Advertisement
Related Articles
Advertisement
ಬ್ರಿಟಿಷ್ ಕಾಲದ ಸೌತ್ ಕೆನರಾ ಜಿಲ್ಲೆಯಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವಾಗಿತ್ತು. ನೆರೆ ಭೀತಿ ಕಾರಣದಿಂದ 1927ರಲ್ಲಿ ಉಪ್ಪಿನಂಗಡಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ವರ್ಗಾ ಯಿಸಲಾಗಿತ್ತು. ಅಲ್ಲಿಂದ ಪುತ್ತೂರು ತಾಲೂಕು ಕೇಂದ್ರವಾಗಿ ಇಂದಿಗೆ 93 ವರ್ಷಗಳು ತುಂಬಿವೆ. ಈಗ ಪುತ್ತೂರು ನಗರ ಹತ್ತೂರಿನ ಕೇಂದ್ರವಾಗಿದೆ. ಅನೇಕ ಗ್ರಾಮಗಳು ನಗರಗಳಾಗಿ ಬೆಳೆಯುವ ಹಂತದಲ್ಲಿವೆ. ಒಂದು ಜಿಲ್ಲೆಗೆ ಅಗತ್ಯವಿರುವ ಪೂರಕ ಬೆಳವಣಿಗೆಗಳು ಆಗಿವೆ. ಹಾಗಾಗಿ ಪುತ್ತೂರು ಉಪವಿಭಾಗದ ನಾಗರಿಕರು ಜಿಲ್ಲೆಯ ಬೇಡಿಕೆಯನ್ನು ಮಂಡಿಸತೊಡಗಿದ್ದಾರೆ.
ರಾಮನಗರಕ್ಕಿಂತ ಪುತ್ತೂರು ಹಿರಿದು :
ಈ ಹಿಂದೆ ರಚಿಸಲಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಿಂತ ಅಧಿಕ ವಿಸ್ತೀರ್ಣ, ಜನಸಂಖ್ಯೆಯನ್ನು ಪ್ರಸ್ತಾವಿತ ಪುತ್ತೂರು ಜಿಲ್ಲಾ ವ್ಯಾಪ್ತಿ ಒಳಗೊಂಡಿದೆ ಹೊಂದಿದೆ ಎನ್ನುವುದು ಜಿಲ್ಲಾ ಕೇಂದ್ರದ ಬೇಡಿಕೆಗೆ ಇರುವ ಮುಖ್ಯ ಸಂಗತಿ. ರಾಮನಗರ ಜಿಲ್ಲೆಯ ಜನಸಂಖ್ಯೆ 10.5 ಲಕ್ಷ ಇದೆ. ಚಿಕ್ಕಬಳ್ಳಾಪುರ ಜಿಲ್ಲೆ 10 ಲಕ್ಷ ಜನಸಂಖ್ಯೆ ಹೊಂದಿದೆ. 2011ರ ಜನಗಣತಿ ಪ್ರಕಾರ ಪುತ್ತೂರು ಜಿಲ್ಲಾ ವ್ಯಾಪ್ತಿಗೆ ಸೇರಬಹುದಾದ ಐದು ತಾಲೂಕುಗಳ ಒಟ್ಟು ಜನಸಂಖ್ಯೆ 10.15 ಲಕ್ಷ ಇದೆ. 3,979 ಚದರ ಕಿ. ಮೀ. ವಿಸ್ತೀರ್ಣ ಹೊಂದಿದೆ. ಈ ಅಂಕಿ-ಅಂಶವನ್ನು ಪರಿಗಣಿಸಿದರೆ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಿಂತ ಪ್ರಸ್ತಾವಿತ ಪುತ್ತೂರು ಜಿಲ್ಲೆ ದೊಡ್ಡದಿದೆ. ಪುತ್ತೂರು ತಾಲೂಕನ್ನು ಆವರಿಸಿರುವ ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳವನ್ನು ಸೇರಿಸಿ ಪುತ್ತೂರನ್ನು ಜಿಲ್ಲಾ ಕೇಂದ್ರವನ್ನಾಗಿ ರೂಪಿಸಬಹುದು.
