Advertisement
ಪುತ್ತೂರು ಸಂತೆಪುತ್ತೂರಿನ ಸೋಮವಾರದ ಸಂತೆ ಹತ್ತೂರಿಗೆ ಪ್ರಸಿದ್ಧಿ. ಆರ್ಥಿಕ ಚಟುವಟಿಕೆ ಮೇಲೆ ದೊಡ್ಡ ಮಟ್ಟದ ಕೊಡುಗೆ ನೀಡಿರುವ ಸಂತೆ ಕೊರೊನಾ ಲಾಕ್‌ಡೌನ್ ಬಳಿಕ ಆರಂಭಗೊಂಡಿಲ್ಲ. ಸುಮಾರು 100 ವರ್ಷಗಳಿಂದ ನಡೆಯುತ್ತಿದ್ದ ಸಂತೆಯ ಸ್ಥಳದಲ್ಲಿ 2002ರ ಬಳಿಕ ಅಂದಿನ ಪುರಸಭೆಗೆ ನೂತನ ಆಡಳಿತ ಕಟ್ಟಡ ಕಟ್ಟಲು ಆರಂಭಿಸಿದ ಕಾರಣ ಸಂತೆಯನ್ನು ತಾತ್ಕಾಲಿಕವಾಗಿ ಕಿಲ್ಲೆ ಮೈದಾನಕ್ಕೆ ಸ್ಥಳಾಂತರಿಸಲಾಯಿತು. ಕಟ್ಟಡ ನಿರ್ಮಾಣಗೊಂಡ ಬಳಿಕ ಪುರಸಭೆ ಆಡಳಿತ ಕಚೇರಿ ಅಲ್ಲೇ ಉಳಿದು, ಸಂತೆ ಮೈದಾನದಲ್ಲೇ ಉಳಿಯಿತು. 2016ರ ಆ. 11ರಂದು ಅಂದಿನ ಎ.ಸಿ. ಅವರ ಆದೇಶದಂತೆ ಸಂತೆಯನ್ನು ಎಪಿಎಂಸಿ ಯಾರ್ಡ್ ಗೆ ಸ್ಥಳಾಂತರಿಸಲಾಗಿತ್ತು. ಇದರ ವಿರುದ್ಧ ನಡೆದ ನಿರಂತರ ಹೋರಾಟದ ಫಲವಾಗಿ ಐದೇ ತಿಂಗಳಲ್ಲಿ ಮತ್ತೆ ಸಂತೆ ಕಿಲ್ಲೆ ಮೈದಾನಕ್ಕೆ ಮರಳಿತ್ತು. ಈ ನಡುವೆ ನಗರಸಭೆಯ ವಾರದ ಸಂತೆಯ 150ರಿಂದ 200 ವರ್ತಕರು ಮತ್ತು ಸಾವಿರಾರು ಗ್ರಾಹಕರಿಗಾಗಿ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಿಸುವ ಯೋಜನೆಯೂ ನನೆಗುದಿಗೆ ಬಿದ್ದಿದೆ. ಸಂತೆ ನಿರ್ಮಾಣಕ್ಕಾಗಿ ಯೋಜಿಸಿದ್ದ ಜಮೀನು ಹಾಗೂ ಅನುದಾನ ಅನ್ಯ ಬಳಕೆಗೆ ರೂಪಾಂತರಗೊಂಡಿದೆ.
