Advertisement

ತಾತ್ಸಾರದ ಹೇಳಿಕೆಯೇ ಪ್ಲಾಸ್ಟಿಕ್‌ ಸಂಗ್ರಹಕ್ಕೆ  ಹೇತು

11:26 AM Oct 06, 2018 | Team Udayavani |

ಸವಣೂರು: ಮೂರು ವರ್ಷಗಳ ಹಿಂದೆ ಶಾಲೆಯ ಮಕ್ಕಳು ಮಾಡುತ್ತಿದ್ದ ಪರಿಸರ ಜಾಗೃತಿ ಜಾಥಾದ ಕುರಿತು ವ್ಯಕ್ತಿ ಯೊಬ್ಬರು ನೀಡಿದ ತಾತ್ಸಾರದ ಹೇಳಿಕೆ ಯನ್ನೇ ಸವಾಲಾಗಿ ಸ್ವೀಕರಿಸಿದ ಜಿನಸು ವ್ಯಾಪಾರಿಯೊಬ್ಬರು ಕೊಳ್ತಿಗೆ ಗ್ರಾಮವನ್ನೇ ಪ್ಲಾಸ್ಟಿಕ್‌ ಮುಕ್ತ ಮಾಡಲು ಪಣ ತೊಟ್ಟಿದ್ದು, 3 ವರ್ಷಗಳಿಂದ ಪ್ಲಾಸ್ಟಿಕ್‌ನಿಂದಾಗುವ ಅಪಾಯಗಳ ಕುರಿತು ಗ್ರಾಮಸ್ಥರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

Advertisement

ಪೆರ್ಲಂಪಾಡಿಯಲ್ಲಿ ಶಾಲೆ ಮಕ್ಕಳು ಮೆರವಣಿಗೆ ಮಾಡಿ, ಪ್ಲಾಸ್ಟಿಕ್‌ ನಿರ್ನಾಮ ಮಾಡಿ, ಪರಿಸರ ಉಳಿಸಿ ಎಂಬ ಘೋಷಣೆ ಕೂಗುತ್ತ ಸಾಗುತ್ತಿದ್ದರು. ಮಕ್ಕಳ ಜಾಥಾ ಜಿನಸು ವ್ಯಾಪಾರಿ ಹರಿಪ್ರಸಾದ್‌ ಅವರ ಅಂಗಡಿಯ ಮುಂದೆ ಸಾಗುತ್ತಿದ್ದಾಗ ಅಲ್ಲೇ ಇದ್ದ ವ್ಯಕ್ತಿಯೊಬ್ಬರು. ‘ಇದೆಲ್ಲ ಏಕೆ? ಅದೆಲ್ಲ ಆಗುಹೋಗುವ ಕೆಲಸವೇ? ಸುಮ್ಮನೆ ಪರಿಸರದ ಬಗ್ಗೆ ಕಾಳಜಿ ಎಂದು ಹೇಳುತ್ತಾರೆ, ಪರಿಸರವನ್ನು ಉಳಿಸುವುದಕ್ಕೆ ಯಾರೂ ಮುಂದೆ ಬರುವುದೇ ಇಲ್ಲ’ ಎಂದು ಹೇಳಿದರು. ಈ ಮಾತಿನಿಂದ ಬೇಸರಗೊಂಡ ಹರಿಪ್ರಸಾದ್‌, ಪ್ಲಾಸ್ಟಿಕ್‌ ವಿರುದ್ಧ ಆ ಕ್ಷಣವೇ ಸಮರ ಸಾರಿದರು. ಪ್ಲಾಸ್ಟಿಕ್‌ ಸಂಗ್ರಹಿಸುವ ಅವರು, ಗ್ರಾಹಕರಿಗೂ ಪ್ಲಾಸ್ಟಿಕ್‌ ತ್ಯಜಿಸುವಂತೆ ಮನವಿ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ ವಸ್ತುಗಳಿದ್ದರೆ ಎಲ್ಲೆಂದರಲ್ಲಿ ಎಸೆಯಬೇಡಿ. ನನ್ನ ಅಂಗಡಿಗೆ ತನ್ನಿ. ಅದರ ವಿಲೇವಾರಿಗೆ ಬೇಕಾದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಕ್ರಮೇಣ ಪೆರ್ಲಂಪಾಡಿಯ ಜನರು ಈ ಅಭಿಯಾನಕ್ಕೆ ಬೆಂಬಲ ನೀಡುತ್ತಿದ್ದಾರೆ. ಈಗ ಹರಿಪ್ರಸಾದ್‌ ಅವರು ಪ್ಲಾಸ್ಟಿಕ್‌ ಮುಕ್ತ ಕೊಳ್ತಿಗೆ ಗ್ರಾಮದ ಸೇನಾನಿಯಾಗಿ ರೂಪುಗೊಂಡಿದ್ದಾರೆ.

