Advertisement

ಪಾರ್ಕಿನಲ್ಲಿ ಪುಟ್ಟಿಯ ಬರ್ತ್‌ಡೇ

10:09 AM Jan 24, 2020 | mahesh |

ಪುಟ್ಟಿ, ಕೇಕ್‌ ಕಟ್‌ ಮಾಡಿ ಅಪ್ಪ ಅಮ್ಮನಿಗೆ ಎರಡು ತುಣುಕು ತಿನ್ನಿಸಿದಳು. ನಂತರ ನಾಲ್ಕೈದು ಕೇಕ್‌ ತುಂಡುಗಳನ್ನು ಕವರ್‌ನಲ್ಲಿ ಹಾಕಿ ಪಾರ್ಕಿನಿಂದ ಓಡಿದಳು. ಅಮ್ಮನಿಗೆ ಗಾಬರಿಯಾಯಿತು. ಅಪ್ಪ ಪುಟ್ಟಿಯ ಹಿಂದೆಯೇ ಓಡಿದರು!

Advertisement

ಪಾರ್ಕಿನಲ್ಲಿ ಪುಟ್ಟಿ ಅಪ್ಪನ ಕೈಹಿಡಿದು ವಾಕಿಂಗ್‌ ಮಾಡುತ್ತಿದ್ದಳು. ಕುತೂಲದಿಂದ ಸುತ್ತಲೂ ನೋಡುತ್ತಿದ್ದಳು. ಜಾರುವ ಬಂಡಿಯನ್ನು ಕಂಡು ಪುಟ್ಟಿ ನಿಂತಳು. ಅಲ್ಲಿ ನಾಲ್ಕು ಮಕ್ಕಳು ಬೀದಿ ಮಕ್ಕಳು ಆಡುತ್ತಿದ್ದರು. ಪುಟ್ಟಿ ಕುತೂಹಲದಿಂದ ಆ ಮಕ್ಕಳನ್ನು ನೋಡುತ್ತಿದ್ದಳು. ಪುಟ್ಟಿ ನಿಂತಿದ್ದನ್ನು ಕಂಡು ಅಪ್ಪ ಸಿಟ್ಟಾದರು. “ಅಪ್ಪ ನಾನೂ ಜಾರುಬಂಡೆ ಆಡ್ತೀನಪ್ಪ’ ಅಂದಳು. “ಅಲ್ಲೆಲ್ಲ ಆಡಬಾರದು’ ಎಂದು ಗದರುತ್ತ ಪುಟ್ಟಿಯನ್ನು ಎಳೆದುಕೊಂಡು ಹೋದರು ಅಪ್ಪ. ಅಪ್ಪ ಯಾಕೆ ಹೀಗೆ ಎಂದು ಪುಟ್ಟಿಗೆ ಅರ್ಥವಾಗಲಿಲ್ಲ. ಇನ್ನೊಂದು ದಿವಸ, ಪಾರ್ಕಿನ ಮೂಲೆಯಲ್ಲಿ ವಯಸ್ಸಿಗೆ ಬಂದ ನಾಲ್ಕಾರು ಹುಡುಗರು ಹುಡುಗಿಯರು ಸೇರಿದ್ದರು. ಎಲ್ಲ ಸೇರಿಕೊಂಡು ಗಲಾಟೆಮಾಡುತ್ತ ಬರ್ತ್‌ಡೇ ಆಚರಿಸುತ್ತಿದ್ದರು. ಕೇಕನ್ನು ಕತ್ತರಿಸಿದರು. ಕೇಕಿನ ಕ್ರೀಮನ್ನು ಬರ್ತ್‌ಡೇ ಹುಡುಗನಿಗೆ ಮೆತ್ತಿದರು. ಮೊಬೈಲಿನಲ್ಲಿ ಪೋಟೋ ತೆಗೆದುಕೊಂಡರು. ಹಾಡಿಕುಣಿದರು. ಪುಟ್ಟಿ ಖುಷಿಯಿಂದ ಅತ್ತ ನೋಡುತ್ತ ನಿಂತಳು. ಅಪ್ಪ ಕೂಡ ಮೆಚ್ಚುತ್ತ ನಗೆ ಬೀರಿದರು.

ಪುಟ್ಟಿಯ ಬರ್ತ್‌ಡೇ ಬಂದಿತು. “ನನ್ನ ಬರ್ತ್‌ಡೇನೂ ಪಾರ್ಕಿನಲ್ಲೇ ಮಾಡೋಣ’ ಅಂದಳು ಪುಟ್ಟಿ. “ಹಾಗೇ ಆಗಲಿ, ಅದಕ್ಕೇನಂತೆ’ ಅಂದರು ಅಪ್ಪ. ಪುಟ್ಟಿಯ ಬರ್ತ್‌ಡೇಗೆ ಅಮ್ಮ ವಿಶೇಷವಾದ ಸಿಹಿ ತಯಾರಿಸಿದರು. ಪುಟ್ಟಿ ತನಗೆ ಬೇಕಾದ‌ ಗೆಳೆಯ ಗೆಳತಿಯರನ್ನು ಕರೆದಳು. ಪುಟ್ಟಿಯ ಚಿಕ್ಕಮ್ಮ, ಅಕ್ಕ, ಮಾವ ಎಲ್ಲ ಬಂದರು. ಸ್ನೇಹಿತರಿಗೆ ನೆನಪಿನ ಉಡುಗೊರೆಯಾಗಿ ಪೆನ್ಸಿಲ್‌, ಎರೇಸರ್‌, ವಾಕ್ಸ್‌ ಕಲರುಗಳು ಎಲ್ಲವನ್ನೂ ತರಲಾಯಿತು. ಪುಟ್ಟಿಗೆ ಹೊಸ ಫ್ರಾಕೂ ಬಂದಿತು. ಪುಟ್ಟಿಗೆ ಇಷ್ಟವಾದ ಸ್ಮಿತಾ ಟೀಚರ್‌ ಕೂಡ ಬಂದರು. ಪಾರ್ಕಿನ ಒಂದು ಬದಿಯಲ್ಲಿ ಮನೆಯಿಂದ ತಂದಿದ್ದ ಜಮಖಾನ ಹಾಸಲಾಯಿತು. ಚಾಕಲೇಟು, ಬಿಸ್ಕಟ್ಟು ಇತ್ಯಾದಿಗಳೂ ಬಂದವು. ಪುಟ್ಟಿ ಕಸವನ್ನು ಹಾಕಲು ಮನೆಯಿಂದ ಒಂದು ದೊಡ್ಡ ಪ್ಲಾಸ್ಟಿಕ್‌ ಕವರ್‌ ತಂದಳು.

