Advertisement

ನೆಲದ ಏಕಾಗ್ರತೆಗೆ ಭಂಗವಾಗಬಾರದು: ಲಕ್ಷ್ಮೀಶ ತೋಳ್ಪಾಡಿ

02:52 PM Oct 14, 2018 | |

ಪುತ್ತೂರು: ನಾಚುವುದು ಮಣ್ಣಿನ ಗುಣ. ಆದ್ದರಿಂದ ಮಣ್ಣಿಗೆ ಹಸಿರು ಹೊದಿಸುವ ಕೆಲಸ ಮಾಡಬೇಕು. ಈ ಮೂಲಕ ಮಣ್ಣಿನೊಳಗೆ ನಡೆಯುವ ಏಕಾಗ್ರತೆಯ ಕ್ರಿಯೆಗೆ ಭಂಗ ಆಗದಂತೆ ನೋಡಿಕೊಳ್ಳಬೇಕಿದೆ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ದರ್ಬೆ ಅಶ್ವಿ‌ನಿ ಹೊಟೇಲ್‌ನ ಸಭಾಂಗಣದಲ್ಲಿ ಅ. 13ರಂದು ನಡೆದ ನರೇಂದ್ರ ರೈ ದೇರ್ಲ ಅವರ ನೆಲಮುಖಿ  ಹಾಗೂ ಬೀಜಧ್ಯಾನ 28 ಮತ್ತು 29ನೇ ಪುಸ್ತಕಗಳನ್ನು ಅನಾವರಣ ಮಾಡಿ ಮಾತನಾಡಿದರು.

Advertisement

ದೇವರಿಗೆ ಇಬ್ಬರು ಹೆಂಡಿರು. ಒಬ್ಟಾಕೆ ಲಕ್ಷ್ಮೀ. ಸಂಪತ್ತು ಎಂದರ್ಥ. ತನ್ನಲ್ಲಿರುವುದನ್ನು ಪ್ರಕಟಿಸುವುದು ಆಕೆಯ ಗುಣ. ಇನ್ನೊಬ್ಟಾಕೆ ಹ್ರೀ. ಅಂದರೆ ಭೂಮಿ. ಇದಕ್ಕೆ ಇನ್ನೊಂದರ್ಥ ನಾಚಿಕೆ. ಇದುವೇ ಮಣ್ಣಿನ ಗುಣ. ಈ ಮಣ್ಣಿನ ಒಳಗಡೆ ನಡೆಯುವ ಕ್ರಿಯೆಗಳನ್ನು ಅದೇಷ್ಟೋ ಜೀವರಾಶಿಗಳು ಅವಲಂಭಿಸಿವೆ. ನಾಚಿಕೆಯನ್ನು ಬಿಟ್ಟು, ಮಣ್ಣನ್ನು ಕೆದಕಿ ಹಾಕುವ ಮೂಲಕ ಒಳಗಿನ ಕೆಲಸಗಳನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದೇವೆ. ಇದು ಅಪಾಯ ಎಂದರು.

ಏಕಾಗ್ರತೆಯ ಪರಿಚಯ
ಮಣ್ಣಿನ ಒಳಗಿನ ಕ್ರೀಯೆಯಂತೆ ಜ್ಞಾನ. ಮರೆಯಲ್ಲಿ ನಿಂತು ಪಡೆಯುವುದೇ ಜ್ಞಾನ. ಒಳಗಡೆ ಏನಾಗುತ್ತದೆ ಎಂದು ತಿಳಿದುಕೊಳ್ಳುವುದೇ ನಿಜವಾದ ಅರಿವು. ಅದು ರಟ್ಟಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೊರಗಡೆ ಬಿದ್ದರೆ ಸಾವು ಎದುರಾಗುತ್ತದೆ. ಆದ್ದರಿಂದ ಪ್ರಕೃತಿಯ ಏಕಾಗ್ರತೆಗೆ ಭಂಗ ಆಗದಂತೆ ಕೆಲಸ ನಿರ್ವಹಿಸಬೇಕು. ಇಂದಿನ ಮಾಹಿತಿ ಪ್ರಧಾನ ಸಮಾಜಕ್ಕೆ ಏಕಾಗ್ರತೆಯ ಪರಿಚಯವೇ ಇಲ್ಲ. ಮನಸ್ಸಿನ ಪರಿಚಯವೇ ಇಲ್ಲದಿದ್ದರೆ, ಮಾಹಿತಿ ಎಷ್ಟಿದ್ದು ಪ್ರಯೋಜನವೇನು? ಹಿಂದಿನವರಿಗೆ ಅದು ತಿಳಿದಿತ್ತು. ಹೇಗೆಂದರೆ, ಅವರಿಗೆ ಪ್ರಕೃತಿಯ ಒಡನಾಟ ಇತ್ತು ಎಂದು ವಿವರಿಸಿದರು.

