Advertisement

‘ಸರಕಾರದ ಯೋಜನೆಗಳು  ಹೆಣ್ಣು ಮಕ್ಕಳಿಗೆ ಪ್ರಯೋಜನ ಸಿಗಲಿ’

05:47 AM Jan 31, 2019 | |

ಪುತ್ತೂರು: ಹೆಣ್ಣು ಮಕ್ಕಳನ್ನು ಹೆತ್ತ ಗೌರವ ನಮ್ಮಲ್ಲಿರಬೇಕು. ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ, ಬೆಂಬಲ ನೀಡುವ ನಿಟ್ಟಿನಲ್ಲಿ ಸರಕಾರಗಳು ಹಮ್ಮಿಕೊಂಡಿರುವ ಹಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗ್ಡೆ ಹೇಳಿದರು.

Advertisement

ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ, ವರದಕ್ಷಿಣೆ ನಿಷೇಧ, ಕೌಟುಂಬಿಕ ದೌರ್ಜನ್ಯ ತಡೆ, ಮಹಿಳಾ ದೌರ್ಜನ್ಯ ತಡೆ, ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರುದ್ಧ ಪ್ರಚಾರಾಂದೋಲನ ಸಮಿತಿ, ಮಾದಕ ದ್ರವ್ಯ ಸೇವನೆ ನಿಷೇಧ, ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಅಂಗವಿಕಲರ ತಾಲೂಕು ಮಟ್ಟದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಮಗುವಿಗೆ ಪ್ರಶಂಸಾ ಪತ್ರ
ಬೇಟಿ ಪಡಾವೋ, ಬೇಟಿ ಬಚಾವೋ ಯೋಜನೆಯಲ್ಲಿ ಸರಕಾರದಿಂದ ಪ್ರತಿ ತಿಂಗಳ ಮೊದಲ ಗುರುವಾರ ವಿವಿಧ ಜಾಗೃತಿ ಕಾರ್ಯಕ್ರಮ ನಡೆಯುತ್ತಾ ಇದೆ. ತಾಯಂದಿರನ್ನು ಗುರುತಿಸುವ, ಹೆಚ್ಚು ಅಂಕ ಪಡೆದ ಮಗುವಿಗೆ ಪ್ರಶಂಸಾ ಪತ್ರ ಸಹಿತ ವಿವಿಧ ಯೋಜನೆಗಳ ಮೂಲಕ ಲಿಂಗಾನುಪಾತವನ್ನು ತಡೆಗಟ್ಟಲು ಸರಕಾರ ವಿವಿಧ ಯೋಜನೆ ಹಾಕಿಕೊಂಡಿದೆ. ಹೆಣ್ಣು ಮಕ್ಕಳು ಹೆದರುವ ಆವಶ್ಯಕತೆ ಇಲ್ಲ ಎಂದರು.

ಅನುಪಾತ ದಾಖಲೀಕರಣ
ಉಪ ತಹಶೀಲ್ದಾರ್‌ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಲಿಂಗಾನುಪಾತ ವ್ಯತ್ಯಾಸದ ಕುರಿತು ವರದಿಯಿದೆ. ಅದನ್ನು ಸರಿಮಾಡುವ ನಿಟ್ಟಿನಲ್ಲಿ ತಾಲೂಕು ಮತ್ತು ಹೋಬಳಿಮಟ್ಟದಲ್ಲಿ ಅಂಗನವಾಡಿ, ಆಶಾ, ಸ್ತ್ರೀಶಕ್ತಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಜಿ.ಪಂ. ಸಿಇಒ ಸೂಚನೆ ಮೇರೆಗೆ ಪ್ರತಿ ಅಂಗನವಾಡಿಯಲ್ಲಿ ಗುಡ್ಡ ಗುಡ್ಡಿ ಬೋರ್ಡ್‌ ಅಳವಡಿಸಿ ಅದರಲ್ಲಿ ಹೆಣ್ಣು ಮತ್ತು ಗಂಡಿನ ಅನುಪಾತವನ್ನು ದಾಖಲಿಸುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಸಮಸ್ಯೆಗಳಿಗೆ ಪರಿಹಾರಕ್ಕೆ ಗ್ರಾ.ಪಂ. ಮಟ್ಟದಲ್ಲಿ ಪಿಡಿಒಗಳಿಗೆ ಮತ್ತು ಅಧ್ಯಕ್ಷರಿಗೆ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಾ.ಪಂ. ಮ್ಯಾನೇಜರ್‌ ಶಿವಪ್ರಕಾಶ್‌ ಅಡ್ಪಂಗಾಯ ತಿಳಿಸಿದರು. ನಯನಾ ರೈ ಮಾತನಾಡಿದರು. ತಾ.ಪಂ. ಸದಸ್ಯೆ ಉಷಾ ಅಂಚನ್‌, ನ್ಯಾಯವಾದಿ ದಿವ್ಯರಾಜ್‌ ಹೆಗ್ಡೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next