ಅಮ್ಮ, ಚಿಕ್ಕಮ್ಮ, ಅಕ್ಕ ಸೇರಿಕೊಂಡು ಮಕ್ಕಳ ತಿನಿಸುಗಳನ್ನೆಲ್ಲ ಕಾಗದದ ಪ್ಲೇಟಿನಲ್ಲಿ ಹಾಕಿದರು. ಬಂದ ಮಕ್ಕಳಿಗೆಲ್ಲ ಬಣ್ಣದ ಹೊಳೆಯುವ ಟೋಪಿಯನ್ನು ತೊಡಿಸಲಾಯಿತು. ಪುಟ್ಟಿ ಖುಷಿಯಿಂದ ಕೇಕನ್ನು ಕತ್ತರಿಸಿದಳು. ಕೇಕಿನ ಮೊದಲನೆಯ ತುಂಡನ್ನು ಅಮ್ಮನ ಬಾಯಲ್ಲಿ ಇಟ್ಟಳು. ಎರಡನೇ ತುಂಡನ್ನು ಅಪ್ಪನಿಗೆ ತಿನ್ನಿಸಿದಳು. ಆ ಹೊತ್ತಿಗೆ ಚಿಕ್ಕಮ್ಮ ದೊಡ್ಡ ಕೇಕನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕಟ್‌ ಮಾಡಿ ಭಾಗಗಳಾಗಿ ಮಾಡಿದ್ದರು. ಪುಟ್ಟಿ, ಆ ತುಂಡುಗಳಲ್ಲಿ ಕೆಲವನ್ನು ಎತ್ತಿಕೊಂಡು ಪಾರ್ಕಿನಿಂದ ಹೊರಕ್ಕೆ ಓಡಿದಳು. ಏಕೆಂದು ಯಾರಿಗೂ ಗೊತ್ತಾಗಲಿಲ್ಲ. ಪುಟ್ಟಿಯನ್ನು ಹಿಂಬಾಲಿಸಿ ಎಂದರು ಅಮ್ಮ. ಅಪ್ಪ ಪುಟ್ಟಿಯ ಹಿಂದೆಯೇ ಓಡಿದರು.

ಪುಟ್ಟಿ ಓಡಿ ಬಂದಿದ್ದು ಬೀದಿಮಕ್ಕಳು ಆಡುತ್ತಿದ್ದ ಜಾಗದತ್ತ. ಎಂದಿನಂತೆ ಹೊರಜಗತ್ತಿನ ಪರಿವೆ ಇಲ್ಲದೆ ಕೂಗಾಡಿಕೊಂಡು ಆಟವಾಡುತ್ತಿದ್ದ ಮಕ್ಕಳು ಪುಟ್ಟಿಯನ್ನು ಕಂಡು ಬೀದಿ ಮಕ್ಕಳು ಆಟ ನಿಲ್ಲಿಸಿ ಅವಳನ್ನೇ ಆಶ್ಚರ್ಯದಿಂದ ನೋಡಿದರು. ಅದೇ ಹೊತ್ತಿಗೆ, ಅಪ್ಪನೂ ಅಲ್ಲಿಗೆ ಬಂದರು. ಪುಟ್ಟಿ ಆ ಮಕ್ಕಳನ್ನು ಕರೆದು. ತಾನು ತಂದಿದ್ದ ಕೇಕನ್ನು ಅವರಿಗೆ ಹಂಚಿ ತಾನೂ ತಿಂದಳು. ಅವಳು ತನ್ನ ಜೇಬಿನಲ್ಲಿ ಚಾಕಲೇಟು, ಬಲೂನುಗಳನ್ನೂ ತಂದಿದ್ದಳು. ಅವನ್ನು ಹೊರಕ್ಕೆ ತೆಗೆಯುತ್ತಿದ್ದಂತೆಯೇ ಮಕ್ಕಳೆಲ್ಲ ಒಟ್ಟಾಗಿ ಹೋ ಎಂದು ಕೂಗುತ್ತ ಪುಟ್ಟಿಯ ಸುತ್ತ ನೆರೆದರು. ಅವನ್ನೆಲ್ಲ ದೂರದಿಂದಲೇ ನೋಡುತ್ತಿದ್ದ ಅಪ್ಪನ ಕಣ್ಣುಗಳು ತೇವಗೊಂಡವು.

Advertisement

– ಮತ್ತೂರು ಸುಬ್ಬಣ್ಣ

Advertisement

Udayavani is now on Telegram. Click here to join our channel and stay updated with the latest news.

Next