Advertisement
ನಗರ : ಹಿಂದೊಮ್ಮೆ ಸಿಂಗಾಪುರ ಗಲೀಜಾಗಿತ್ತು. ಶೌಚಾಲಯ ಇರಲಿಲ್ಲ, ಬಾಗಿಲುಗಳೇ ಇಲ್ಲದ ಮನೆಗಳಿದ್ದವು. ಅದು ಕಷ್ಟದ ದಿನಗಳು ಆಗಿದ್ದವು. ಆದರೆ ಈಗ ಹಾಗಿಲ್ಲ. ಪ್ರತಿ ಗಲ್ಲಿಯನ್ನೂ ಶೃಂಗರಿಸಿ ಇಟ್ಟಂತೆ ಇದೆ. ಪುತ್ತೂರು ಹೀಗೇ ಆಗಬೇಕು. ಇದಕ್ಕೆ ಹೆಚ್ಚು ಪೌರಕಾರ್ಮಿಕರು, ಜನರ ಸಹಕಾರ ಅಗತ್ಯ.– ಹೀಗೆಂದು ಹೇಳಿದವರು ಸಿಂಗಾಪುರ ಪ್ರವಾಸ ಮುಗಿಸಿ ಬಂದು, ಪುತ್ತೂರಿನಲ್ಲಿ ಪೌರಕಾರ್ಮಿಕ ಕೆಲಸ ಮುಂದುವರಿಸುತ್ತಿರುವ ಗುಲಾಬಿ ಹಾಗೂ ಯಶೋದಾ. ಅವರ ಅನುಭವಗಳನ್ನು ಅವರದೇ ಮಾತುಗಳಲ್ಲಿ ಕೇಳ್ಳೋಣ:
ವ್ಯವಸ್ಥಿತವಾಗಿ ಯಂತ್ರಗಳ ಸಹಾಯದಿಂದ ಕೆಲಸ ಮಾಡುತ್ತಾರೆ. ಇದಕ್ಕೆ ಪೂರಕವಾಗಿ ಅಲ್ಲಿನ ಆಡಳಿತ, ಶುಚಿತ್ವದ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ರಸ್ತೆಯಲ್ಲಿ ಉಗುಳಿದರೆ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ಸಿಸಿ ಕೆಮರಾಗಳ ಮೂಲಕ ಪರಿಶೀಲಿಸಿ, ದಂಡ ವಿಧಿಸುತ್ತದೆ. ಪುತ್ತೂರು ಹಾಗೇ
ಆಗಬೇಕಾದರೆ, ಇಂತಹ ವ್ಯವಸ್ಥೆಯನ್ನು ಇಲ್ಲಿ ತರಲು ಸಾಧ್ಯವೇ? ತ್ಯಾಜ್ಯ ಸಂಗ್ರಹದ ವಾಹನದಲ್ಲಿ 4 ಜನ ಇರುತ್ತಾರೆ. ಪ್ರತಿದಿನ ಮನೆ, ಅಂಗಡಿಗಳಿಗೆ ಬರುವಾಗ ನಾಲ್ಕು ವಿಧದಲ್ಲಿ ವಿಂಗಡಿಸಿದ ತ್ಯಾಜ್ಯವನ್ನು ನಿವಾಸಿಗಳಿಂದ ಸಂಗ್ರಹಿಸುತ್ತಾರೆ. ಪ್ರತಿ ನಾಗರಿಕನೂ ಒಂದು ಬಾಕ್ಸ್‌ನಲ್ಲಿ ಕಸವನ್ನು ವಿಂಗಡಿಸಿಯೇ ನೀಡಬೇಕು. ಅದನ್ನು ಲಾರಿಗೆ ಹಾಕಿ, ಸಾಗಿಸುತ್ತಾರೆ. ಕೈಯಲ್ಲಿ ಮುಟ್ಟುವುದೇ ಇಲ್ಲ. ಸಿಗರೇಟು ತುಂಡು, ಕಸವನ್ನು ಪ್ರತಿ ರಸ್ತೆ ಬದಿಯಲ್ಲಿ ಇಟ್ಟ ಡಸ್ಟ್ ಬಿನ್‌ನಲ್ಲೇ ಹಾಕಬೇಕು. ಈ ಡಸ್ಟ್ ಬಿನ್‌ಗಳನ್ನು ಎಷ್ಟು ಹೊತ್ತಿಗೆ ಶುಚಿಗೊಳಿಸುತ್ತಾರೆ ಎಂಬ ಅನುಮಾನ ನಮಗಿತ್ತು. ರಾತ್ರಿ ನಾವು ವಾಸ್ತವ್ಯವಿದ್ದ ಕಟ್ಟಡದಿಂದಲೇ ನೋಡಿದಾಗ ರಾತ್ರಿ 1 ಗಂಟೆ ವೇಳೆಗೆ ಲಾರಿಯಲ್ಲಿ ಬಂದು ಸಾಗಿಸುವುದು ಗಮನಕ್ಕೆ ಬಂದಿತು. ಹಗಲು ಇವರಿಗೆ ವಿಶ್ರಾಂತಿ.
