Advertisement

236 ಮಂಜೂರಾದ ಹುದ್ದೆ, 203 ಇನ್ನೂ ಖಾಲಿ : ಹೆಸರಿಗಷ್ಟೇ ನಗರಸಭೆಯ ಪಟ್ಟ, ಸೌಲಭ್ಯ ಇಲ್ಲ

01:25 PM Mar 07, 2022 | Team Udayavani |

ಪುತ್ತೂರು : ದ.ಕ.ಜಿಲ್ಲೆಯ ಎರಡನೇ ಅತೀ ದೊಡ್ಡ ವಾಣಿಜ್ಯ ನಗರ ಪುತ್ತೂರು ನಗರದ ಆಡಳಿತ ಕೇಂದ್ರ ಸ್ಥಾನ ನಗರಸಭೆಯಲ್ಲಿ ಸಿಬಂದಿಯೇ ಇಲ್ಲದೆ ದಿನ ನಿತ್ಯದ ಕೆಲಸ ಕಾರ್ಯ ನಿರ್ವಹಣೆಗೆ ತಡಕಾಡುವ ಸ್ಥಿತಿ ಉಂಟಾಗಿದೆ.

Advertisement

ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆ ಗೇರಿ ಏಳು ವರ್ಷ ಕಳೆದಿದೆ. ಆದರೆ ನಗರಸಭೆಯ ಒಳ ಹೊಕ್ಕರೆ ಅಲ್ಲಿ ಪ್ರಮುಖ ವಿಭಾಗಗಳಲ್ಲಿ ಸಿಬಂದಿಯೇ ಇಲ್ಲದೆ ಖಾಲಿಯಾಗಿವೆ. ಮಂಜೂರಾದ ಹುದ್ದೆಗಳ ಪೈಕಿ ಕೇವಲ ಶೇ.14 ಮಾತ್ರ ಭರ್ತಿಯಾಗಿದ್ದು ಶೇ.86 ರಷ್ಟು ಭರ್ತಿ ಆಗಿಲ್ಲ.

ಪುರಸಭೆ ಅವಧಿಯಿಂದಲೇ ಸಿಬಂದಿ ಕೊರತೆಯಿಂದ ದಿನ ದೂಡುತ್ತಿದ್ದ ನಗರಾಡಳಿತಕ್ಕೆ ನಗರಸಭೆ ಆದ ಅನಂತರ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ ಇಲ್ಲಿ ಕೊರತೆ ಪ್ರಮಾಣ ಮತ್ತಷ್ಟು ಹೆಚ್ಚಳವೇ ಆಯಿತು. ಪುರಸಭೆಯಾಗಿದ್ದಾಗ ಇಲ್ಲಿಗೆ ಮಂಜೂರಾದ ಹುದ್ದೆಗಳು 236. ಇದರಲ್ಲಿ ಭರ್ತಿ ಆಗಿದ್ದು ಕೇವಲ 48. ಅಂದರೆ 184 ಹುದ್ದೆಗಳು ಖಾಲಿಯಾಗಿತ್ತು.

ಏಳು ವರ್ಷಗಳ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ಒಟ್ಟು 236 ಮಂಜೂರಾತಿ ಹುದ್ದೆ ಇತ್ತು. ಇದರಲ್ಲಿ 33 ಹುದ್ದೆ ಮಾತ್ರ ಭರ್ತಿ ಆಗಿದ್ದು 203 ಹುದ್ದೆ ಖಾಲಿಯಾಗಿದೆ.

