Advertisement

19 ತಿಂಗಳ ಬಳಿಕ ಅಧ್ಯಕ್ಷರ ಆಯ್ಕೆ

12:21 AM Mar 13, 2020 | mahesh |

ಪುತ್ತೂರು: ಸ್ಥಳೀಯಾಡಳಿತ ನಗರಸಭೆಗೆ ಚುನಾವಣೆ ನಡೆದು 19 ತಿಂಗಳ ಬಳಿಕ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಯಾಗಿ ಆಡಳಿತ ನಡೆಸಲು ಕಾಲ ಕೂಡಿ ಬಂದಿದೆ.

Advertisement

2018ರ ಆ. 31ರಂದು ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಪ್ರಕಟವಾಗಿದ್ದರೂ ಕಾನೂನಾತ್ಮಕ ತೊಡಕು ರಾಜ್ಯದಲ್ಲಿ ಉಂಟಾಗಿತ್ತು. ಪುತ್ತೂರು ನಗರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಕುರಿತು ಯಾವುದೇ ತಕರಾರು ಇಲ್ಲದಿದ್ದರೂ ಉಚ್ಚ ನ್ಯಾಯಾಲಯದಲ್ಲಿ ಇದ್ದ ಇತರ ಕಡೆಗಳ ತಕರಾರು ಪುತ್ತೂರಿಗೂ ಅನ್ವಯವಾಗಿತ್ತು. ಈ ಕಾರಣದಿಂದ ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತಕ್ಕೆ ಅವಕಾಶ ಲಭಿಸದೆ ಅಧಿಕಾರಿಗಳ ಆಡಳಿತಕ್ಕೆ ಸೀಮಿತವಾಗಿತ್ತು.

ಬದಲಾಯಿತು ಉಪಾಧ್ಯಕ್ಷ ಮೀಸಲಾತಿ
ಪುತ್ತೂರು ನಗರಸಭೆಯ ಚುನಾವಣೆ ಬಳಿಕ ಸರಕಾರದಿಂದ ಅಧ್ಯಕ್ಷ ಹುದ್ದೆಯನ್ನು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಹುದ್ದೆಯನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ನಿಗದಿಪಡಿಸಿ ಮೀಸಲಾತಿ ಪ್ರಕಟಿಸಲಾಗಿತ್ತು. ಈಗ ಪರಿಷ್ಕೃತಗೊಂಡು ರಾಜ್ಯ ಸರಕಾರವು ಬುಧವಾರ ಪ್ರಕಟಿಸಿದ ಮೀಸಲಾತಿಯಲ್ಲಿ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆಯನ್ನು ಮುಂದುವರಿಸಲಾಗಿದ್ದು, ಉಪಾಧ್ಯಕ್ಷ ಹುದ್ದೆಯ ಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಮಹಿಳೆಯ ಬದಲು ಪರಿಶಿಷ್ಟ ಪಂಗಡಕ್ಕೆ ನೀಡಲಾಗಿದೆ. ಹೊಸ ಪ್ರಕಟನೆಯಲ್ಲಿ ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಯನ್ನು ಬದಲಾಯಿಸಲಾಗಿದೆ.

ಬಿಜೆಪಿಗೆ ಬಹುಮತ
ಪುತ್ತೂರು ನಗರಸಭೆಯ ಒಟ್ಟು 31 ಸ್ಥಾನಗಳ ಪೈಕಿ ಬಿಜೆಪಿ 26 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‌ ಬೆಂಬಲಿತ ಸದಸ್ಯರು 4 ಸ್ಥಾನಗಳನ್ನು, ಎಸ್‌ಡಿಪಿಐ 1 ಸ್ಥಾನವನ್ನು ಗಳಿಸಿವೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಪ್ರಕಟಿತ ಮೀಸಲಾತಿಯ ಅಭ್ಯರ್ಥಿಗಳು ಬಿಜೆಪಿಯಲ್ಲಿರುವುದರಿಂದ ಬಿಜೆಪಿಗೆ ಎರಡೂ ಸ್ಥಾನಗಳು ಸಿಗಲಿವೆ. 4 ಸ್ಥಾನ ಗೆದ್ದಿರುವ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅರ್ಹತೆ ಇರುವ ಮಹಿಳಾ ಸದಸ್ಯೆ ಇದ್ದಾರೆ. ಆದರೆ ಬಹುಮತ ಇಲ್ಲದಿರುವ ಕಾರಣ ಸ್ಪರ್ಧೆ ಸಾಧ್ಯತೆ ಕಡಿಮೆ.

ಜನಪ್ರತಿನಿಧಿಗಳ ಆಡಳಿತಕ್ಕೆ ಮುನ್ನುಡಿ
ಕೆಲವೇ ದಿನಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರ ಲಭಿಸುವ ಮೂಲಕ ನಗರಸಭೆಯಲ್ಲಿ ಆಡಳಿತಾ ಧಿಕಾರಿಗಳ ಅಧಿಕಾರ ಕೊನೆಯಾಗಲಿದೆ. 31 ನಗರಸಭಾ ಸದಸ್ಯರು ಇನ್ನಷ್ಟೇ ಪ್ರಮಾಣವಚನ ಸ್ವೀಕರಿಸ ಬೇಕಾಗಿದೆ. ಚುನಾವಣೆ ಮುಗಿದು ಒಂದೂವರೆ ವರ್ಷ ಕಳೆದರೂ 31 ಸದಸ್ಯರು ಈಗಲೂ ವಿಜೇತ ಅಭ್ಯರ್ಥಿಗಳಾಗಿದ್ದಾರೆ. ನಗರ ಸಭೆಯ ಆಡಳಿತಾಧಿ ಕಾರಿಯಾಗಿರುವ ಜಿಲ್ಲಾಧಿಕಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ದಿನಾಂಕವನ್ನು ಇನ್ನಷ್ಟೇ ನಿಗದಿಪಡಿಸಬೇಕಾಗಿದೆ. ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿರುತ್ತಾರೆ.

Advertisement

ದಿನಾಂಕ ನಿಗದಿಯಾಗಿಲ್ಲ
ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ. ಜಿಲ್ಲಾಧಿಕಾರಿಯವರು ದಿನಾಂಕ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿದ ಅನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ನಗರಸಭೆ, ಪುತ್ತೂರು

ತೊಡಕು ನಿವಾರಣೆ
ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಕುರಿತಂತೆ ಎದುರಾಗಿದ್ದ ಕಾನೂನಿನ ತೊಡಕುಗಳನ್ನು ಸರಕಾರ ನಿವಾರಿಸಿದೆ. ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಅಧಿಕಾರ ನಡೆಸಲು ಅವಕಾಶ ಕಲ್ಪಿಸಿರುವ ಸರಕಾರಕ್ಕೆ ಜನತೆಯ ಪರವಾಗಿ
ಕೃತಜ್ಞತೆ ಸಲ್ಲಿಸುತ್ತೇನೆ.
-ಪಿ.ಜಿ. ಜಗನ್ನಿವಾಸ ರಾವ್‌ , ನಗರಸಭಾ ಸದಸ್ಯ, ಬಿಜೆಪಿ ನಗರ ಮಂಡಲ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next