Advertisement

ಪುತ್ತೂರು ತಾಲೂಕು ಆಸ್ಪತ್ರೆ: ಖಾಲಿಯಾಗುತ್ತಿದೆ ಆಮ್ಲಜನಕ

09:55 PM May 04, 2021 | Team Udayavani |

ಪುತ್ತೂರು: ರಾಜ್ಯದ ನಾನಾ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗಿ ಪ್ರಾಣಕ್ಕೆ ಎರವಾಗುತ್ತಿರುವ ಹೊತ್ತಲ್ಲೇ ಸರಕಾರಿ ತಾಲೂಕು ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲಿಸಿದಾಗ ಇಲ್ಲೂ ಸುರಕ್ಷಿತ ಎನ್ನುವ ಸ್ಥಿತಿಯಂತೂ ಇಲ್ಲ.

Advertisement

ಕೋವಿಡ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯಾ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಸಿಲಿಂಡರ್‌ ಬಳಕೆ ಪ್ರಮಾಣ ಸಾಮಾನ್ಯಕ್ಕಿಂತ ಹತ್ತು ಪಟ್ಟು ಏರಿಕೆ ಕಂಡಿದೆ.

1ರಿಂದ 12ಕ್ಕೆ ಏರಿಕೆ :

ಕೋವಿಡ್ ಪ್ರಕರಣ ಕಂಡು ಬರುವುದಕ್ಕಿಂತ ಮೊದಲು ಪುತ್ತೂರು ತಾಲೂಕು ಆಸ್ಪತ್ರೆಗೆ ಪ್ರತೀ ದಿನ 1 ಆಮ್ಲಜನಕ ಸಿಲಿಂಡರ್‌ ಸಾಲುತ್ತಿತ್ತು. ಕೊರೊನಾ ಪ್ರಕರಣದಲ್ಲಿ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ ಏರಿಕೆ ಕಂಡುಬಂದು ಈಗ ದಿನವೊಂದಕ್ಕೆ 12ರಿಂದ 13ರ ತನಕ ಸಿಲಿಂಡರ್‌ ಖರ್ಚಾಗುತ್ತಿದೆ. 34 ಆಮ್ಲಜನಕ ಸಿಲಿಂಡರ್‌ ಸಾಮರ್ಥ್ಯ ಇಲ್ಲಿದ್ದು, ಪ್ರಸ್ತುತ ಖರ್ಚಾಗದ 12 ಸಿಲಿಂ ಡರ್‌ ಇದೆ. ಆದರೆ ಪರಿಸ್ಥಿತಿ ತಹಬದಿಗೆ ಬಾರದಿದ್ದಲ್ಲಿ ಆಮ್ಲಜನಕದ ಸಿಲಿಂಡರ್‌ ಬಳಕೆ ಏರಿಕೆ ಕಾಣುವುದು ನಿಶ್ಚಿತ. ಆಗ ಕೊರತೆ ಕಾಡುವ ಸಾಧ್ಯತೆ ಇದೆ.

50 ಹಾಸಿಗೆ ಮೀಸಲು :

Advertisement

100 ಹಾಸಿಗೆ ಸಾಮರ್ಥ್ಯದ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ 50 ಹಾಸಿಗೆಯನ್ನು ಕೋವಿಡ್‌ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಇದರಲ್ಲಿ 26 ಆಮ್ಲಜನಕ ಬೆಡ್‌ ಒದಗಿಸಲಾಗಿದೆ. ಇನ್ನೂ 16 ಬೆಡ್‌ ಒದಗಿಸುವ ಚಿಂತನೆ ನಡೆದಿದೆ.

ತುರ್ತು ಚಿಕಿತ್ಸೆಗೆ ಅಗತ್ಯ :

15ಕ್ಕೂ ಮಿಕ್ಕಿ ಕೋವಿಡ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದು ನೂರಾರು ಮಂದಿ ತಪಾಸಣೆಗೆ ಬರುತ್ತಿದ್ದಾರೆ. ಇದಲ್ಲದೆ ಡಯಾಲಿಸಿಸ್‌ಗಾಗಿ ಐದು ಘಟಕಗಳಿದ್ದು, ಹಲವಾರು ಮಂದಿ ಆಗಮಿಸುತ್ತಾರೆ. ಹಾಗಾಗಿ ಕೊರೊನಾದ ಜತೆಗೆ ಇತರ ತುರ್ತು ಚಿಕಿತ್ಸೆಗಾಗಿ ಆಮ್ಲಜನಕ ಅವಶ್ಯ ಇಲ್ಲಿದೆ.