ಮಿನಿ ವಿಧಾನಸೌಧದ ಬಳಿಯ ಹಳೆ ಪುರಸಭಾ ಕಚೇರಿ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು ಹಿಂದಿನ ಜಯಂತಿ ಬಲಾ°ಡ್ ಅಧ್ಯಕ್ಷತೆಯ ನಗರಸಭಾ ಆಡಳಿತ ತೀರ್ಮಾನಿಸಿತ್ತು. ನಗರೋತ್ಥಾನ ಯೋಜನೆಯಲ್ಲಿ ಪುತ್ತೂರಿಗೆ ಮಂಜೂರಾಗಿದ್ದ 25 ಕೋಟಿ ರೂ.ಗಳಲ್ಲಿ 1 ಕೋಟಿ ರೂ.ಗಳನ್ನು ಮಾರುಕಟ್ಟೆ ನಿರ್ಮಾಣಕ್ಕೆಂದೇ ಮೀಸಲಿರಿಸಲಾಗಿತ್ತು. ನಗರೋತ್ಥಾನದ ಹಣದಲ್ಲಿ ಕಿಲ್ಲೆ ಮೈದಾನ ನವೀಕರಣವೂ ಕಳೆದ ಜನವರಿ ವೇಳೆಗೆ ಪೂರ್ಣಗೊಂಡಿದ್ದು, ಇಲ್ಲಿ ಸಂತೆ ನಡೆಸುವುದು ಕಷ್ಟ ಎಂಬ ಭಾವನೆ ಇರುವಾಗಲೇ ಲಾಕ್‌ಡೌನ್ ಸಂತೆಗೆ ಬರೆ ಎಳೆದಿತ್ತು. ಈ ನಡುವೆ, ಸಂತೆಗೆಂದು ಯೋಜಿಸಿದ್ದ ಸ್ಥಳದಲ್ಲಿ ಇದೀಗ ನಗರಸಭೆಗೆ ಹೊಸ ಆಡಳಿತ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ಮಾಡಲಾಗಿದೆ. ಸಂತೆಗೆಂದು ತೆಗೆದಿರಿಸಿದ್ದ 1 ಕೋಟಿ ರೂ. ಅನ್ನೂ ಈ ಕಟ್ಟಡಕ್ಕೆಂದು ಬಳಸಲಾಗುತ್ತಿದೆ. ಸಂತೆಗೆ ಅನುಮತಿ ನೀಡಿದರೂ ಯಥಾಪ್ರಕಾರ ಮೈದಾನದಲ್ಲೇ ನಡೆಸಬೇಕಾದ ಅನಿವಾರ್ಯ. ಲಕ್ಷಾಂತರ ರೂ. ವೆಚ್ಚ ಮಾಡಿ ನವೀಕರಿಸಿದ ಮೈದಾನದಲ್ಲಿ ಇನ್ನೆಷ್ಟು ಸಮಯ ಸಂತೆ ನಡೆಸಲು ಸಾಧ್ಯ ಎಂಬ ಜನರ ಪ್ರಶ್ನೆಗೆ ಉತ್ತರವಿಲ್ಲ. ಸಂತೆ ಮುಗಿಸುವ ಪ್ರಯತ್ನ
ವಾರದ ಸಂತೆಗೆ ಶತಮಾನದ ಇತಿಹಾಸವಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಶಾಶ್ವತ ಸಂತೆಕಟ್ಟೆ ನಿರ್ಮಿಸಲು ಅಂದಿನ ಆಡಳಿತ 1 ಕೋಟಿ ರೂ. ಯೋಜನೆ ರೂಪಿಸಿತ್ತು. ಸ್ಥಳ ಆಯ್ಕೆಯನ್ನೂ ಮಾಡಿದ್ದೆವು. ಈಗ ಎರಡನ್ನೂ ಬದಲಾಯಿಸಲಾಗಿದ್ದು, ತೀರ್ಮಾನದ ಹಿಂದೆ ಐತಿಹಾಸಿಕ ಸೋಮವಾರದ ಸಂತೆಯನ್ನೇ ಶಾಶ್ವತವಾಗಿ ಇಲ್ಲವಾಗಿಸುವ ಷಡ್ಯಂತ್ರವಿದೆ. ಹಿಂದೆ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಿದಾಗ ಹೋರಾಟ ಮಾಡಿದವರು ಈಗ ಮೌನವಾಗಿದ್ದಾರೆ.
-ಎಚ್. ಮಹಮ್ಮದ್ ಆಲಿ ಮಾಜಿ ಸದಸ್ಯರು, ಪುತ್ತೂರು ನಗರಸಭೆ
Related Articles
ಸಂತೆಕಟ್ಟೆ ಹೊಸದಾಗಿ ನಿರ್ಮಿಸುವ ಬಗ್ಗೆ ಯಾವುದೇ ಯೋಜನೆ ಇಲ್ಲ. ಆ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ.
-ರೂಪಾ ಶೆಟ್ಟಿ , ಪೌರಾಯುಕ್ತೆ, ನಗರಸಭೆ ಪುತ್ತೂರು
Advertisement
ಕಿರಣ್ ಪ್ರಸಾದ್ ಕುಂಡಡ್ಕ