Advertisement

ಮಂಗನ ಕಾಯಿಲೆ ದೃಢಪಟ್ಟರೆ ಚುಚ್ಚುಮದ್ದು ಲಭ್ಯ

05:10 AM Jan 24, 2019 | Team Udayavani |

ಪುತ್ತೂರು: ಪಾಣಾಜೆ ಹಾಗೂ ಹಳೆನೇರಂಕಿ ಪ್ರದೇಶಗಳಲ್ಲಿ 2 ಮಂಗಗಳು ಮೃತಪಟ್ಟಿವೆ. ಇವುಗಳ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಶಿವಮೊಗ್ಗದಿಂದ ಬಂದಿಲ್ಲ. ಪಾಸಿಟಿವ್‌ ವರದಿ ಬಂದರೆ, ಸುತ್ತಲಿನ 2 ಕಿ.ಮೀ. ವ್ಯಾಪ್ತಿಯ ನಿವಾಸಿಗಳಿಗೆ ಚುಚ್ಚುಮದ್ದು ನೀಡಲಾಗುವುದು. ಅಷ್ಟು ದಾಸ್ತಾನು ಸಿದ್ಧ ವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

Advertisement

ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ. ಸಭಾಭವನದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ವಿಷಯ ಪ್ರಸ್ತಾವಿಸಿದ ರಾಧಾಕೃಷ್ಣ ಬೋರ್ಕರ್‌, ತಾಲೂಕಿನಲ್ಲಿ ಮಂಗನ ಕಾಯಿಲೆಯ ಭೀತಿ ಇದೆಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಡಾ| ಅಶೋಕ್‌ ಕುಮಾರ್‌ ರೈ, ಇದುವರೆಗೆ ತಾಲೂಕಿನಲ್ಲಿ ಮಂಗನ ಕಾಯಿಲೆಯ ಭೀತಿ ಇಲ್ಲ. ಹಳೇನೇರಂಕಿ ಹಾಗೂ ಪಾಣಾಜೆಯಲ್ಲಿ ಎರಡು ಮಂಗಗಳು ಸತ್ತಿವೆಯಾದರೂ ಇನ್ನೂ ವರದಿ ಬಂದಿಲ್ಲ. ಜ್ವರ ಬಂದವರ ಮೇಲೆ ನಿಗಾ ಇರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.

ಅರಣ್ಯ ಇಲಾಖೆ ಅಧಿಕಾರಿ ಮಾತ ನಾಡಿ, ಅರಣ್ಯ ಇಲಾಖೆಯೂ ಮುಂಜಾ ಗ್ರತಾ ಕ್ರಮ ಕೈಗೊಂಡಿದೆ. ಕಾಡಿಗೆ ಹೋಗುವ ಜನರಿಗೆ ಹಾಗೂ ಇಲಾಖೆ ಸಿಬಂದಿಗೆ ಹಚ್ಚಿಕೊಳ್ಳಲು ಮುಲಾಮು ನೀಡಲಾಗಿದೆ ಎಂದರು.

‘ಫ್ರೆಶ್‌ ಮಂಗ’-ಹಾಸ್ಯಾಸ್ಪದ
ಮಂಗನ ಕಾಯಿಲೆ ವಿಷಯದ ಚರ್ಚೆ ವೇಳೆ ಕಡಬದಲ್ಲಿ ಮಂಗ ವೊಂದು ಸತ್ತಿದೆ. ಇದನ್ನು ಏಕೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ತಾ.ಪಂ. ಅಧ್ಯಕ್ಷರು ಪ್ರಶ್ನಿಸಿದಾಗ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ, ಫ್ರೆಶ್‌ ಮಂಗವಾದರೆ ಮಾತ್ರ ಮರಣೋತ್ತರ ಪರೀಕ್ಷೆ ನಡೆಸು ವುದು ಎಂದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು. ಸಾವರಿಸಿಕೊಂಡ ತಾಲೂಕು ಆರೋಗ್ಯಾಧಿಕಾರಿ, ಮಂಗ ಸತ್ತು 24 ಗಂಟೆಯೊಳಗೆ ಮಾತ್ರ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯ. ಕಡಬದಲ್ಲಿ ಸಿಕ್ಕಿದ ಮಂಗ ಕೊಳೆತಿತ್ತು ಎಂದರು.

Advertisement

ಅಕ್ಕಿಯಲ್ಲಿ ಹುಳು
ಉಪ್ಪಿನಂಗಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯದ ದಾಸ್ತಾನು ಕೊಠಡಿಯಲ್ಲಿ ಹುಳ, ಹೆಗ್ಗಣ, ಗುಗ್ಗುರು ಕೂಪದಲ್ಲಿ ಪತ್ತೆಯಾದ ಅಕ್ಕಿಗೆ ಸಂಬಂಧಿಸಿ ಬೇಜವಾಬ್ದಾರಿ ವರ್ತನೆ ತೋರಿದ ನಿಲಯದ ಮೇಲ್ವಿಚಾರಕಿ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಿರಿ ಎಂದು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಪ್ರಶ್ನಿಸಿದರು.

