ನಗರ: ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ನಗರ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆ ಸಹಯೋಗದಲ್ಲಿ ಶನಿವಾರ ನಡೆಯಿತು.
ಸುರಕ್ಷಿತ ಪ್ರಯಾಣದ ದೃಷ್ಟಿಯಿಂದ ಪೊಲೀಸ್ ಹಿರಿಯ ಅಧಿಕಾರಿಗಳ ಆದೇಶದಂತೆ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನ ಸರಣಿಯ ಭಾಗವಾಗಿ ಈ ಸಭೆ ನಡೆಸಲಾಯಿತು.
ಕಟ್ಟಡ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿದ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಶಿಕುಮಾರ್, ಸರಕು ಸಾಗಾಟ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಅಥವಾ ಇತರ ಪ್ರಯಾಣಿಕರನ್ನು ಸಾಗಾಟ ಮಾಡುವ ಮೂಲಕ ಯಾವುದೇ ಅಪಾಯದ ಸನ್ನಿವೇಶಕ್ಕೆ ಕಾರಣವಾಗಬಾರದು. ಕಟ್ಟಡ ನಿರ್ಮಾಣ ಗುತ್ತಿಗೆದಾರರು ತಮ್ಮ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಲಾರಿಗಳ ಅಥವಾ ಟಿಪ್ಪರ್‌ಗಳಲ್ಲಿ ಸಾಗಾಟ ಮಾಡಬಾರದು. ಲಾರಿಯ ಕ್ಯಾಬಿನ್‌ನಲ್ಲಿ ಕುಳಿತುಕೊಂಡು ಪ್ರಯಾಣಿಸಲು ಅನುಮತಿ ಇರುವ ಸಂಖ್ಯೆಯಷ್ಟೇ ಜನರು ಪ್ರಯಾಣ ಮಾಡಬೇಕು ಎಂದು ಸೂಚನೆ ನೀಡಿದರು.
ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಾಟ ನಡೆಸುತ್ತಿರುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸರಕು ಸಾಗಾಟ ವಾಹನಗಳಲ್ಲಿ ಕಾರ್ಮಿಕರನ್ನು ಅಥವಾ ಜನರನ್ನು ಸಾಗಾಟ ಮಾಡುವುದು ಪರವಾನಿಗೆ ನಿಯಮಕ್ಕೆ ವಿರುದ್ಧವಾಗಿದೆ. ಕಾರ್ಮಿಕರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಟ ಮಾಡಲು ಇತರ ವಾಹನಗಳನ್ನು ಬಳಕೆ ಮಾಡಬೇಕು. ಸರಕು ಸಾಗಾಟ ವಾಹನಗಳಲ್ಲಿ ಜನರನ್ನು ಸಾಗಾಟ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದ ಪ್ರಮುಖ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇಲಾಖೆಯೊಂದಿಗೆ ಸಹಕರಿಸುವ ಭರವಸೆ ನೀಡಿದರು. ಪುತ್ತೂರು ಸಂಚಾರ ಪೊಲೀಸ್ ಠಾಣಾ ಸಬ್ ಇನ್‌ಸ್ಪೆಕ್ಟರ್ ಮಹಾಬಲ ಶೆಟ್ಟಿ, ಮಹಿಳಾ ಠಾಣಾ ಸಬ್ ಇನ್‌ಸ್ಪೆಕ್ಟರ್ ನಂದಿನಿ ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆಗಳ ಸಭೆ
ಪುತ್ತೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ಖಾಸಗಿ ಶಾಲಾ ಬಸ್‌ಗಳು ಸುಸ್ಥಿತಿಯಲ್ಲಿರಬೇಕು. ಮಿತಿ ಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಬಾರದು. ಈ ಕುರಿತು ಖಾಸಗಿ ವಾಹನಗಳ ಮಾಲಕರಿಗೆ ಸೂಚನೆ ನೀಡುವಂತೆ ಇನ್‌ಸ್ಪೆಕ್ಟರ್ ಶಶಿಕುಮಾರ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ತಿಳಿಸಿದರು.