Advertisement

ಸಮಾನ ಅಭಿವೃದ್ಧಿಗೆ ಹೊಸ ಜಿಲ್ಲೆ ಅಗತ್ಯ

10:41 PM Mar 11, 2021 | Team Udayavani |

ದಕ್ಷಿಣ ಕನ್ನಡದ ಜಿಲ್ಲಾ ಕೇಂದ್ರಕ್ಕೂ ಗ್ರಾಮಾಂತರ ಪ್ರದೇಶಕ್ಕೂ ತುಂಬಾ ವ್ಯತ್ಯಾಸ ಇದೆ. ಮಂಗಳೂರು ಈಗಾಗಲೇ ಮಹಾನಗರ ಎಂಬ ದೃಷ್ಟಿಕೋನದಲ್ಲಿ  ಅಭಿವೃದ್ದಿ ಹೊಂದುತ್ತಿದೆ. ಇಲ್ಲಿನ ಅಧಿಕಾರಿಗಳ ಕಾರ್ಯಯೋಜನೆ ಮತ್ತು ಯೋಚನೆ ಎರಡೂ ಅದೇ ನಿಟ್ಟಿನಲ್ಲಿರುತ್ತದೆ. ಪುತ್ತೂರು ಜಿಲ್ಲೆಯಾದರೆ ಗ್ರಾಮಾಂತರ ಪ್ರದೇಶಕ್ಕೆ ತಕ್ಕಂತೆ ಇಲ್ಲಿನ ತಾಲೂಕುಗಳ ಅಭಿವೃದ್ಧಿ ಸಾಧ್ಯ.

Advertisement

ಸುಳ್ಯ ಮುಂಚೂಣಿಗೆ ಬರಲು ಅವಕಾಶ :

ಪುತ್ತೂರು ಜಿಲ್ಲೆಯಾದರೆ ಗ್ರಾಮೀಣ ಪ್ರದೇಶವಾದ ಸುಳ್ಯ ತಾಲೂಕಿಗೆ ಹೆಚ್ಚು ಅನುಕೂಲವಾಗಲಿದೆ. ಈಗ ಸುಳ್ಯ ಮಂಗಳೂರು ಜಿಲ್ಲೆಯ ಕಟ್ಟಕಡೆಯ ತಾಲೂಕಾಗಿದೆ. ಅತ್ತ ಮಡಿಕೇರಿ ಇತ್ತ ಕಾಸರಗೋಡು ಸಂಪರ್ಕ ಕೇಂದ್ರದ ಮಧ್ಯೆ ಹರಡಿಕೊಂಡಿದೆ. ಜಿಲ್ಲಾವಾರು ಸಿಗುವ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಸಿಗುವ ಪ್ರಮಾಣ ಸಾಲದೆ ನನೆಗುದಿಗೆ ಬೀಳುತ್ತಿದೆ. ಇದರಿಂದಾಗಿ ಅಭಿವೃದ್ಧಿಯ ದೃಷ್ಟಿಯಿಂದ ಸುಳ್ಯ  ತಾಲೂಕಿಗೆ ಬಹಳ ತೊಡಕಾಗಿದೆ.  ಒಂದು ವೇಳೆ ಪುತ್ತೂರು ಜಿಲ್ಲೆಯಾಗಬೇಕೆಂಬ  ದಶಕಗಳ ಕೂಗಿಗೆ ಸಕಾರಾತ್ಮಕ ಉತ್ತರ ದೊರಕಿದ್ದಲ್ಲಿ ಸುಳ್ಯ ತಾಲೂಕಿನ ಅಭಿವೃದ್ಧಿಗೆ ಪೂರಕ ವಾತಾವರಣ ದೊರೆಯಲಿದೆ. ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ಅನುಕೂಲವಾಗಲಿದೆ.