ಪ್ರಮುಖ ಹುದ್ದೆಗಳೇ ಖಾಲಿ: ಪೌರ ಕಾರ್ಮಿಕರು ಮೊದಲಾದ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಪರಿಸ್ಥಿತಿ ನಿಭಾಯಿಸಬಹುದಾದರೂ ಎಂಜಿನಿಯರ್‌, ಕಂದಾಯ, ಆರೋಗ್ಯ ಸಿಬಂದಿ ಕೊರತೆ ಭರ್ತಿ ಮಾಡುವುದು ಹೇಗೆ ಅನ್ನುವುದು ನಗರಸಭೆ ಆಡಳಿತಕ್ಕೆ ಇರುವ ದೊಡ್ಡ ಸವಾಲು. ಇಲ್ಲಿಗೆ ಸಹಾಯಕ ಕಾರ್ಯಪಾಲಕ ಅಭಿಯಂತ ಹುದ್ದೆ ಮಂಜೂರಾಗಿದ್ದರೂ ಭರ್ತಿ ಆಗಿಲ್ಲ. ಸಹಾಯಕ ಕಾರ್ಯಪಾಲಕ ಅಭಿಯಂತ ಹುದ್ದೆ ಇದ್ದಿದ್ದರೆ ಅಂದಾಜು ಪಟ್ಟಿ ತಯಾರಿಕೆ ಕೆಲಸ ನಗರಸಭೆಯಲ್ಲೇ ಮಾಡಬಹುದಾಗಿದೆ. ಈ ಹುದ್ದೆ ಖಾಲಿ ಇರುವ ಕಾರಣ ಈಗ ಎಲ್ಲ ಬಗೆಯ ಎಸ್ಟಿಮೇಶನ್‌ ಮಾಡಲು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಕೊಡಬೇಕಾಗುತ್ತದೆ.

Advertisement

ಇದನ್ನೂ ಓದಿ : ರಾಜ್ಯದಲ್ಲಿ ಹೈಬ್ರಿಡ್ ಪವರ್ ಪಾರ್ಕ್ ನಿರ್ಮಾಣ : ಸುನೀಲ್ ಕುಮಾರ್

ಸಹಾಯಕ ನೀರು ಸರಬರಾಜು ಮತ್ತು ಪಂಪ್‌ ಚಾಲಕರ ಮಂಜೂರಾತಿ ಹುದ್ದೆಗಳು 8. ಅದು ಪೂರ್ಣ ಪ್ರಮಾಣದಲ್ಲಿ ಖಾಲಿ ಇದೆ. ಆರೋಗ್ಯ ವಿಭಾಗದಲ್ಲಿಯು ಸಿಬಂದಿ ಕೊರತೆ ಇದೆ. ನೀರು ಸರಬರಾಜು ಸಹಾಯಕರ 30 ಹುದ್ದೆಗಳು ಮಂಜೂರಾಗಿದ್ದರೂ 29 ಖಾಲಿ ಇವೆ. 4 ಗಾರ್ಡನರ್‌ ಹುದ್ದೆಗಳಿದ್ದರೂ ಒಂದು ಕೂಡ ಭರ್ತಿಯಾಗಿಲ್ಲ. ಕ್ಲೀನರ್ಸ್‌ 4 ಮತ್ತು ಲೋಡರ್ಸ್‌ 16 ಹುದ್ದೆಗಳಿದ್ದರೂ ಎಲ್ಲವೂ ಖಾಲಿ. ಲ್ಯಾಬ್‌ ಟೆಕ್ನೀಷಿಯನ್‌ ಹುದ್ದೆ ಕೂಡ ಖಾಲಿ. ಕಿರಿಯ ಆರೋಗ್ಯ ಪರಿವೀಕ್ಷಕ ಹುದ್ದೆ 3, ಕಂಪ್ಯೂಟರ್‌ ಆಪರೇಟರ್‌/ಡಾಟಾ ಎಂಟ್ರಿ ಆಪರೇಟರ್‌ 3, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಹೀಗೆ ಸಾಲು ಸಾಲು ಹುದ್ದೆಗಳು ಖಾಲಿ ಇವೆ.

ಪೌರಕಾರ್ಮಿಕ ಹುದ್ದೆ 100 ರಲ್ಲಿ 89 ಖಾಲಿ
ಪೌರ ಕಾರ್ಮಿಕರ 100 ಹುದ್ದೆಗಳು ಇಲ್ಲಿಗೆ ಮಂಜೂರಾಗಿದ್ದರೂ, ಪ್ರಸ್ತುತ ಕೇವಲ 11 ಹುದ್ದೆಗಳು ಭರ್ತಿಯಾಗಿವೆ. ಉಳಿದೆಲ್ಲವೂ ಖಾಲಿ. ನಗರ ಸ್ವತ್ಛತೆ, ಗುಡಿಸುವಿಕೆ, ಗಿಡಗಳ ಕಟ್ಟಿಂಗ್‌ ಮುಂತಾದ ಕೆಲಸಗಳನ್ನು ಪ್ರಸ್ತುತ ವಾರ್ಷಿಕ ಟೆಂಡರ್‌ ಆಧಾರದಲ್ಲಿ ಹೊರಗುತ್ತಿಗೆ ಕೊಡಲಾಗುತ್ತಿದ್ದು 44 ಮಂದಿಯನ್ನು ನೇಮಿಸಲಾಗಿದೆ. ಇದಕ್ಕಾಗಿ ವರ್ಷಕ್ಕೆ 38 ಲಕ್ಷ ರೂ. ಗೂ ಅಧಿಕ ಮೊತ್ತವನ್ನು ನಗರಸಭೆ ಖರ್ಚು ಮಾಡುತ್ತಿದೆ.

