Advertisement

Putturu: ಬೆಳ್ಳಿಪ್ಪಾಡಿಯಲ್ಲಿ ಭಾರೀ ಭೂ ಕುಸಿತ; ಜಾನುವಾರು ಸಾವು, ಮನೆ ಮಂದಿ ಪಾರು

01:12 AM Aug 03, 2024 | Team Udayavani |

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಿಗೇರಿನಲ್ಲಿ ಆ.2ರ ನಸುಕಿನ ಜಾವ ಗುಡ್ಡ ಕುಸಿದಿದ್ದು, ಸಮೀಪದ ಮನೆ ಮಂದಿ ಅದೃಷ್ಟವಶಾತ್‌ ಪಾರಾಗಿದ್ದಾರೆ. ಆದರೆ ಹಲವು ಜಾನುವಾರುಗಳು ಸಾವನ್ನಪ್ಪಿವೆ.

Advertisement

ಬೆಳಗ್ಗೆ 5 ಗಂಟೆಯ ಹೊತ್ತಿಗೆ ಮನೆ ಹಿಂಭಾಗದ ಗುಡ್ಡ ಕುಸಿದು ಗಂಗಯ್ಯ ಗೌಡ ಅವರ ಹಟ್ಟಿಗೆ ಬಿದ್ದಿದೆ. ಪರಿಣಾಮವಾಗಿ ಹಟ್ಟಿ ಸಂಪೂರ್ಣ ಹಾನಿಗೀಡಾಗಿದ್ದು, ನಾಲ್ಕು ಜಾನುವಾರುಗಳು ಸಾವನ್ನಪ್ಪಿವೆ. ಸುಮಾರು 10 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ.
ಸಮೀಪದ ಮಹಾಬಲ ಗೌಡರ ಮನೆ ಹಾಗೂ ಹಟ್ಟಿಗೂ ಮಣ್ಣು ಕುಸಿದು ಬಿದ್ದಿದ್ದು, ಒಂದು ಜಾನುವಾರು ಮೃತಪಟ್ಟಿದ್ದು, ಮತ್ತೂಂದು ಮಣ್ಣಿನಡಿಯಲ್ಲಿ ಸಿಲುಕಿದೆ. ಬೆಳ್ಳಿಪ್ಪಾಡಿ ಗ್ರಾಮದ ಕೋರ್ಯದ ವಿಶ್ವನಾಥ ಪೂಜಾರಿ ಅವರ ಮನೆ, ಹಟ್ಟಿಯ ಮೇಲೂ ಗುಡ್ಡ ಕುಸಿದಿದ್ದು, ಎರಡು ಜಾನುವಾರು ಮಣ್ಣಿನಡಿ ಸಿಲುಕಿವೆ.

ಮನೆ ಮಂದಿ ಸ್ಥಳಾಂತರ
ಇನ್ನಷ್ಟು ಭೂ ಕುಸಿತವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಮನೆಯವರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಲು ಅಧಿಕಾರಿಗಳು ನೀಡಿದ ಸೂಚನೆಯಂತೆ ಅವರು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಸ್ಥಳಕ್ಕೆ ಸಹಾಯಕ ಆಯುಕ್ತ ಜುಬಿನ್‌ ಮೊಹಪಾತ್ರ, ತಹಶೀಲ್ದಾರ್‌ ಪುರಂದರ ಹೆಗ್ಡೆ ಭೇಟಿ, ತಾ.ಪಂ. ಇಒ ನವೀನ್‌ ಭಂಡಾರಿ, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಪ್ರಮುಖರು ಭೇಟಿ ನೀಡಿದ್ದಾರೆ.

ತೆಂಕಿಲ: ಹೆದ್ದಾರಿಗೆ ಕುಸಿದ ಗುಡ್ಡ
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತೆಂಕಿಲದಲ್ಲಿ ಆ.2ರಂದು ನಸುಕಿನ ಜಾವ ಗುಡ್ಡ ಕುಸಿದು ಹೆದ್ದಾರಿ ಸಂಚಾರ ಬಂದ್‌ ಆದಾಗ ಪರ್ಯಾಯ ರಸ್ತೆಯನ್ನು ಬಳಸಲಾಯಿತು. ಮೂರು ಜೆಸಿಬಿಗಳ ಮೂಲಕ ಬೆಳಗ್ಗಿನಿಂದ ಕಾರ್ಯಾಚರಣೆ ನಡೆಸಲಾಯಿತು. ಅಪರಾಹ್ನದ ವೇಳೆಗೆ ಮಣ್ಣು ತೆರವು ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಯಿತು.

ನೆಕ್ಕಿಲಾಡಿ: ಮನೆಗೆ ಬಿದ್ದ ಗುಡ್ಡ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿಯಲ್ಲಿ ವಿಶ್ವನಾಥ ನಾಯ್ಕ ಅವರ ಮನೆ ಮೇಲೆ ಗುಡ್ಡ ಕುಸಿದಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಒಂದು ಆಮ್ನಿ ಕಾರು ಹಾಗೂ ಒಂದು ದ್ವಿಚಕ್ರ ವಾಹನ ಹಾಗೂ ಕಟ್ಟಿ ಹಾಕಿದ ಸಾಕು ನಾಯಿಯೊಂದು ಮಣ್ಣಿನಡಿ ಸಿಲುಕಿದೆ. ಗುಡ್ಡದ ಮಣ್ಣು ತೋಡಿಗೂ ಬಿದ್ದಿದೆ. ಇದರಿಂದ ತೋಟದಲ್ಲಿ ತೋಡಿನ ನೀರು ಹರಿಯುತ್ತಿದೆ.