ಪ್ರಾ.ಆ. ಕೇಂದ್ರಗಳಲ್ಲಿ ಆಮ್ಲಜನಕ, ಚಿಕಿತ್ಸೆ ಇಲ್ಲ :

ಪುತ್ತೂರು ಮತ್ತು ಕಡಬ ತಾಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಸಿಲಿಂಡರ್‌ ಬೆಡ್‌ ಸೌಲಭ್ಯಗಳಿಲ್ಲ. ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳಿದ್ದು ಆಕ್ಸಿಜೆನ್‌ ಬೆಡ್‌ ಒದಗಿಸಬೇಕೆಂಬ ಬೇಡಿಕೆ ಇದ್ದರೂ ಪರಿಶೀಲನೆಯಲ್ಲಿದೆ. ಕೊರೊನಾ ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ತಪಾಸಣೆ ಬಳಿಕ ಚಿಕಿತ್ಸೆಯ ಅಗತ್ಯವಿದ್ದರೆ ತಾಲೂಕು ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಸ್ಥಿತಿ ಇಲ್ಲಿನದು.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಬೇಡಿಕೆ :  ನಗರದಲ್ಲಿ ಹತ್ತಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಿದ್ದು ಅವುಗಳಲ್ಲಿ ಕೊರೊನಾ ಸಂಬಂಧಿತ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಏರಿಕೆ ಕಂಡಿದೆ. ಹೆರಿಗೆ, ಇತರ ಕಾಯಿಲೆಗಳಿಗೆ ಸಂಬಂಧಿಸಿ ದಾಖಲಾತಿಯು ಇದೆ. ಆಮ್ಲಜನಕ ಬೆಡ್‌ ಬಳಕೆಯು ಹೆಚ್ಚಾಗಿದ್ದು ದಿನೇ ದಿನೆ ಬೇಡಿಕೆ ಕೂಡ ಏರಿಕೆ ಕಂಡಿದೆ. ಸದ್ಯಕ್ಕೆ ಪೂರೈಕೆ ಇದ್ದರೂ ಅದು ಎಷ್ಟು ದಿನ ಅನ್ನುವ ಬಗ್ಗೆ ಖಾತರಿ ಕೊಡುವ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳ ಪರಿಸ್ಥಿತಿ ಕೂಡ ಇಲ್ಲ.

ಆಮ್ಲಜನಕ ಘಟಕ ಪ್ರಸ್ತಾವ :

ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಕಂಪೆ ನಿಯ ಸಿಎಸ್‌ಆರ್‌ ಫಂಡ್‌ನಿಂದ ಆಮ್ಲಜನಕ ಘಟಕ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು ಗೇಲ್‌ ಗ್ಯಾಸ್‌ ಅಥೋರಿಟಿ ಕಂಪೆನಿ ಸಿಎಸ್‌ಆರ್‌ ಫ‌ಂಡ್‌ನಿಂದ ಈ ಘಟಕ ನಿರ್ಮಾಣ ಗೊಳ್ಳಲಿದೆ. ಅದರ ಅನುಷ್ಠಾನಕ್ಕೆ ಕೆಲವು ಸಮಯ ಬೇಕಾಗಬಹುದು. ಪ್ರಸ್ತುತ ಆಮ್ಲಜನಕ ಸಿಲಿಂಡರ್‌ ಖಾಲಿಯಾದ ಮೇಲೆ ಮಂಗಳೂರಿನ ಮಲಬಾರ್‌ನಲ್ಲಿ ರೀ-ಫಿಲ್‌ ಮಾಡಿ ಪೂರೈಸಲಾಗುತ್ತಿದೆ.

45 ಮಂದಿಗೆ ಸೋಂಕು : ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಮೇ 4 ರಂದು ಆರೋಗ್ಯ ಇಲಾಖೆ ವರದಿಯಂತೆ 45 ಮಂದಿಗೆ ಕೋವಿಡ್ ದೃಢಪಟ್ಟಿದೆ.

ಈ ಹಿಂದೆ ದಿನಕ್ಕೆ 1 ಆಮ್ಲಜನಕ ಸಿಲಿಂಡರ್‌ ಸಾಲು ತ್ತಿತ್ತು. ಈಗ ಆ ಪ್ರಮಾಣ 10ರಿಂದ 13 ಕ್ಕೆ ಏರಿಕೆ ಕಂಡಿದೆ. ಕೊರೊನಾ ಸೋಂಕಿತರಾಗಿ ಚಿಕಿತ್ಸೆ ಪಡೆಯು ವವರಿಗೆ ಉಸಿರಾಟದ ಸಮಸ್ಯೆ ಕಂಡು ಬಂದಾಗ ಆಮ್ಲಜನಕ ಬಳಕೆ ಪ್ರಮಾಣ ಹೆಚ್ಚಾ ಗುತ್ತದೆ. ಸದ್ಯ 12 ಸಿಲಿಂಡರ್‌ ಇದ್ದು, ಹೆಚ್ಚು ಒದ ಗಿಸಲು ಬೇಡಿಕೆ ಸಲ್ಲಿಸಲಾಗಿದೆ.  ಡಾ| ಆಶಾ ಜ್ಯೋತಿ ಪುತ್ತೂರಾಯ,  ಮುಖ್ಯ ವೈದ್ಯಾಧಿಕಾರಿ ತಾಲೂಕು ಆಸ್ಪತ್ರೆ, ಪುತ್ತೂರು

 

-ವಿಶೇಷ  ವರದಿ

Advertisement

Udayavani is now on Telegram. Click here to join our channel and stay updated with the latest news.

Next