ ದ್ವಿತೀಯ ಗೇಮ್‌ನಲ್ಲಿ ಕೊರಿಯದ ಹ್ಯುನ್‌ ಅಮೋಘವಾಗಿ ಆಡಿ ತಿರುಗೇಟು ನೀಡಿದರು. ನಿರ್ಣಾಯಕ ಗೇಮ್‌ನ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡು ಬಂದ ಸಿಂಧು ಕೊನೆಯತನಕವೂ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ಕಲ್ಪಿಸದೇ ಮುನ್ನುಗಿ ಜಯಭೇರಿ ಬಾರಿಸಿದರು.

ಈ ಗೆಲುವಿನ ಮೂಲಕ ಸಿಂಧು ಕೊರಿಯದ ಎದುರಾಳಿ ವಿರುದ್ಧ ತನ್ನ ಗೆಲುವಿನ ದಾಖಲೆಯನ್ನು 7-4ಕ್ಕೇರಿಸಿದರಲ್ಲದೇ ದುಬೈಯಲ್ಲಿ ಆದ ಸೋಲಿಗೆ ಸೇಡು ತೀರಿಸಿಕೊಂಡರು.  ಇಂಡಿಯ ಓಪನ್‌ ಕೂಟವು ಬಿಡಬ್ಲ್ಯುಎಫ್ ವಿಶ್ವ ಸೂಪರ್‌ ಸೀರೀಸ್‌ನ ಅಂಗವಾದ ಬಳಿಕ ಕೇವಲ ಕಿದಂಬಿ ಶ್ರೀಕಾಂತ್‌ (ಪುರುಷರ ಸಿಂಗಲ್ಸ್‌) ಮತ್ತು ಸೈನಾ ನೆಹ್ವಾಲ್‌ (ವನಿತೆಯರ ಸಿಂಗಲ್ಸ್‌) ಈ ಪ್ರಶಸ್ತಿ ಜಯಿಸಿದ್ದರು. ಚೊಚ್ಚಲ ಬಾರಿ ಫೈನಲಿಗೇರಿದ ಸಿಂಧು ಅವರಿಗೆ ಇದೀಗ ಈ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next