ಹೆಸರಿಗೆ ಮಾತ್ರ ನಗರಸಭೆ
ನಗರಸಭೆಯಾಗಿ ರೂಪುಗೊಂಡರೂ ಅದಕ್ಕೆ ಬೇಕಾದ ಅನುದಾನ ಬಂದಿಲ್ಲ. ಸಿಬಂದಿ ನೇಮಕವಂತೂ ಮೊದಲೇ ಆಗಿಲ್ಲ. ನಗರಸಭೆ ವ್ಯಾಪ್ತಿಗೆ ಗ್ರಾಮಾಂತರ ಭಾಗದ ಹಲವು ಪ್ರದೇಶಗಳು ಸೇರ್ಪಡೆಯಾಗಿದ್ದು ಅದರ ಅಭಿವೃದ್ಧಿಗೆ ಅನುದಾನ ಲಭ್ಯವಿಲ್ಲ. ಹೀಗಾಗಿ ಪುರಸಭೆ ಅವಧಿಯ ಕೊರತೆಗಳೇ ಭರ್ತಿ ಆಗದ ಸ್ಥಿತಿ ಇಲ್ಲಿನದು. ಪ್ರಸ್ತುತ ಪರಿಸ್ಥಿತಿ ಹೇಗಿಯೆಂದರೆ ಇದು ಹೆಸರಿಗೆ ಮಾತ್ರ ನಗರಸಭೆ. ವಾಸ್ತವದಲ್ಲಿ ಪುರಸಭೆಯಲ್ಲಿ ಇರಬೇಕಾದಷ್ಟು ಸವಲತ್ತುಗಳು ಇಲ್ಲಿ ಇಲ್ಲ.

ಸರಕಾರದ ಗಮನಕ್ಕೆ ತರಲಾಗಿದೆ
ನಗರಸಭೆಯ ಖಾಲಿ ಹುದ್ದೆಯ ಭರ್ತಿಗೆ ಸಂಬಂಧಿಸಿ ಸರಕಾರದ ಗಮನಕ್ಕೆ ತರಲಾಗಿದೆ. ಕಚೇರಿಯ ದಿನ ನಿತ್ಯದ ತುರ್ತು ಕೆಲಸಗಳಿಗೆ ತೊಂದರೆ ಆಗದಂತೆ ಹೊರಗುತ್ತಿಗೆ ಆಧಾರದಲ್ಲಿ ಸಿಬಂದಿಯನ್ನು ನೇಮಿಸಲಾಗಿದೆ.

– ಜೀವಂಧರ್‌ ಜೈನ್‌ ಅಧ್ಯಕ್ಷ, ನಗರಸಭೆ ಪುತ್ತೂರು

ಸರಕಾರ ಕ್ರಮ ಕೈಗೊಳ್ಳಬೇಕು
ದೊಡ್ಡ ಮಟ್ಟದ ಯೋಜನೆ, ಬಜೆಟ್‌ ಮಂಡಿಸಿದ್ದರೂ ಅದು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳ್ಳಲು ಸಿಬಂದಿ ಆವಶ್ಯಕತೆ ಇದೆ. ಇಲ್ಲಿ ಶೇ.80 ಕ್ಕೂ ಅಧಿಕ ಮಂಜೂರಾತಿ ಹುದ್ದೆಗಳು ಖಾಲಿ ಇದೆ. ಇದರ ಭರ್ತಿಗೆ ಸರಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಯಾವ ಕೆಲಸವು ಪೂರ್ಣಗೊಳ್ಳದು.

– ಶಕ್ತಿ ಸಿನ್ಹಾ ವಿಪಕ್ಷ ಸದಸ್ಯ, ನಗರಸಭೆ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next