ಇಂದು ಸುಳ್ಯದ ಜನತೆ ಜಿಲ್ಲಾ ಕಚೇರಿಗೆ ಹೋಗಬೇಕಾದರೆ ಬಹಳಷ್ಟು ದೂರ ಪ್ರಯಾಣ ಮಾಡಬೇಕಿದೆ. ಅದೇ ಪುತ್ತೂರು ಜಿಲ್ಲಾ ಕೇಂದ್ರವಾದಾಗ ಸಾಮಾನ್ಯ ಜನರಿಗೂ ಎಲ್ಲ ಸವಲತ್ತುಗಳು ಕೈಗೆಟಕುವ ದೂರದಲ್ಲಿ ಸಿಕ್ಕಂತಾಗುತ್ತದೆ.

ಪ್ರದೇಶವಾರು ಅಭಿವೃದ್ಧಿಗೆ ಹೆಚ್ಚು ಗಮನ ಕೊಡ ಬಹುದು. ಸಾಂಸ್ಕೃತಿಕವಾಗಿ ಮತ್ತು ಶೈಕ್ಷಣಿಕವಾಗಿ ಎಲ್ಲ ವ್ಯವಸ್ಥೆಗಳು ಇಂದು ಜಿಲ್ಲಾ ಕೇಂದ್ರದಲ್ಲಿ ದೊರೆಯು ವುದರಿಂದ ಅದಕ್ಕಾಗಿ ಜನರು ಮಂಗಳೂರಿನತ್ತ ಮುಖ ಮಾಡಬೇಕಾಗಿದೆ.

Advertisement

ಸುತ್ತಮುತ್ತಲ ಪ್ರವಾಸಿ ತಾಣಗಳನ್ನು, ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸ ಬಹುದು. ಜಿಲ್ಲಾ ಕೇಂದ್ರದಲ್ಲಿ ಉದ್ಯೋಗ ಸೃಷ್ಟಿ ಯಾದಾಗ ಯುವಜನತೆ ಅಲ್ಲಿಗೆ ತೆರೆದುಕೊಳ್ಳಬಹುದು. ಕೃಷಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು. ಶಿಕ್ಷಣ ಕಾಶಿಯೆಂದು ಕರೆಸಿ ಕೊಳ್ಳುತ್ತಿರುವ  ಸುಳ್ಯ ತಾಲೂಕು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಡಾ| ಅನುರಾಧಾ ಕುರುಂಜಿ ಉಪನ್ಯಾಸಕರು, ನೆಹರೂ ಮೆಮೋರಿಯಲ್‌ ಕಾಲೇಜು, ಸುಳ್ಯ

ಸಮಾನ ಅಭಿವೃದ್ಧಿಗೆ ಪುತ್ತೂರು ಜಿಲ್ಲೆ ಅಗತ್ಯ :

ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಹಾಗೂ ಹೊಸದಾಗಿ ರಚನೆಗೊಂಡಿರುವ ಕಡಬ ತಾಲೂಕಿನ ಭಾಗಗಳು ಭೌಗೋಳಿಕವಾಗಿ ಸಮಾನ ಲಕ್ಷಣಗಳನ್ನು ಒಳ ಗೊಂಡಿರುವುದರಿಂದ ಈ ಎಲ್ಲ ಪ್ರದೇಶಗಳನ್ನು ಸೇರಿಸಿಕೊಂಡು ಪುತ್ತೂರು ಜಿಲ್ಲೆಯ ರಚನೆ ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಾಗಿದೆ. ಜನರಿಗೆ ತಮ್ಮ ಯಾವುದೇ ಕೆಲಸ ಕಾರ್ಯ ಮಾಡಲು ಜಿಲ್ಲಾ ಕೇಂದ್ರಕ್ಕೂ ತೆರಳುವುದಕ್ಕೆ ಬಹುತೇಕ ಪ್ರದೇಶದ ಮಂದಿಗೂ ಇದು ಹತ್ತಿರವಾಗಲಿದೆ. ಹಿಂದೆ ನಾವು ಡೆಂಟಲ್‌ ಅಸೋಸಿಯೇಶನ್‌ ಮಾಡು ವಾಗಲೂ ಇದೇ ತಾಲೂಕುಗಳನ್ನು ಸೇರಿಸಿ ಮಾಡಿದ್ದೆವು. ಸರಕಾರ ಈ ಕುರಿತು ಗಮನಹರಿಸಿ ಪುತ್ತೂರು ಜಿಲ್ಲೆಯನ್ನು ಘೊಷಣೆ ಮಾಡುವ ಕಾರ್ಯ ಮಾಡಬೇಕು ಎಂದು ನಮ್ಮ ಅಭಿಪ್ರಾಯ ವಾಗಿದೆ.

