Advertisement

ಗುರಿ ಸಾಧಿಸಲಿ, ಪ್ರಯೋಜನ ಸಿಗಲಿ

04:37 AM Jan 23, 2019 | Team Udayavani |

ಪುತ್ತೂರು : ಸ್ವಚ್ಛ ಭಾರತ್‌ ಮಿಷನ್‌ ಅಡಿ ಪರಿಸರ ನೈರ್ಮಲ್ಯ ಕಾಪಾ ಡುವ ನಿಟ್ಟಿನಲ್ಲಿ ಗ್ರಾ.ಪಂ. ಮಟ್ಟದಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ ಘಟಕ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಆದರೆ ಗ್ರಾಮೀಣ ಭಾಗದ ಗ್ರಾ.ಪಂ. ಗಳಲ್ಲಿ ಇದರ ಅಸ್ತಿತ್ವ, ಅಗತ್ಯದ ಕುರಿತು ಚರ್ಚೆಗಳೂ ಹುಟ್ಟಿಕೊಂಡಿವೆ. ಒಂದು ಘಟಕಕ್ಕಾಗಿ ಸರಕಾರ 20 ಲಕ್ಷ ರೂ. ವೆಚ್ಚ ಮಾಡುತ್ತಿದ್ದು, ಇದರಲ್ಲಿ 15 ಲಕ್ಷ ರೂ. ಘಟಕ ನಿರ್ಮಾಣಕ್ಕೆ ಹಾಗೂ 5 ಲಕ್ಷ ರೂ. ವಾಹನ ಖರೀದಿಗೆಂದು ವಿಂಗಡಿಸಲಾಗಿದೆ.

Advertisement

ತೀರಾ ಗ್ರಾಮೀಣಕ್ಕೆ ಬೇಕೇ?
ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳನ್ನು ಹೊಂದಿ ರುವ ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಕಷ್ಟಕರ. ಅದಕ್ಕಾಗಿ ಘನ, ದ್ರವ ತ್ಯಾಜ್ಯ ಘಟಕಗಳ ನಿರ್ಮಾಣ ಅಗತ್ಯವಾಗಿದೆ. ಆದರೆ ಗ್ರಾಮೀಣ ಭಾಗದ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಇಂತಹ ತ್ಯಾಜ್ಯ ಸಮಸ್ಯೆಗಳು ಕಂಡುಬರುತ್ತಿಲ್ಲ. ಇಂತಹ ಕಡೆಗಳಲ್ಲಿ ಭಾರೀ ವೆಚ್ಚದ ಘಟಕ ಸ್ಥಾಪನೆ ಅಗತ್ಯವಿದೆಯೇ ಎನ್ನುವ ಚರ್ಚೆಗಳು ಸಾರ್ವಜನಿಕರಲ್ಲಿವೆ. ತೀರಾ ಗ್ರಾಮೀಣದ ಗ್ರಾ.ಪಂ.ಗಳಲ್ಲಿ 10 ರೂ. ವೆಚ್ಚದ ಕಸ ಸಂಗ್ರಹಣೆಯ ವಿಲೇವಾರಿಗೆ 100 ರೂ. ವೆಚ್ಚ ಮಾಡುವ ಯೋಜನೆ ಇದಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ತಾಲೂಕಿನ ಉಪ್ಪಿನಂಗಡಿ, ಕಡಬ, ನೆಲ್ಯಾಡಿ, ಒಳಮೊಗ್ರು, ಕಬಕ, ನೆಕ್ಕಿಲಾಡಿ ಮೊದಲಾದ ಗ್ರಾ.ಪಂ.ಗಳು ತ್ಯಾಜ್ಯ ಸಮಸ್ಯೆಯ ಸಂಕಟ ಅನುಭವಿಸುತ್ತಿದ್ದು, ಇಂತಹ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಘನ, ದ್ರವ ತ್ಯಾಜ್ಯ ಘಟಕಗಳ ನಿರ್ಮಾಣದ ಅನಿವಾರ್ಯತೆ ಇದೆ. ಆದರೆ ಗ್ರಾಮೀಣ ಭಾಗದ ಬಹುತೇಕ ಗ್ರಾ.ಪಂ.ಗಳಲ್ಲಿ ಇಂತಹ ಪರಿಸ್ಥಿತಿ ಸದ್ಯಕ್ಕಂತೂ ಇಲ್ಲ. ಹಳ್ಳಿಗಳಲ್ಲಿ ಕಸ ಉತ್ಪತ್ತಿಯಾದರೆ ತೆಂಗು, ಅಡಿಕೆ ಬುಡಗಳಿಗೆ ಗೊಬ್ಬರ ಸಹಿತ ಸಾಂಪ್ರದಾಯಿಕ ವಿಲೇವಾರಿ ಕ್ರಮ ಅನುಸರಿಸಲಾಗುತ್ತಿದೆ. ಇರುವ ಕೆಲವೇ ಅಂಗಡಿಗಳ ಅತ್ಯಲ್ಪ ಕಸ ಸಂಗ್ರಹಣೆ ಮಾಡಲಾಗುತ್ತಿದೆ.

