Advertisement

ಪುತ್ತೂರು: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ; ಸೆಕ್ಷನ್‌ 144 ಜಾರಿ: ಜನಸಂಚಾರ ವಿರಳ

07:06 PM Dec 20, 2019 | mahesh |

ಪುತ್ತೂರು: ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಪರಿಣಾಮವಾಗಿ ಶುಕ್ರವಾರ ಪುತ್ತೂರು ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲೂ 144 ಸೆಕ್ಷನ್‌ ಜಾರಿಯಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಜನರ ಓಡಾಟ ಸಾಧಾರಣವಾಗಿತ್ತು. ನಗರದ ಹಾಗೂ ಗ್ರಾಮಾಂತರದಲ್ಲಿ ಹಲವು ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ಬಾಗಿಲು ತೆರೆಯಲಿಲ್ಲ.

Advertisement

ಬಿಗಿ ಬಂದೋಬಸ್ತ್
ಯಾವುದೇ ಪ್ರತಿಭಟನೆ, ಸಭೆ, ಗುಂಪು ಸೇರುವಿಕೆ ಸಹಿತ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಬಂದೋಬಸ್ತ್ ನಡೆಸಲಾಗಿತ್ತು. ಹೆಚ್ಚುವರಿಯಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರು, ಸ್ಥಳೀಯ ಠಾಣೆಗಳ ಪೊಲೀಸ್‌ ಸಿಬಂದಿ, ಗೃಹರಕ್ಷಕ ದಳದವರು ಅಲ್ಲಲ್ಲಿ ಕಾನೂನು ಸುವ್ಯವಸ್ಥೆಯ ಭದ್ರತೆ ನಡೆಸಿದರು. ಡಿವೈಎಸ್ಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌, ನಗರ ಇನ್‌ಸ್ಪೆಕ್ಟರ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ಗಳು ನಗರ ಹಾಗೂ ಗ್ರಾಮಾಂತರದಲ್ಲಿ ಗಸ್ತು ನಡೆಸಿದರು. ಅಗತ್ಯ ಕಂಡುಬಂದರೆ ಹೆಚ್ಚುವರಿ ಪೊಲೀಸರನ್ನು ಕರೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿವೈಎಸ್ಪಿ ದಿನಕರ ಶೆಟ್ಟಿ ತಿಳಿಸಿದರು.

ಸಂಚಾರ ವ್ಯತ್ಯಯ
ಪುತ್ತೂರು-ಮಂಗಳೂರು ಮಧ್ಯೆ ಖಾಸಗಿ ಬಸ್ಸುಗಳ ಸಂಚಾರ ಶುಕ್ರವಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪುತ್ತೂರು – ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ಸುಗಳೂ ಸಂಚಾರ ನಡೆಸಲಿಲ್ಲ. ಆದರೆ ತಾಲೂಕಿನ ಗ್ರಾಮಾಂತರ ಸೇರಿದಂತೆ ಉಳಿದ ಭಾಗಗಳಿಗೆ ಸಂಚಾರ ನಡೆಸಿದವು. ಪುತ್ತೂರು ನಗರದ ಪ್ರಮುಖ ಸಂಚಾರ ವ್ಯವಸ್ಥೆಯಾದ ಆಟೋ ರಿಕ್ಷಾಗಳು ವಿರಳ ಸಂಖ್ಯೆಯಲ್ಲಿ ಸಂಚಾರ ನಡೆಸಿದವು. ಖಾಸಗಿ ಟೂರಿಸ್ಟ್‌ ವಾಹನಗಳು ವಿರಳ ಪ್ರಯಾಣಿಕರ ಕಾರಣದಿಂದ ಸಂಚಾರ ಸ್ಥಗಿತಗೊಳಿಸಿದವು.

ನಿಲುಗಡೆ ಸಮಸ್ಯೆ
ಶಾಲಾ – ಕಾಲೇಜುಗಳಿಗೆ ರಜೆ ಇದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಭಾಗಗಳಿಗೆ ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ನಗರದ ಬಸ್‌ ನಿಲ್ದಾಣದ ಉಳಿಕೆ ಬಸ್ಸುಗಳ ನಿಲುಗಡೆ ಸಾಧ್ಯವಾಗದೆ ರಸ್ತೆಯಲ್ಲಿ ನಿಲ್ಲಿಸಲಾಯಿತು. ಬಳಿಕ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಸುಗಮ ಸಂಚಾರದ ದೃಷ್ಟಿಯಿಂದ ರಸ್ತೆಯಿಂದ ಬಸ್ಸುಗಳನ್ನು ತೆರವುಗೊಳಿಸಲು ವ್ಯವಸ್ಥೆ ಮಾಡಿದರು.