-ಡಾ| ರಾಜಾರಾಮ್‌ ಕೆ.ಬಿ., ದಂತ ವೈದ್ಯರು

ಬೆಳ್ತಂಗಡಿಯ ಅಭಿವೃದ್ಧಿಗೆ ಪೂರಕ :

ಬೆಳ್ತಂಗಡಿ ತಾಲೂಕಿನ ಜನತೆಯ ಭಾವನೆಯಂತೆ ಪುತ್ತೂರು ಜಿಲ್ಲೆ ರೂಪುಗೊಳ್ಳಬೇಕೆಂಬುದು ನನ್ನ ಮಹ ದಾಸೆ. ಒಂದು ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಅಧಿಕಾರ ವಿಕೇಂದ್ರೀಕರಣ ಅತೀ

ಅಗತ್ಯ. ಮಂಗಳೂರಿಗೆ ಹೋಲಿಕೆ ಮಾಡಿದಾಗ ಎಲ್ಲ ವಿಚಾರಗಳಲ್ಲೂ ಪುತ್ತೂರು ಜಿಲ್ಲೆ ಬೆಳ್ತಂಗಡಿ ತಾಲೂಕಿಗೆ ಸೂಕ್ತವಾಗಿದೆ. ಅಂತರವೂ ಕಡಿಮೆ ಯಾಗಿರುವುದು, ಜಿಲ್ಲಾ ಕೇಂದ್ರ ವನ್ನು ಸಂಪರ್ಕಿಸಲು ಸುಲಭ ಸಾಧ್ಯ ವಾಗುತ್ತದೆ. ಬೆಳ್ತಂಗಡಿ ತಾಲೂಕಾಗಿದ್ದು, ಪುತ್ತೂರು ಜಿಲ್ಲೆ ರೂಪುಗೊಂಡಲ್ಲಿ ಅಭಿವೃದ್ಧಿ ವೇಗ ಪಡೆದುಕೊಳ್ಳು

ವುದರಲ್ಲಿ ಸಂಶಯವಿಲ್ಲ. ಬೆಳ್ತಂಗಡಿ ತಾಲೂಕಿನ ಹಿತದೃಷ್ಟಿಯಿಂದ ಅತೀ ಶೀಘ್ರದಲ್ಲಿ

ಪುತ್ತೂರು ಜಿಲ್ಲೆ ರೂಪುಗೊಳ್ಳಲಿ ಎಂಬ ಆಶಯ ನಮ್ಮದು. - ಯಾಕೂಬ್‌ ಎಸ್‌.ಕೊಯ್ಯುರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು

ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಹೆಚ್ಚಿನ ಪ್ರಗತಿ :