ವಿ.ವಿ. ಆರಂಭ ಕೃಷಿಯ ಅಂತ್ಯಎಂದರ್ಥ
ಅಧ್ಯಕ್ಷತೆ ವಹಿಸಿದ್ದ ತೀರ್ಥಹಳ್ಳಿಯ ನೆಲ ಚಿಂತಕ ಎ.ಎಸ್‌. ಆನಂದ್‌ ಮಾತನಾಡಿ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಆರಂಭ ಆಯಿತು ಎಂದಾಗ ಇನ್ನೊಂದಷ್ಟು ಕೃಷಿ ಸತ್ತು ಹೋಯಿತು ಎಂದೇ ಅರ್ಥ. ಇವುಗಳು ಕೃಷಿ ಜೀವನಕ್ಕೆ ಇಟ್ಟ ರಾಕೆಟ್‌ಗಳಂತೆ ಭಾಸ ಆಗುತ್ತಿವೆ. ಇಂದಿನ ಶಿಕ್ಷಣ ವ್ಯವಸ್ಥೆ ಎಂಡೋ ಸಲ್ಫಾನ್‌ಗಿಂತಲೂ ಹೆಚ್ಚು ಅಪಾಯಕಾರಿ ಆಗಿ ಪರಿಣಮಿಸಿವೆ. ಫೂಟೋ ತೆಗೆದು ಫೇಸ್‌ಬುಕ್‌, ವ್ಯಾಟ್ಸ್‌ಆ್ಯಪ್‌ನಲ್ಲಿ ಅಪ್‌ ಲೋಡ್‌ ಮಾಡುವುದರಿಂದ ಕೃಷಿ ಬದುಕಲು ಸಾಧ್ಯವಿಲ್ಲ. ಬದಲಾಗಿ ಕೃಷಿಕನಿಗೆ ತಾಯಿ ಆಗುತ್ತೇನೆ ಎಂಬ ಹೆಣ್ಮಕ್ಕಳ ಮನಸ್ಥಿತಿಯಲ್ಲಿ ಕೃಷಿ ಭಾರತ ನಿಲ್ಲುತ್ತದೆ ಎಂದರು. ಬೀಜ ಮೊಳಕೆಯೊಡೆಯಲು ಮರೆತಿಲ್ಲ. ಆದರೆ ಕೃಷಿಕ ತನ್ನ ಕೆಲಸವನ್ನು ಮರೆಯುತ್ತಿದ್ದಾನೆ. 

ಹಳ್ಳಿಗಳು ಖಾಲಿ ಆಗುತ್ತಿವೆ. ಈ ಹೊತ್ತಿನಲ್ಲಿ ಕೃಷಿಗೆ ಮರಳಿ ಕರೆಯುವ ಕೈಗಳು ಕಡಿಮೆ ಆಗಿವೆ. ಕರೆಯುವ ಕೈಗಳಿಗೆ ಅನುಭವವೇ ಇಲ್ಲ. ಅನುಭವ ಇದ್ದವನು ಮಾತ್ರ ಸಮರ್ಥವಾಗಿ ಇನ್ನೊಬ್ಬನನ್ನು ಆಹ್ವಾನಿಸಲು ಸಾಧ್ಯ. ಕೃಷಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಧೈರ್ಯ ಇರುವುದು ಅನುಭವಿಗಳಿಗೆ ಮಾತ್ರ ಎಂದು ವಿವರಿಸಿದರು.

Advertisement

ಪುಸ್ತಕ ಪರಿಚಯ ಮಾಡಿದ ಪುತ್ತೂರು ಸ.ಪ್ರ.ದ. ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಐವನ್‌ ಎಫ್‌. ಲೋಬೋ ಮಾತನಾಡಿ, ಪ್ರಾಕೃತಿಕ, ಸಾಮಾಜಿಕ, ಮಾನವೀಯ ಸಂಬಂಧಕ್ಕೆ ಸಾಕ್ಷಿಯಾಗಿ ನೆಲಮುಖಿ ಹಾಗೂ ಬೀಜಧ್ಯಾನ ಪುಸ್ತಕಗಳು ನಿಲ್ಲುತ್ತವೆ ಎಂದರು.

ಕೃತಿಗಳ ಕರ್ತೃ ಡಾ| ನರೇಂದ್ರ ರೈ ದೇರ್ಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲೂರು ನಾಗೇಶ್‌ ವಂದಿಸಿ, ಆಳ್ವಾಸ್‌ ಕಾಲೇಜಿನ ಕಲಾ ವಿಭಾಗದ ಡೀನ್‌ ವೇಣುಗೋಪಾಲ್‌ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಹಸಿರು ಜೀವ ಭಾವ ಗಾನ ಕಾರ್ಯಕ್ರಮವನ್ನು ಕೆ.ಆರ್‌. ಗೋಪಾಲಕೃಷ್ಣ ಸುಳ್ಯ ಅವರು ನಡೆಸಿಕೊಟ್ಟರು.

ಬೀಜ ಎಂದರೆ; ಇನ್ನೊಮ್ಮೆಹುಟ್ಟು 
ಬೀಜ ಎಂದರೆ ಇನ್ನೊಮ್ಮೆ ಹುಟ್ಟು ಎಂದರ್ಥ. ಮರುಹುಟ್ಟು ಪಡೆಯದೇ ಇದ್ದರೆ ಅದು ಬೀಜವೇ ಅಲ್ಲ. ಆದ್ದರಿಂದ ಬೀಜವನ್ನು ಚೆಲ್ಲುತ್ತೇವೆ. ಅದು ಮಣ್ಣಿನಡಿಯಲ್ಲಿ ಕುಕ್ಕಬೇಕು. ಮರೆಯಲ್ಲಿ ನಿಂತು ಮರುಹುಟ್ಟು ಪಡೆಯಬೇಕು. ಜ್ಞಾನವೇ ಕೈಗಾರಿಕೆ ಆಗಿರುವ, ಶ್ರುತಿ ಬದಲಾದ ಸಮಾಜದ ತಲ್ಲಣ, ಆತಂಕವನ್ನು ನರೇಂದ್ರ ರೈ ಕೃತಿ ಹೊರಗಿಟ್ಟಿದೆ ಎಂದು ತೋಳ್ಪಾಡಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next