ಕೊಳ್ತಿಗೆ ಗ್ರಾ.ಪಂ.ನಲ್ಲಿ ಪ್ಲಾಸ್ಟಿಕ್‌ ಸಂಗ್ರಹಕ್ಕೆ ಗೋದಾಮು ನಿರ್ಮಾಣ ಮಾಡಲಾಗಿದೆ. ಇದಕ್ಕೂ ಹರಿಪ್ರಸಾದ್‌ ಅವರ ಪ್ರಯತ್ನವೇ ಕಾರಣ. ಗ್ರಾಮದಲ್ಲಿ ಸಂಗ್ರಹವಾದ ಪ್ಲಾಸ್ಟಿಕ್‌ ಸಂಗ್ರಹಿಸಲು ಯೋಗ್ಯ ಗೋದಾಮಿನ ವ್ಯವಸ್ಥೆ ಇಲ್ಲ ಎಂಬುದನ್ನು ಜಿಲ್ಲೆಯ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಅವರ ಗಮನಕ್ಕೆ ತಂದಿದ್ದರು. ಎಲ್ಲರ ಸಹಕಾರದಲ್ಲಿ ಗೋದಾಮು ನಿರ್ಮಾಣವಾಯಿತು. ಪ್ಲಾಸ್ಟಿಕ್‌ ವಿರುದ್ಧ ಏಕಾಂಗಿ ಹೋರಾಟ ಮಾಡುತ್ತಿರುವ ಹರಿಪ್ರಸಾದ್‌ ಅವರನ್ನು ಗ್ರಾಮಸ್ಥರು ಸಮ್ಮಾನಿಸಿದ್ದಾರೆ.

ಅಚುಕಟ್ಟಾಗಿ ಸಂಗ್ರಹ
ತಮ್ಮ ಅಂಗಡಿ ವ್ಯವಹಾರದ ಮಧ್ಯೆ ಹರಿಪ್ರಸಾದ್‌ ಪ್ಲಾಸ್ಟಿಕ್‌ ವಸ್ತುಗಳನ್ನು ಸಂಗ್ರಹಿಸುತ್ತಾರೆ. ಮರುಬಳಕೆ ಸಾಧ್ಯವಿದ್ದರೆ ತಾವೇ ಮಾಡುತ್ತಾರೆ. ಮರುಬಳಕೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್‌ ಚೀಲಗಳನ್ನು ಅಂಗಡಿಯಲ್ಲೇ ಅಚ್ಚುಕಟ್ಟಾಗಿ ಸಂಗ್ರಹಿಸುತ್ತಿದ್ದಾರೆ. ಸಂಗ್ರಹ ತುಂಬಿದಾಗ ಅದನ್ನು ಸ್ಥಳೀಯ ಗ್ರಾ.ಪಂ. ಗೋದಾಮಿಗೆ ಸಾಗಿಸುತ್ತಾರೆ. ಗ್ರಾ.ಪಂ. ಅದನ್ನು ವಿಲೇವಾರಿ ಮಾಡುತ್ತದೆ.

Advertisement

ಹೋರಾಟ ನಿರಂತರ
ಪ್ಲಾಸ್ಟಿಕ್‌ ಹಾನಿಯ ಕುರಿತು ಜನರಿಗೆ ತಿಳಿವಳಿಕೆ ನೀಡುತ್ತಿದ್ದೇನೆ. ಪ್ರಾರಂಭದಲ್ಲಿ ಏಕಾಂಗಿ ಹೋರಾಟವಾಗಿತ್ತು. ಒಂದು ವರ್ಷದಿಂದ ಜನರ ಬೆಂಬಲ ಸ್ವಲ್ಪಮಟ್ಟಿಗೆ ಸಿಗುತ್ತಿದೆ. ಗ್ರಾಮಸ್ಥರು ಪ್ಲಾಸ್ಟಿಕ್‌ ಬಳಕೆ ಮಾಡುವುದಿಲ್ಲ ಅಥವಾ ಬಳಸಿದ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿ ಮಾಡುವುದಿಲ್ಲ ಎಂದು  ದೃಢ ಸಂಕಲ್ಪ ಮಾಡಿದ್ದೇ ಆದಲ್ಲಿ ನಮ್ಮ ದೇಶ ಪ್ಲಾಸ್ಟಿಕ್‌ ಮುಕ್ತವಾಗಲು ಸಾಧ್ಯ. ನನ್ನ ಜಾಗೃತಿ ನಿರಂತರವಾಗಿರುತ್ತದೆ.
ಹರಿಪ್ರಸಾದ್‌ ಪೆರ್ಲಂಪಾಡಿ,
   ಜಿನಸು ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next