ಈಗಿನ ಜಿಲ್ಲಾ ಕೇಂದ್ರ ಮಂಗಳೂರಿನಿಂದ ದೂರಲ್ಲಿರುವ ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳು ಹಾಗೂ ವಿಟ್ಲ ಭಾಗಗಳನ್ನು ಸೇರಿಸಿಕೊಂಡು ಪುತ್ತೂರನ್ನು ಜಿಲ್ಲಾ ಕೇಂದ್ರವನ್ನಾಗಿಸಿ ಹೊಸ ಜಿಲ್ಲೆ ರಚನೆಯಾದರೆ  ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಜಿಲ್ಲಾ ಕೇಂದ್ರ ಹತ್ತಿರದಲ್ಲಿದ್ದರೆ  ಆಡಳಿತಾತ್ಮಕವಾಗಿಯೂ ಅನುಕೂಲಕರ. ಹೊಸ ಜಿಲ್ಲೆ ರಚನೆಯಾದರೆ ಹೊಸ ಜಿಲ್ಲಾ ಪಂಚಾಯತ್‌ ವ್ಯವಸ್ಥೆಯೂ ಅಸ್ತಿತ್ವಕ್ಕೆ ಬರುತ್ತದೆ. ಆಗ ಸಹಜವಾಗಿಯೇ ಹೆಚ್ಚಿನ ಅನುದಾನಗಳು ಲಭಿಸುತ್ತದೆ. ಆಗ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿದಿರುವ ಪ್ರದೇಶಗಳ  ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲು ಸಾಧ್ಯ.  ಜನರಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಹತ್ತಿರದಲ್ಲಿಯೇ ಸಿಗುತ್ತಾರೆ. ಇಲಾಖಾಧಿಕಾರಿಗಳು ಕೂಡ ಒತ್ತಡ ರಹಿತರಾಗಿ ಕೆಲಸ ಮಾಡಬಹುದು. ತಾಲೂಕುಗಳ ಜನರು ಕೂಡ ಜಿಲ್ಲಾ ಕೇಂದ್ರವನ್ನು ಸುಲಭವಾಗಿ ಸಂಪರ್ಕಿಸಬಹುದು. ವ್ಯಾಪಾರ ವಹಿವಾಟು, ಶಿಕ್ಷಣ, ಉದ್ದಿಮೆ, ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ಸಾಧನೆಯ ಹಿನ್ನೆಲೆ ಇರುವ ಪುತ್ತೂರು ಮತ್ತಷ್ಟು ಅಭಿವೃದ್ಧಿಗೆ ನೆರವಾಗಲಿದೆ. ಸುಲಲಿತ ಆಡಳಿತಕ್ಕಾಗಿ ಮತ್ತು ಮಲೆನಾಡು ಪ್ರದೇಶವಾಗಿರುವ ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಸ್ಪಂದನಕ್ಕಾಗಿ ಪುತ್ತೂರು ಜಿಲ್ಲಾ ಕೇಂದ್ರವಾಗಿ ರಚನೆಯಾಗುವುದರಿಂದ ಅನುಕೂಲವಾಗಲಿದೆ. ಆದುದರಿಂದ ಪುತ್ತೂರು ಜಿಲ್ಲಾ ಕೇಂದ್ರವಾಗಿ ಮೂಡಿಬರಲಿ ಎನ್ನುವುದು ಎಲ್ಲರ ಆಶಯವಾಗಿದೆ.   -ಪಿ.ಪಿ.ವರ್ಗೀಸ್‌, ಜಿ.ಪಂ.ಸದಸ್ಯರು, ಕಡಬ ಕ್ಷೇತ್ರ

 ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ : ಐದು ಗ್ರಾಮಾಂತರ ತಾಲೂಕುಗಳನ್ನು ಒಳಗೊಂಡು ಪುತ್ತೂರು ಜಿಲ್ಲೆಯಾಗಬೇಕೆಂಬುದು ಬಹುಕಾಲದ ಬೇಡಿಕೆ. ಈ ಕುರಿತು ನಿಮ್ಮ ಅಭಿಪ್ರಾಯ ಬರೆದು ನಿಮ್ಮ  ಭಾವಚಿತ್ರದೊಂದಿಗೆ ವಾಟ್ಸ್‌ಆ್ಯಪ್‌ ಮಾಡಿ.   9148594259

Advertisement

Udayavani is now on Telegram. Click here to join our channel and stay updated with the latest news.

Next