Advertisement


ಕಡಂದಲೆ: ತಗ್ಗು ಪ್ರದೇಶ ಜಲಾವೃತ

ಮೂಡುಬಿದಿರೆ: ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಗುಡ್ಡಬೆಟ್ಟು ತುಲಮೊಗೈರ್‌ಬಿತ್ತಿದ ಗದ್ದೆಗಳು ನೀರುಪಾಲಾಗಿವೆ. ಕಡಂದಲೆಯಲ್ಲಿ ತೋಟ, ಗದ್ದೆ, ರಸ್ತೆ ಜಲಾವೃತವಾಗಿವೆ. ನಾಟಿ ಮಾಡಿದ ಭತ್ತದ ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ.ಕಲ್ಲೋಳಿಯಲ್ಲಿ ರಸ್ತೆಗೆ ನದಿ ನೀರು ಬಂದಿರುವುದರಿಂದ ಜನರ ಓಡಾಟಕ್ಕೆ ಕಷ್ಟವಾಗಿದೆ. ಶಾಂಭವಿ ನದಿಯಲ್ಲೂ ನೀರಿನ ಮಟ್ಟ ಏರತೊಡಗಿದೆ. ಪಕ್ಕದ ಅಡಿಕೆ ತೋಟಗಳಲ್ಲಿ ನೀರು ತುಂಬಿಕೊಂಡಿದೆ. ನಲ್ಲೆಗುತ್ತು ನದಿಯ ನೀರು ಏರಿಕೆಯಾಗಿದೆ.

ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ಘನ ವಾಹನ ಸಂಚಾರ ಸ್ಥಗಿತ

ಸುಳ್ಯ: ಜಾಲೂÕರು-ಕಾಸರಗೋಡು ಅಂತಾರಾಜ್ಯ ರಸ್ತೆಯ ಕೇರಳ ಗಡಿ ಪ್ರದೇಶದ ಮಂಡೆಕೋಲು ಗ್ರಾಮದ ಮುರೂರು ಎಂಬಲ್ಲಿ ರಸ್ತೆಯ ಮಣ್ಣು ಶಿಥಿಲಗೊಂಡು ರಸ್ತೆ ಕುಸಿಯುವ ಭೀತಿಯಲ್ಲಿದ್ದು, ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಘನ ವಾಹನಗಳನ್ನು ಕೊಟ್ಯಾಡಿ-ಈಶ್ವರಮಂಗಲ-ಕಾವು ಮೂಲಕ ಹಾಗೂ ಕೊಟ್ಯಾಡಿ-ಅಡೂರು-ಮಂಡೆಕೋಲು-ಸುಳ್ಯ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.

ಉಳ್ಳಾಲ: ಛಾವಣಿ ಕುಸಿದು ಇಬ್ಬರು ಆಸ್ಪತ್ರೆಗೆ
ಉಳ್ಳಾಲ: ನೇತ್ರಾವತಿ ನದಿ ತೀರದಲ್ಲಿ ನೆರೆಯ ಬಳಿಕ ಈಗ ನಗರ ಪ್ರದೇಶದಲ್ಲಿ ಕೃತಕ ನೆರೆಯಿಂದ ಮನೆಗಳು ಮತ್ತು ಕೃಷಿ ಪ್ರದೇಶಗಳು ಮುಳುಗಡೆಯಾಗಿವೆ. ಉಳ್ಳಾಲದಲ್ಲಿ ಮನೆಯ ಛಾವಣಿ ಕುಸಿದು ಇಬ್ಬರು ಗಾಯಗೊಂಡಿದ್ದಾರೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ ಮೇಲಂಗಡಿಯಲ್ಲಿ ಮನೆಯ ಛಾವಣಿ ಕುಸಿದು ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರರು ಪಾರಾಗಿದ್ದಾರೆ.

ಸೋಮೇಶ್ವರ, ಕೋಟೆಕಾರು: ಮನೆಗಳು ಜಲಾವೃತ
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಬಳಿ 7 ಮನೆಗಳು, ಉಚ್ಚಿಲಗುಡ್ಡೆಯಲ್ಲಿ 6 ಮನೆಗಳು ಮತ್ತು ಕುಂಪಲ ಬಳಿಯ ಎ.ಜೆ. ಕಾಂಪೌಂಡ್‌ ಬಳಿ 2 ಮನೆಗಳು ಜಲಾವೃತಗೊಂಡಿವೆ. ಕೋಟೆಕಾರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಗುಡ್ಡಕ್ಕೆಪಾಲ್‌ನಲ್ಲಿ ಜಲಾವೃತಗೊಂಡ 4 ಕುಟುಂಬ ಹಾಗೂ ಅಜ್ಜಿನಡ್ಕದಲ್ಲಿ ಒಂದು ಮನೆಯ ಸದಸ್ಯರನ್ನು ಸ್ಥಳಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next