ಹೊಸದಿಲ್ಲಿ: ಕೊರೊನಾ ಭೀತಿಗೆ ಸಿಲುಕಿರುವ “ಇಂಡಿಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಆತಿಥೇಯ ನಾಡಿನ ಪಿ.ವಿ. ಸಿಂಧು, ಅಶ್ಮಿತಾ ಚಾಲಿಹಾ, ಮಾಳವಿಕಾ ಬನ್ಸೋಡ್, ಎಚ್.ಎಸ್. ಪ್ರಣಯ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ ಸೈನಾ ನೆಹ್ವಾಲ್ ಆಟ ಕೊನೆಗೊಂಡಿದೆ.
ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್ ಭಾರತದವರೇ ಆದ ಮಾಳವಿಕಾ ಬನ್ಸೋಡ್ ವಿರುದ್ಧ ನೇರ ಗೇಮ್‌ಗಳ ಸೋಲನುಭವಿಸಿದರು. 111ನೇ ರ್‍ಯಾಂಕಿಂಗ್‌ನ ಮಾಳವಿಕಾ 21-17, 21-9 ಅಂತರದ ಗೆಲುವು ದಾಖಲಿಸಿದರು. ಮಾಳವಿಕಾ ಭಾರತದವರೇ ಆದ ಆಕರ್ಷಿ ಕಶ್ಯಪ್ ವಿರುದ್ಧ ಆಡಲಿದ್ದಾರೆ. ಆಕರ್ಷಿ ಭಾರತದ ಕೆಯುರಾ ಮೋಪತಿನ್ ಅವರನ್ನು 21-10, 21-10ರಿಂದ ಮಣಿಸಿದರು.
ಇದಕ್ಕೂ ಮೊದಲು ಅಗ್ರ ಶ್ರೇಯಾಂಕದ ಪಿ.ವಿ. ಸಿಂಧು ಭಾರತದ ಮತ್ತೋರ್ವ ಎದುರಾಳಿ ಇಂದಿರಾ ಶರ್ಮ ಅವರನ್ನು 21-10, 21-10 ಅಂತರದಿಂದ ಸೋಲಿಸಿದರು. ಸಿಂಧು ಅವರ ಮುಂದಿನ ಎದುರಾಳಿ ಅಶ್ಮಿತಾ ಚಾಲಿಹಾ. ಇನ್ನೊಂದು ಪಂದ್ಯದಲ್ಲಿ ಅಶ್ಮಿತಾ ಫ್ರಾನ್ಸ್‌ನ ಯೇಲ್ ಹೊಯಾಕ್ಸ್ ವಿರುದ್ಧ 21-17, 21-14 ಅಂತರದಿಂದ ಗೆದ್ದು ಬಂದರು.
ಪ್ರಣಯ್‌ಗೆ ವಾಕ್ ಓವರ್ :
ಎಚ್.ಎಸ್. ಪ್ರಣಯ್ ವಾಕ್ ಓವರ್ ಪಡೆದರು. ಎದುರಾಳಿ ಮಿಥುನ್ ಮಂಜುನಾಥ್ ಅವರ ಕೋವಿಡ್ ಫಲಿತಾಂಶ ಪಾಸಿಟಿವ್ ಬಂದುದರಿಂದ ಆಡಲಿಳಿಯಲಿಲ್ಲ. ಕೆನಡಾದ ಬ್ರಿಯಾನ್ ಯಾಂಗ್ ವಿರುದ್ಧ ಆಡುತ್ತಿದ್ದಾಗ ಕಾಲಿನ ಸ್ನಾಯು ಸೆಳೆತಕ್ಕೆ ಸಿಲುಕಿದ ಸಮೀರ್ ವರ್ಮ ಕೂಟದಿಂದ ಹಿಂದೆ ಸರಿದರು.