Advertisement

‘ಸೇವ್‌ ಅರ್ಥ್’ಸಂದೇಶ ಸಾರಿದ ರಾಜ್ಯೋತ್ಸವ ಮ್ಯಾರಥಾನ್‌

03:03 PM Nov 02, 2018 | |

ದರ್ಬೆ: ಅರವತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಸಂತ ಫಿಲೋಮಿನಾ ಪ.ಪೂ. ಕಾಲೇಜಿನ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಮ್ಯಾರಥಾನ್‌ ಓಟವನ್ನು ಆಯೋಜಿಸುವ ಮೂಲಕ ‘ಸೇವ್‌ ಅರ್ಥ್’ ಸಂದೇಶದೊಂದಿಗೆ ವಿಶೇಷವಾಗಿ ಆಚರಿಸಲಾಯಿತು.

Advertisement

ಮ್ಯಾರಥಾನ್‌ ಅನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಸುನೀಲ್‌ ಕುಮಾರ್‌ ಶೆಟ್ಟಿ ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಕಿಶೋರ್‌ ಕುಮಾರ್‌ ಕೆ.ಸಿ. ಮಾತನಾಡಿ, ಮ್ಯಾರಥಾನ್‌ ಆರೋಗ್ಯಕ್ಕೆ ಉತ್ತಮವಾಗಿದೆ. ಯುವ ಸಮುದಾಯ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದರು. ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ವೇಟ್‌ ಲಿಫ್ಟರ್‌ ತಾರಾನಾಥ್‌ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೋ, ಉಪನ್ಯಾಸಕರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ದೈ.ಶಿ. ಶಿಕ್ಷಕ ಲೂಯಿಸ್‌ ಮಸ್ಕರೇನಸ್‌ ಮಾತನಾಡಿ, ಬದುಕಿನಲ್ಲಿ ನಮ್ಮನ್ನು ನಾವು ಹೊರ ಪ್ರಪಂಚಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು. ಇಲ್ಲದಿದ್ದರೆ ಬದುಕಿನಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯವಿಲ್ಲ ಎಂದರು.

ಶಿಸ್ತಿನ ಜೀವನಕ್ಕಾಗಿ 
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ| ಆಲ್ಫ್ರೆಡ್  ಜಿ. ಪಿಂಟೊ ಮಾತನಾಡಿ, ಶಿಸ್ತನ್ನು ಕ್ರೀಡಾಂಗಣದಲ್ಲಿ ಕಲಿಯುತ್ತೇವೆ. ಶಿಸ್ತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸಮಾಜ, ಕುಟುಂಬದಲ್ಲಿ ಉತ್ತಮವಾಗಿ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು. ಕನ್ನಡ ಭಾಷೆಯ ಮೂಲಕ ಉತ್ತಮ ಸಂಬಂಧವನ್ನು ಬೆಳೆಸಬೇಕು ಎಂದರು.

ಗೌರವಾರ್ಪಣೆ
ಸಂತ ಫಿಲೋಮಿನಾ ಪ್ರೌಢಶಾಲೆಯ ನಿವೃತ್ತ ದೈ.ಶಿ. ಶಿಕ್ಷಕ ಲೂಯಿಸ್‌ ಮಸ್ಕರೇನಸ್‌ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಾದ ಅಶೋಕ್‌ ಕೆ.ಎಸ್‌. ಹಾಗೂ ರವಿರಾಜ್‌ ಕೆ. ಅವರನ್ನು ಸಮ್ಮಾನಿಸಲಾಯಿತು. ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ವಂ| ರಿತೇಶ್‌ ರೊಡ್ರಿಗಸ್‌, ವಂ| ಸುನೀಲ್‌ ಜಾರ್ಜ್‌ ಡಿ’ಸೋಜಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯರಾಜ್‌ ಭಂಡಾರಿ, ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್‌ ರೈ, ದೈ.ಶಿ. ಶಿಕ್ಷಕರಾದ ಪ್ರಕಾಶ್‌ ಡಿ’ಸೋಜಾ, ರಾಜೇಶ್‌ ಮೂಲ್ಯ ಉಪಸ್ಥಿತರಿದ್ದರು. ಪ್ರಾಂಶುಪಾಲ ವಂ| ವಿಜಯ್‌ ಲೋಬೋ ಸ್ವಾಗತಿಸಿ, ಸಂಯೋಜಕಿ ದಿವ್ಯಾ ಕೆ. ವಂದಿಸಿದರು. ಉಪನ್ಯಾಸಕಿ ಉಷಾ ಯಶವಂತ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