ದ.ಕ. ಜಿಲ್ಲಾ ಕೇಂದ್ರ ಮಂಗಳೂರಿನಿಂದ 56 ಕಿ.ಮೀ. ದೂರದಲ್ಲಿರುವ ಪುತ್ತೂರು ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಕೃಷಿ, ಶಿಕ್ಷಣ, ಕ್ರೀಡೆ ಕ್ಷೇತ್ರಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಆಸ್ಪತ್ರೆಗಳು, ಶೈಕ್ಷಣಿಕ ಕೇಂದ್ರಗಳು, ಬ್ಯಾಂಕ್, ಉಪವಿಭಾಗ ಕಚೇರಿ, ನ್ಯಾಯಾಲಯ ಸೇರಿದಂತೆ ಹಲವು ಸರಕಾರಿ, ಖಾಸಗಿ ಸಂಸ್ಥೆಗಳು ಹೊಂದಿರುವ ಪುತ್ತೂರು ಮಂಗಳೂರಿನ ಅನಂತರದ ಅತಿ ದೊಡ್ಡ ವಾಣಿಜ್ಯ ಪಟ್ಟಣವಾಗಿದೆ.
ಕೇಂದ್ರ ಸ್ಥಾನ :
ಕೇರಳದ ಗಡಿ, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲ ಗಡಿ ಭಾಗಕ್ಕೆ ಅಂಟಿಕೊಂಡಿರುವ ಪುತ್ತೂರು ತಾಲೂಕು ಮಾಣಿ- ಮೈಸೂರು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ರಾಜಧಾನಿಗೆ ಸಂಪರ್ಕ ಕಲ್ಪಿಸುತ್ತಿದೆ. ತನ್ನ ಗಡಿ ವ್ಯಾಪ್ತಿಯ ನಾಲ್ಕು ತಾಲೂಕುಗಳಿಗೆ ಕೇಂದ್ರ ಸ್ಥಾನವಾಗಲು ಅರ್ಹತೆ ಹೊಂದಿದೆ. ಪ್ರಗತಿ ಹಾಗೂ ಸಂಪರ್ಕದ ದೃಷ್ಟಿಯಲ್ಲಿ ಮಂಗಳೂರು ಅನಂತರದ ಸ್ಥಾನದಲ್ಲಿರುವ ಪುತ್ತೂರು ಗ್ರಾಮಾಂತರ ಜಿಲ್ಲೆಯಾಗಲು ಎಲ್ಲ ಅರ್ಹತೆ ಹೊಂದಿದೆ.
ಜಿಲ್ಲೆಯ ಎರಡನೆ ಮಹಿಳಾ ಠಾಣೆ, ಪುತ್ತೂರು ಸುಳ್ಯ, ಕಡಬ, ಬೆಳ್ತಂಗಡಿಯನ್ನು ಒಳಗೊಂಡ ಸಹಾಯಕ ಆಯುಕ್ತರ ಉಪವಿಭಾಗ ಕಚೇರಿ, 3 ತಾಲೂಕು ವ್ಯಾಪ್ತಿಗೆ ಸೇರಿರುವ ಆರ್‌ಟಿಓ ಕಚೇರಿ, ಪ್ರಾಥಮಿಕ ಶಿಕ್ಷಣದಿಂದ ಎಂಜಿನಿಯರ್ ತನಕ ವ್ಯಾಸಾಂಗದ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ದಿನವೊಂದಕ್ಕೆ 20 ಸಾವಿರಕ್ಕೂ ಅಧಿಕ ಮಂದಿ ವಿವಿಧ ವ್ಯವಹಾರಗಳಿಗಾಗಿ ನಗರಕ್ಕೆ ಪ್ರವೇಶಿಸುತ್ತಾರೆ. ಕಾಸರಗೋಡು, ಕೊಡಗು ಜಿಲ್ಲೆಯಿಂದಲೂ ವಾಣಿಜ್ಯ, ಶಿಕ್ಷಣ, ವೈದ್ಯಕೀಯ ನೆಲೆಯಲ್ಲಿ ಪುತ್ತೂರನ್ನು ಆಶ್ರಯಿಸುವವರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದೆ.
ಐದು ತಾಲೂಕಿನ ವ್ಯಾಪ್ತಿ :
ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳನ್ನು ಒಳಗೊಂಡ ಪುತ್ತೂರು ಗ್ರಾಮಾಂತರ ಜಿಲ್ಲೆ ರಚಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಪೂರಕವಾಗಿ ಆಗಬೇಕಾದ ಅಗತ್ಯತೆಗಳನ್ನು ಈಡೇರಿಸಲು ಆದ್ಯತೆ ನೀಡಲಾಗಿದೆ.–ಸಂಜೀವ ಮಠಂದೂರು, ಶಾಸಕರು, ಪುತ್ತೂರು
-ಕಿರಣ್ ಪ್ರಸಾದ್ ಕುಂಡಡ್ಕ