ಎಲ್ಲವೂ ಗುರಿ ಸಾಧನೆಗಾಗಿ
ಗುರಿ ಸಾಧಿಸುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಅಗತ್ಯವಿಲ್ಲದ ಗ್ರಾ.ಪಂ. ವ್ಯಾಪ್ತಿಗಳಿಗೆ ಅಧ್ಯಯನ ನಡೆಸದೆ ಘಟಕಗಳನ್ನು ಅಳವಡಿಸುವ ಪ್ರಯತ್ನ ಜಿಲ್ಲಾಮಟ್ಟದ ಅಧಿಕಾರಿಗಳ ಒತ್ತಡ ನಡೆಯುತ್ತಿದೆ. ಗ್ರಾ.ಪಂ. ಅಧಿಕಾರಿ ವರ್ಗ ಹಾಗೂ ಆಡಳಿತ ವ್ಯವಸ್ಥೆಗೆ ‘ಅನಪೇಕ್ಷಿತ’ ಸಂಕಟ ಉಂಟು ಮಾಡುತ್ತಿದ್ದಾರೆ ಎನ್ನುವ ಆರೋಪಗಳೂ ವ್ಯಕ್ತವಾಗುತ್ತಿವೆ.

ಪ್ರಾಯೋಗಿಕವಾಗಿ ನಡೆಯಲಿ
ತೀರಾ ಅಗತ್ಯವಾಗಿರುವ ಕಡೆಗಳಲ್ಲಿ ಈ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಬೇಕಾದ ಚಿಂತನೆಗಳು ಜಿ.ಪಂ. ಮಟ್ಟದಿಂದ ನಡೆಯಬೇಕು. ಕಸ ಸಂಗ್ರಹಣೆ ಇಲ್ಲದ ಗ್ರಾ.ಪಂ.ಗಳಲ್ಲಿ ಈ ಘಟಕ ನಿರ್ಮಾಣ ಮಾಡಿ ಅನಂತರ ‘ಅನಾಥ’ವಾಗುವ ಸ್ಥಿತಿ, ಸರಕಾರಿ ಹಣ ಪೋಲು ಮಾಡುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