ವಿಜೇತರ ವಿವರ
ದಿ ಡೈಮಂಡ್‌ ಟ್ರೈಲ್‌- ದಿ ಗ್ರೀನ್‌ ರೇಸ್‌ ಸ್ಪರ್ಧೆಯಲ್ಲಿ 43 ಪುರುಷರು, 12 ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರ ವಿಭಾಗ: ಆಳ್ವಾಸ್‌ ನ್ಪೋರ್ಟ್ಸ್ ಕ್ಲಬ್‌ನ ಅನಿಲ ಕುಮಾರ್‌ ಪ್ರಥಮ ಬಹುಮಾನ (10,000 ರೂ.), ವಿಶ್ವಭಾರತಿ ಪಬ್ಲಿಕ್‌ ಸ್ಕೂಲ್‌ನ ಚಂದನ್‌ ಕುಮಾರ್‌ ದ್ವಿತೀಯ, ಪ್ರಶಾಂತ್‌ ಎಂ. ತೃತೀಯ ಸ್ಥಾನ ಪಡೆದುಕೊಂಡರು. ಸಾಕಪ್ಪ ಎಚ್‌.ಎನ್‌. ಮೂಡಬಿದಿರೆ, ಉಡುಪಿಯ ಟ್ರ್ಯಾಕ್‌ ಆಂಡ್‌ ಫೀಲ್ಡ್‌ನ ಸಂಗಮೇಶ್‌ ಎಚ್‌.ಎಚ್‌. ಮಂಗಳೂರಿನ ಕೀರ್ತೇಶ್, ಸುಬ್ರಹ್ಮಣ್ಯದ ಲಕ್ಷ್ಮೀಶ, ಮಂಗಳೂರಿನ ಎಸ್‌.ಐ.ಟಿ. ಚಿನ್ನಬಳ್ಳಿಯ ಸುನೀಲ್‌ ಪಿ.ಕೆ., ದೋಳ್ಪಾಡಿಯ ಧನರಾಜ್‌, ಬೆಟ್ಟಂಪಾಡಿಯ ಪುರುಷೋತ್ತಮ ಪ್ರೋತ್ಸಾಹಕ ಬಹುಮಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಸ್ಪೋರ್ಟ್ಸ್ ಕ್ಲಬ್‌ನ ಚೈತ್ರಾ ದೇವಾಡಿಗ ಪ್ರಥಮ ಬಹುಮಾನ (5,000 ರೂ.), ಶಾಲಿನಿ ಕೆ.ಎಸ್‌. ದ್ವಿತೀಯ, ಪ್ರಿಯಾಂಕಾ ಎಲ್‌.ಡಿ. ತೃತೀಯ ಬಹುಮಾನ ಪಡೆದರು. ಪ್ರೋತ್ಸಾಹಕ ಬಹುಮಾನವನ್ನು ಆಳ್ವಾಸ್‌ನ ಪ್ರಿಯಾಂಕಾ ಎಚ್‌.ಬಿ., ರಾಮ್‌ ಕುಂಜ ಪದವಿ ಕಾಲೇಜಿನ ರಮ್ಯಾ ಕೆ.ಕೆ., ವಿಶ್ವವಿದ್ಯಾನಿಲಯ ಕ್ಯಾಂಪಸ್‌ನ ಶ್ರೇಯಾ ಎ. ಪಡೆದುಕೊಂಡರು.

ಅವಕಾಶ ಬಳಸಿಕೊಂಡು ಸಾಧನೆ ಮಾಡಿ
ಹಿರಿಯ ವಿದ್ಯಾರ್ಥಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ರವಿರಾಜ್‌ ಕೆ. ಮಾತನಾಡಿ, ಕ್ರೀಡೆ ನಮಗೆ ಕೀರ್ತಿ, ಸ್ಫೂರ್ತಿ ಹಾಗೂ ಶಕ್ತಿಯನ್ನು ನೀಡು ತ್ತದೆ. ಇತ್ತೀಚಿನ ಕಾಲಘಟ್ಟದಲ್ಲಿ ಹೆಚ್ಚಿನ ಅವಕಾಶಗಳು ಸೌಲಭ್ಯಗಳು ಇದ್ದರೂ, ಗ್ರಾಮೀಣ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದು ವಿರಳವಾಗಿದೆ. ಅವಕಾಶ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡು ಸಾಧನೆ ಮಾಡುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next