ವಾರ್ಡನ್‌ ಜೋಸೆಫ್‌ ಉತ್ತರಿಸಿ, 2017ರಿಂದ 2018ರ ಮಾರ್ಚ್‌ನಲ್ಲಿ ಯಾವುದೇ ಅಕ್ಕಿ ಬಂದಿಲ್ಲ. ಜೂನ್‌ ತಿಂಗಳಲ್ಲಿ ಬಾಕಿಯಾದ ಅಕ್ಕಿಯನ್ನು ಬಿಡುಗಡೆ ಮಾಡಲಾಗಿತ್ತು. ನಮಗೆ ಬೇಡವಾದರೂ ಅಕ್ಕಿಯನ್ನು ಖರೀದಿ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ದಾಸ್ತಾನು ಮಾಡಿದ ಅಕ್ಕಿಯನ್ನು ಇಡಲು ಸರಿಯಾದ ವ್ಯವಸ್ಥೆ ಇಲ್ಲದೆ ತೊಂದರೆ ಆಗಿರಬಹುದು. ಅಲ್ಲಿಗೆ ಶೋಭಾ ಅವರು ವಾರ್ಡನ್‌, ನಾನಲ್ಲ ಎಂದರು.

ಆಕ್ಷೇಪಿಸಿದ ಅಧ್ಯಕ್ಷರು ನಿಮಗೆ ಎಷ್ಟು ಬೇಕೋ ಅಷ್ಟೇ ಇಂಡೆಂಡ್‌ ಹಾಕಿ ಅಕ್ಕಿಯನ್ನು ತರಿಸಿಕೊಳ್ಳಬಹುದಲ್ಲವೇ? ಯಾಕೆ ಹೆಚ್ಚುವರಿ ಅಕ್ಕಿ. ಇವತ್ತು 22 ಕಿಂಟ್ವಾಲ್‌ ಅಕ್ಕಿ ಅಲ್ಲಿ ಉಪಯೋಗ ಮಾಡದ ರೀತಿ ಇದೆ. ಅದು ಯಾರಿಗೂ ಕಾಣಬಾರದು ಎಂದು ಅದನ್ನು ಮುಚ್ಚಿಟ್ಟಿದ್ದಾರೆ. ಒಂದು ವೇಳೆ ನೀವು ನಿಮ್ಮ ಮಕ್ಕಳಿಗೆ ಆ ಅಕ್ಕಿಯನ್ನು ಕೊಡುತ್ತೀರಾ ಎಂದು ಪ್ರಶ್ನಿಸಿದರು. ತತ್‌ಕ್ಷಣ ವಿಸ್ತರಣಾಧಿಕಾರಿಯನ್ನು ಸಭೆಗೆ ಆಗಮಿಸುವಂತೆ ತಿಳಿಸಲು ಸೂಚಿಸಿದರು.

ವಿಸ್ತರಣಾಧಿಕಾರಿ ತಾರನಾಥ್‌ ಸಭೆಗೆ ಆಗಮಿಸಿ, ತನಗೆ ಮಾಹಿತಿ ಇಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷರು, ಅಧಿಕಾರಿ ಹಾಗೇ ಹೇಳುವುದು ಸರಿಯಲ್ಲ ಎಂದರು. ವಿದ್ಯಾರ್ಥಿ ನಿಲಯದಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟದ ಸಮಯದಲ್ಲಿ ಅಲ್ಲಿ ನಿಲಯದ ಮೇಲ್ವಿಚಾರಕರು ಉಪಸ್ಥಿತರಿರಬೇಕೆಂಬ ನಿಯಮವಿದೆ. ಅದನ್ನು ನೀವು ಪರಿಶೀಲಿಸಿಲ್ಲ. ವಿದ್ಯಾರ್ಥಿಗಳು ನೀಡಿದ ದೂರನ್ನು ಪರಿಶೀಲಿಸಿಲ್ಲ ಎನ್ನುವುದು ನಮಗೆ ವಿದ್ಯಾರ್ಥಿಗಳಿಂದಲೇ ತಿಳಿದಿದೆ. ಸರಕಾರದ ಸವಲತ್ತನ್ನು ಈ ರೀತಿ ದುರುಪಯೋಗ ಮಾಡುವುದು ಸರಿಯಲ್ಲ. ಘಟನೆಯ ಕುರಿತು ಮೇಲ್ವಿಚಾರಕರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ? ಇಲ್ಲವಾದರೆ ನಾವು ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕಾಗುತ್ತದೆ ಎಂದರು. ಉತ್ತರಿಸಿದ ವಿಸ್ತರಣಾಧಿಕಾರಿ, ಈಗಾಗಲೇ ಮೇಲ್ವಿಚಾರಕರಿಗೆ ನೋಟಿಸ್‌ ನೀಡಿ, ಸ್ಥಳ ಮಹಜರು ಮಾಡಬೇಕಾಗಿದೆ ಎಂದರು. ತಾ.ಪಂ. ಇಒ ಜಗದೀಶ್‌ ಎಸ್‌., ಸ್ಥಾಯೀ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ಕಡಬ ವಿಶೇಷ ತಹಶೀಲ್ದಾರ್‌ ಜಾನ್‌ಪ್ರಕಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next