Advertisement

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

01:05 PM Nov 05, 2024 | Team Udayavani |

ಪುತ್ತೂರು: ಮೆಸ್ಕಾಂ ವಿಭಾಗದಲ್ಲಿ ಪವರ್‌ಮನ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆ ಯಾಗಲು ಇರುವ ಮೊದಲ ಅರ್ಹತೆಯೇ ವಿದ್ಯುತ್‌ ಕಂಬ ಏರುವುದು. ಆದರೆ ಸಾಮಾನ್ಯವಾಗಿ ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಸ್ಥಳೀಯ ಯುವಕರು ಈ ಹಂತದಲ್ಲೇ ವಿಫ‌ಲರಾಗುತ್ತಾರೆ. ಅದೇ ಉತ್ತರ ಕರ್ನಾಟಕದ ಬಹುತೇಕ ಯುವಕರು ಇದರಲ್ಲಿ ಗೆದ್ದು ಮುಂದಿನ ಹಂತ ಪ್ರವೇಶಿಸು ತ್ತಾರೆ. ಉಳಿದ ಯುವಕರು ಆಯ್ಕೆ ಸುತ್ತಿ ನಿಂದಲೇ ನಿರ್ಗಮಿಸಬೇಕಾಗುತ್ತದೆ.

Advertisement

ಹೀಗಾಗಿ, ತಮ್ಮ ಭಾಗದ ಹುದ್ದೆ ಆಕಾಂಕ್ಷಿ ಗಳಿಗೆ ವಿದ್ಯುತ್‌ ಕಂಬ ಏರುವ ತರಬೇತಿ ನೀಡಿದರೆ ಅವರಿಗೆ ಅನುಕೂಲವಾದೀತು ಎಂಬ ನೆಲೆಯಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದ ರೈ ಎಜುಕೇಶನಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಮೆಸ್ಕಾಂ ಪುತ್ತೂರು ಜತೆಗೂಡಿ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಿದ್ದು ಅದುವೇ ವಿದ್ಯುತ್‌ ಕಂಬ ಏರುವ ಉಚಿತ ತರಬೇತಿ.
212 ಮಂದಿ ಭಾಗಿ.

ಉಚಿತ ತರಬೇತಿ ಶಿಬಿರ ನ.4 ರಿಂದ 6ರ ತನಕ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಒಟ್ಟು ನೋಂದಾಯಿಸಿದ 350 ಅರ್ಜಿದಾರರ ಪೈಕಿ ಮೊದಲ ದಿನ 212 ಮಂದಿ ತರಬೇತಿಯಲ್ಲಿ ಭಾಗಿಯಾದರು. ಇಲ್ಲಿ ಮೆಸ್ಕಾಂ ಸಿಬಂದಿಗಳು ಕಂಬ ಏರುವ ಬಗ್ಗೆ ತರಬೇತಿ ನೀಡುತ್ತಾರೆ. ಬೆಳಗ್ಗೆ 10 ರಿಂದ ಅಪರಾಹ್ನ 3.30 ರ ತನಕ ತರಬೇತಿಯ ಅವಧಿ. ಇಲ್ಲಿ ತರಬೇತಿ ಪಡೆಯುವವನ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಕಂಬದ ಸುತ್ತಲೂ ಮ್ಯಾಟ್‌ ಆಧಾರಿತ ಬೆಡ್‌ ಅನ್ನು ಅಳವಡಿಸಲಾಗಿದ್ದು ಒಂದು ವೇಳೆ ಕಂಬ ಏರುವ ಸಂದರ್ಭದಲ್ಲಿ ಆಯ ತಪ್ಪಿ ಕೆಳಗೆ ಬಿದ್ದರೂ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲಾಗಿದೆ.

ಆಯ್ಕೆ ಹೇಗೆ?
ಪವರ್‌ಮನ್‌ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವುದು ಈ ಹುದ್ದೆಯ ನೇಮಕಕ್ಕೆ ಕಡ್ಡಾಯವಾದ ಅಂಶ. ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳನ್ನು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪಡೆದಿರುವ ಶೇಕಡಾವಾರು ಅಂಕಗಳ ಜೇಷ್ಠತೆ ಆಧಾರದಲ್ಲಿ ಕರ್ನಾಟಕ ಸರಕಾರದ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುತ್ತದೆ.