Advertisement

ಎಲ್ಲೆಲ್ಲಿ ಜಾರಿ?
ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ, ಆಲಂಕಾರುಗಳಲ್ಲಿ ಘಟಕ ನಿರ್ಮಾಣವಾಗಿದೆ. ಗೋಳಿತೊಟ್ಟು, ಹಿರೇಬಂಡಾಡಿ, ಕೊಳ್ತಿಗೆ, ಮರ್ಧಾಳ, ನೆಲ್ಯಾಡಿ, ಸವಣೂರು ಗ್ರಾ.ಪಂ.ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಕೆಲಸ ನಡೆಯುತ್ತಿದೆ. ಒಳಮೊಗ್ರು, ಪಾಣಾಜೆ, ಕೊೖಲ, ನೆಕ್ಕಿಲಾಡಿಗಳಲ್ಲಿ 20 ಲಕ್ಷ ರೂ. ಅಂಗೀಕಾರಕ್ಕೆ ಕಳುಹಿಸಲಾಗಿದೆ. ಉಳಿದ 13 ಗ್ರಾ.ಪಂ. ಗಳಾದ ಬಜತ್ತೂರು, ಅರಿಯಡ್ಕ, ಆರ್ಯಾಪು, ಬಡಗನ್ನೂರು, ಮುಂಡೂರು, ಕೆಯ್ಯೂರು, ಕೋಡಿಂಬಾಡಿ, ನರಿಮೊಗರು, ನೆಟ್ಟಣಿಗೆ ಮುಟ್ನೂರು, ನಿಡ್ಪಳ್ಳಿ, ಪೆರಾಬೆ ಮತ್ತು ಕಬಕ ಗ್ರಾ.ಪಂ.ಗಳ ಹೆಸರನ್ನು ಘಟಕ ನಿರ್ಮಾಣಕ್ಕೆ ಶಿಫಾರಸು ಮಾಡಲಾಗಿದೆ.

ಸ್ವಚ್ಛತೆಯ ದೃಷ್ಟಿಯಿಂದ ಜಾರಿ
ಸ್ವಚ್ಛತೆಯ ದೃಷ್ಟಿಯಿಂದ ಜಾರಿಗೊಂಡಿರುವ ಈ ಯೋಜನೆಯಲ್ಲಿ ಪೇಟೆಗಳು ಇರುವ ಮತ್ತು ತ್ಯಾಜ್ಯಗಳು ಹೆಚ್ಚು ಉತ್ಪಾದನೆಯಾಗುವ ಕಡೆಗಳ ಗ್ರಾ.ಪಂ.ಗಳನ್ನು ಪರಿಗಣಿಸಲಾಗುತ್ತಿದೆ. ಕೆಲ ಗ್ರಾ.ಪಂ.ಗಳಲ್ಲಿ ಪೂರ್ಣಗೊಂಡಿದ್ದರೆ, ಇನ್ನು ಕೆಲವು ಗ್ರಾ.ಪಂ.ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಮತ್ತೆ ಕೆಲವು ಕಡೆ ಜಾಗ ಗುರುತಿಸಲಾಗಿದೆ.
-ನವೀನ್‌ ಭಂಡಾರಿ,
ಸಹಾಯಕ ನಿರ್ದೇಶಕರು, ತಾ.ಪಂ. ಪುತ್ತೂರು

ಎಲ್ಲ ಕಡೆಯೂ ಅಸಾಧ್ಯ
ಪುತ್ತೂರು ತಾಲೂಕಿನ ಎಲ್ಲ ಗ್ರಾ.ಪಂ.ಗಳಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವುದು ಕಷ್ಟ. ಆದ್ದರಿಂದ ಸಣ್ಣ ಗ್ರಾ.ಪಂ.ಗಳ ತ್ಯಾಜ್ಯವನ್ನು ಸಮೀಪದ ಗ್ರಾ.ಪಂ.ನ ಘಟಕಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವ ಚಿಂತನೆ ಇದೆ. ಪುತ್ತೂರು ತಾಲೂಕಿನ 41 ಗ್ರಾ.ಪಂ.ಗಳ ಪೈಕಿ 30ಕ್ಕಾದರೂ ಘಟಕ ನಿರ್ಮಾಣ ಮಾಡಬೇಕು.
-ಜಗದೀಶ್‌,
ಇಒ, ಪುತ್ತೂರು ತಾ.ಪಂ.

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next