12 ಗಂಟೆಯಿಂದ ಕೆಎಸ್‌ಆರ್‌ಟಿಸಿ ಸ್ಥಗಿತ
ತಾಲೂಕಿನ ಗ್ರಾಮಾಂತರಗಳಿಗೆ ಬೆಳಗ್ಗಿನಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳು ಓಡಾಟ ನಡೆಸಿದರೂ ಉಪ್ಪಿನಂಗಡಿ ಭಾಗದಲ್ಲಿ ಎರಡು ಬಸ್ಸುಗಳಿಗೆ ಕಲ್ಲೆಸೆದು ಹಾನಿಯಾದ ಘಟನೆ ನಡೆದ ಬಳಿಕ ಮಧ್ಯಾಹ್ನ 12 ಗಂಟೆಯಿಂದ ಬಸ್ಸುಗಳ ಓಡಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಸಂಜೆ 4 ಗಂಟೆಯ ತನಕ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಿ ಅನಂತರ ಪರಿಸ್ಥಿತಿ ಅವಲೋಕಿಸಿ ಸಂಚಾರ ನಡೆಸುವಂತೆ ಮೇಲಧಿಕಾರಿಗಳ ಸೂಚನೆಯ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಾಹಿತಿ ನೀಡಿದರು.

Advertisement

ಮೈಕ್‌ ಅನೌನ್ಸ್‌ಮೆಂಟ್‌
ಬೆಳಗ್ಗೆ ಪುತ್ತೂರು ನಗರದಲ್ಲಿ ಪೊಲೀಸರು ರಿಕ್ಷಾಕ್ಕೆ ಮೈಕ್‌ ಕಟ್ಟಿ ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿಯಲ್ಲಿರುವ ಕುರಿತು ಪ್ರಚಾರ ನಡೆಸಿದರು. ನಾಲ್ಕಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರದಂತೆ, ಅಹಿತಕರ ಘಟನೆಗಳಿಗೆ ಕಾರಣವಾಗದಂತೆ, ಹೊಟೇಲ್‌, ಅಂಗಡಿ ಮುಂಗಟ್ಟಿನ ವ್ಯಾಪಾರಿಗಳು ಸಹಕಾರ ನೀಡುವಂತೆ ಪೊಲೀಸ್‌ ಮಾಹಿತಿಯನ್ನು ನೀಡಲಾಯಿತು. ನಗರ ಹಾಗೂ ಗ್ರಾಮಾಂತರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗಿತ್ತು.

ಮೀನು ಇಲ್ಲ!
ಪುತ್ತೂರಿನ ಮೀನು ಮಾರುಕಟ್ಟೆಯೂ ಬಂದ್‌ ಆಗಿತ್ತು. ಹಸಿ ಮೀನು ಹಾಗೂ ಒಣ ಮೀನು ಎರಡೂ ವಿಭಾಗಗಳು ತೆರೆಯಲಿಲ್ಲ. ವರ್ತಕರು ಸ್ವಯಂಪ್ರೇರಿತ ಬಂದ್‌ ಮಾಡಿದರೂ ಮಂಗಳೂರು ಬಂದರ್‌ನಿಂದ ಮೀನು ತರಲು ಅವಕಾಶ ಇಲ್ಲದ್ದೂ ಇದಕ್ಕೆ ಕಾರಣವಾಯಿತು. ಸಂಪ್ಯ, ಕುಂಬ್ರ ಸಹಿತ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಉಳಿದಂತೆ ಈಶ್ವರಮಂಗಲ, ರೆಂಜಗಳಲ್ಲಿ ಹೆಚ್ಚಿನ ಬಂದೋಬಸ್ತ್ ನಡೆಸಲಾಯಿತು.

ಕಲ್ಲೆಸೆತ
ಉಪ್ಪಿನಂಗಡಿ ಕಲ್ಲೇರಿಯಲ್ಲಿ ಸರಕಾರಿ ಬಸ್‌ಗೆ ಹಾಗೂ ಕುಪ್ಪೆಟ್ಟಿಯಲ್ಲಿ ಖಾಸಗಿ ಬಸ್‌ಗೆ ಕಲ್ಲು ತೂರಾಟ ನಡೆಸಿರುವ ಕುರಿತು ವರದಿಯಾಗಿದೆ. ಘಟನೆಯಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಹಾನಿಯಾಗಿದೆ.

ತಲವಾರು ಪ್ರದರ್ಶನ?
ನಗರದ ಕೂರ್ನಡ್ಕ ಸಮೀಪ ರಿಕ್ಷಾದಲ್ಲಿ ಸುಬ್ರಹ್ಮಣ್ಯ ರಸ್ತೆ ಕಡೆಯಿಂದ ಬಂದ ವ್ಯಕ್ತಿಯೊಬ್ಬ ತಲವಾರು ಝಳಪಿಸಿ ಪರಾರಿಯಾದ ಘಟನೆ ವರದಿಯಾಗಿದೆ. ಸ್ಥಳೀಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಷ್ಟರಲ್ಲಿ ವ್ಯಕ್ತಿ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಲ್ಲೂ ಜನ ವಿರಳ
ಸರಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಜನರ ಸಂಖ್ಯೆ ಕಡಿಮೆಯಾಗಿತ್ತು. ಪ್ರತಿ ದಿನವೂ ರೋಗಿಗಳಿಂದ ತುಂಬಿರುವ ಸರಕಾರಿ ಆಸ್ಪತ್ರೆಯಲ್ಲಿ ಬೆಳಗ್ಗಿನಿಂದಲೇ ಹೊರ ರೋಗಿ ವಿಭಾಗ ಖಾಲಿಯಾಗಿತ್ತು. ತುರ್ತು ಸಂದರ್ಭದಲ್ಲಿ ಸೇವೆ ನೀಡಲು ವೈದ್ಯರು ಕರ್ತವ್ಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next