Related Articles
ತ್ಯಾಜ್ಯ ವಿಂಗಡಿಸಿ, ಮರುಬಳಕೆಗೆ ಯೋಗ್ಯವಾಗುವಂತೆ ಮಾಡುತ್ತಾರೆ. ಇದರ ಕೆಲವು ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುತ್ತಾರಂತೆ. ಸಂಗ್ರಹಿಸಿ ತಂದ ತ್ಯಾಜ್ಯವನ್ನು ಒಂದು ಯಂತ್ರಕ್ಕೆ ಲೋಡ್ ಮಾಡುತ್ತಾರೆ. ಇನ್ನೊಂದು ಕಡೆಯಿಂದ ಪ್ಲಾಸ್ಟಿಕ್, ಚಪ್ಪಲಿ, ಗ್ಲಾಸ್, ರಬ್ಬರ್ ಪ್ರತ್ಯೇಕವಾಗಿ ಹೊರಬರುತ್ತದೆ. ಪ್ರತ್ಯೇಕವಾಗಿ ವಸ್ತುಗಳು ಸಿಕ್ಕ ಮೇಲೆ ಮರುಬಳಕೆ ಯೋಗ್ಯ ವಸ್ತುಗಳನ್ನಾಗಿ ಮಾಡುವುದು ಕಷ್ಟದ ಮಾತಲ್ಲ. ಇಂತಹ 3 ಕಂಪೆನಿಗಳಿಗೆ ನಮ್ಮನ್ನು ಕರೆದೊಯ್ದಿದ್ದಾರೆ. ಅದರ ಒಳಗೆ ಹೋಗುವಾಗ ತಲೆಗವಸು, ಸಾಕ್ಸ್, ಶೂ, ಗ್ಲೌಸ್ ಹಾಕಬೇಕು. ಚಪ್ಪಲಿ ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ನಮ್ಮ ಜತೆಗಿದ್ದ ಓರ್ವ ಹೆಂಗಸನ್ನು ಒಳಗೇ ಬಿಡಲಿಲ್ಲ.
Advertisement
ಕಸದ ತೊಟ್ಟಿ ದುರ್ನಾತ ಬೀರುವುದೇಕೆ?ಸಿಂಗಾಪುರದ ಪ್ರತಿ ಬೀದಿಯಲ್ಲೂ ಡಸ್ಟ್‌ಬಿನ್‌ಗಳಿವೆ. ಕಸ ಹಾಕಿದ ಕೂಡಲೇ ಇದರ ಬಾಗಿಲು ಮುಚ್ಚಿಕೊಳ್ಳುವಂತಿದೆ. ರಾತ್ರಿ ವೇಳೆ ತ್ಯಾಜ್ಯ ಶಿಫ್ಟ್ ಮಾಡುತ್ತಿದ್ದಂತೆ, ಡಬ್ಬಿಯನ್ನು ಫಿನಾಯಿಲ್ ಹಾಕಿ ತೊಳೆದಿಡುತ್ತಾರೆ. ಇದು ಪ್ರತಿ ರಾತ್ರಿ ನಡೆಸುವ ಕೆಲಸ. ಹೀಗಾಗಿ, ದುರ್ನಾತ ಬೀರುವುದಿಲ್ಲ. ನಮ್ಮಲ್ಲಿ ಇಂತಹ ವ್ಯವಸ್ಥೆ ಇಲ್ಲ. ಡಸ್ಟ್‌ಬಿನ್ ತೊಳೆಯುವುದೇ ಇಲ್ಲ. ದುರ್ನಾತ ಹರಡದೆ ಇನ್ನೇನಾಗುತ್ತದೆ? ಎಂದು ಗುಲಾಬಿ ಹಾಗೂ ಯಶೋದಾ ಪ್ರಶ್ನಿಸಿದರು. ಜನರಲ್ಲಿ ಒಗ್ಗಟ್ಟು ಬೇಕು
ನಮ್ಮೂರಿನ ವ್ಯವಸ್ಥೆ ಬಗ್ಗೆ ಸಿಂಗಾಪುರದಲ್ಲಿ ಕೇಳಿದರು. ಇಲ್ಲಿರುವ ವ್ಯವಸ್ಥೆಯನ್ನೇ ಹೇಳಿದ್ದೇವೆ. ಪುತ್ತೂರು ಸಿಂಗಾಪುರದಂತೆ ಒಪ್ಪ ಓರಣವಾಗಿ ಇರಬೇಕಾದರೆ ಮೊದಲು ಜನರಲ್ಲಿ ಒಗ್ಗಟ್ಟು ಬೇಕು.
-ಗುಲಾಬಿ, ಸಾಲ್ಮರ ನಿವಾಸಿ ಶುಚಿತ್ವದ ಆಸೆ
ತ್ಯಾಜ್ಯ ವಿಂಗಡಣೆ ಬಗ್ಗೆ ಮಾತ್ರ ತಿಳಿಸಿದ್ದಾರೆ. ವಿಂಗಡಿಸಿದ ತ್ಯಾಜ್ಯದಿಂದ ಏನು ಮಾಡಬಹುದು ಎಂದು ತಿಳಿಸಿಲ್ಲ. ಸಿಂಗಾಪುರಕ್ಕೆ ಹೋಗಿ ಬಂದ ಬಳಿಕ, ಪುತ್ತೂರು ಶುಚಿತ್ವದಿಂದ ಇರಬೇಕು ಎಂಬ ಆಸೆ ಆಗುತ್ತದೆ. ಇನ್ನಷ್ಟು ಪೌರಕಾರ್ಮಿಕರನ್ನು ನೇಮಿಸಿ, ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಪುತ್ತೂರಿನಲ್ಲಿ ಶುಚಿತ್ವ ತರಬಹುದು. ಆಡಳಿತ ಯಂತ್ರವೂ ಅಶುಚಿತ್ವ ಕಂಡಲ್ಲಿ ದಂಡ ಹಾಕುವ ಕ್ರಮಕ್ಕೆ ಮುಂದಾಗಬೇಕು.
– ಯಶೋದಾ, ಹಾರಾಡಿ ನಿವಾಸಿ ಗಣೇಶ್ ಎನ್. ಕಲ್ಲರ್ಪೆ