Advertisement

ಏನೇನು ತರಬೇತಿ?
ವಿದ್ಯುತ್‌ ಏರುವುದು ಮೊದಲ ಹಂತ. 8 ಮೀಟರ್‌ ಎತ್ತರದ ಕಂಬ ಏರುವುದರಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಅನಂತರ 100 ಮೀಟರ್‌ ಓಟವನ್ನು ನಿಗದಿತ ಸೆಕೆಂಡಿನಲ್ಲಿ ಕ್ರಮಿಸಬೇಕು. ಸ್ಕಿಪ್ಪಿಂಗ್‌, ಶಾಟ್‌ಪೂಟ್‌ ಎಸೆತ, 800 ಮೀ. ಓಟ ಹೀಗೆ ಅರ್ಹತಾ ಸುತ್ತನ್ನು ದಾಟಬೇಕು. ಇದಕ್ಕೆ ಪೂರಕವಾಗಿ ಕೊಂಬೆಟ್ಟು ಮೈದಾನದಲ್ಲಿ ಕಂಬ ಏರುವ ತರಬೇತಿಯ ಜತೆಗೆ ಶಾಟ್‌ಪುಟ್‌, ಸ್ಕಿಪ್ಪಿಂಗ್‌, 100 ಮೀ.ಓಟ ಹಾಗೂ 800 ಮೀ.ಓಟದ ತರಬೇತಿ ಅನ್ನು ನೀಡಲಾಗುತ್ತಿದೆ. ಇಲ್ಲಿ ಮೆಸ್ಕಾಂ ನಿಗದಿಪಡಿಸಿದ ಆಯ್ಕೆಯ ಮಾನದಂಡದೊಳಗೆ ಅರ್ಜಿದಾರ ತನ್ನ ಸಾಮರ್ಥ್ಯ ಋಜುಪಡಿಸುವ ನಿಟ್ಟಿನಲ್ಲಿ ಆದ್ಯತೆ ನೀಡಲಾಗಿದೆ.

ಸ್ಥಳೀಯರಿಗೆ ಉದ್ಯೋಗ ನೀಡಲು ಕ್ರಮ
ಈ ಭಾಗದ ಯುವಕರಿಗೆ ಕೆಲಸ ಕೊಡಿಸಬೇಕು ಎನ್ನುವ ನಿಟ್ಟಿನಲ್ಲಿ ಉಚಿತ ತರಬೇತಿಗೆ ಮೆಸ್ಕಾಂನೊಂದಿಗೆ ಟ್ರಸ್ಟ್‌ ಸಹಕಾರ ನೀಡಿದೆ. ಈಗಾಗಲೇ ಮೆಸ್ಕಾಂನಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಪುತ್ತೂರಿನಿಂದಲೂ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಈ ತರಬೇತಿ ಅನುಕೂಲ ನೀಡಲಿದೆ.
-ಅಶೋಕ್‌ ಕುಮಾರ್‌ ರೈ ಶಾಸಕರು, ಪುತ್ತೂರು

ಆಯ್ಕೆ ಸುತ್ತಿನಲ್ಲಿ ತೇರ್ಗಡೆಗೆ ಸಹಕಾರಿ
ಶಾಸಕರ ಮನವಿ ಮೇರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಸರಿಯಾಗಿ ತರಬೇತಿ ಪಡೆದುಕೊಂಡು ಆಯ್ಕೆ ಸುತ್ತಿನಲ್ಲಿ ತೇರ್ಗಡೆ ಹೊಂದಲು ಇದು ಸಹಕಾರಿಯಾಗಲಿದೆ.
– ಪದ್ಮಾವತಿ, ವ್ಯವಸ್ಥಾಪಕ ನಿರ್ದೇಶಕಿ, ಮೆಸ್ಕಾಂ ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next